ಬೆಂಗಳೂರು: ಶಿವಾಜಿನಗರದ ತಿಮ್ಮಯ್ಯ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯನ್ನು (ಪೂರ್ ಹೌಸ್) ದುರಸ್ತಿ ಹೆಸರಿನಲ್ಲಿ ಮೂರು ವರ್ಷಗಳಿಂದ ಮುಚ್ಚಿದ್ದು, ಶೀಘ್ರವೇ ಪುನರಾರಂಭಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ (ಎಐಎಂಎಸ್) ಸದಸ್ಯರು ಶುಕ್ರವಾರ ಬಿಬಿಎಂಪಿ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರಿಗೆ ಮನವಿ ಸಲ್ಲಿಸಿದರು.
‘ಆಸ್ಪತ್ರೆಯಿರುವ ವಾರ್ಡ್ ಸಂಖ್ಯೆ 91ರಲ್ಲಿ ಕೆಳ ಮಧ್ಯಮ ವರ್ಗದವರು ಮತ್ತು ಬಡ ಕೂಲಿಕಾರ್ಮಿಕರು ಬಹುಸಂಖ್ಯೆಯಲ್ಲಿದ್ದಾರೆ. ಸುತ್ತಮುತ್ತಲಿನ ನಿವಾಸಿಗಳು, ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಚಿಕಿತ್ಸೆಗಾಗಿ ಬಹಳ ಹಿಂದಿನಿಂದಲೂ ಇದೇ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಆಸ್ಪತ್ರೆ ಮುಚ್ಚಿದಾಗಿನಿಂದ ಅನಿವಾರ್ಯವಾಗಿ ದುಬಾರಿ ಹಣ ತೆತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ’ ಎಂದು ಸಂಘಟನೆಯ ಸದಸ್ಯರು ವಿವರಿಸಿದರು.
‘ಹತ್ತಿರದ ಬೌರಿಂಗ್ ಆಸ್ಪತ್ರೆಯಲ್ಲೂ ಹೆರಿಗೆಯ ಸೌಕರ್ಯಗಳಿಲ್ಲ. ಹೀಗಾಗಿ, ಇಲ್ಲಿನ ನಿವಾಸಿಗಳು ಚಿಕಿತ್ಸೆಗಾಗಿ ದೂರದ ಗೋಶಾ ಆಸ್ಪತ್ರೆಗೋ ಅಥವಾ ಹಲಸೂರಿನ ಸರ್ಕಾರಿ ಆಸ್ಪತ್ರೆಗೋ ಹೋಗಬೇಕಿದೆ. ಹೆರಿಗೆ ನೋವಿನಿಂದ ಬಳಲುವ ಗರ್ಭಿಣಿಯರು ಸರ್ಕಾರಿ ಆಸ್ಪತ್ರೆಗಾಗಿ ಹುಡುಕಾಡುವ ಸ್ಥಿತಿ ನಿಜಕ್ಕೂ ಶೋಚನೀಯ’ ಎಂದು ತಿಳಿಸಿದರು.
‘ಪೂರ್ ಹೌಸ್ ಆಸ್ಪತ್ರೆಯಂತೆ, ಸ್ಥಗಿತಗೊಂಡಿರುವ ಯಶವಂತಪುರದ ಹೆರಿಗೆ ಆಸ್ಪತ್ರೆ ಪುನರ್ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಬೌರಿಂಗ್ ಆಸ್ಪತ್ರೆಯಲ್ಲೂ ಹೆರಿಗೆ ವಿಭಾಗವನ್ನು ಮತ್ತೆ ಆರಂಭಿಸಬೇಕು’ ಎಂದು ಒತ್ತಾಯಿಸಿದರು.
ಎಐಎಂಎಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಶಾಂತಾ ಎ., ಸಂಘಟನೆಯ ಹೇಮಾವತಿ, ಅನುರಾಧಾ, ನಿರ್ಮಲಾ ಮತ್ತು ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.