ADVERTISEMENT

ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ; ‘ಗಾಂಧಿ’ ಸ್ಮರಣೆ

ಬಾಪೂಜಿಗೆ ನಮನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2019, 19:28 IST
Last Updated 14 ಜನವರಿ 2019, 19:28 IST
ಲಾಲ್‌ಬಾಗ್‌ ಗಾಜಿನಮನೆಯಲ್ಲಿ ಸಬರಮತಿ ಆಶ್ರಮದ ಮಾದರಿ ನಿರ್ಮಾಣ ಭರದಿಂದ ಸಾಗಿದೆ
ಲಾಲ್‌ಬಾಗ್‌ ಗಾಜಿನಮನೆಯಲ್ಲಿ ಸಬರಮತಿ ಆಶ್ರಮದ ಮಾದರಿ ನಿರ್ಮಾಣ ಭರದಿಂದ ಸಾಗಿದೆ   

ಬೆಂಗಳೂರು:ಸಸ್ಯಕಾಶಿ ಲಾಲ್‌ ಬಾಗ್‌ನಲ್ಲಿ ಗಣರಾಜ್ಯೋತ್ಸವದ ನಿಮಿತ್ತ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಭರದಿಂದ ಸಿದ್ಧತೆಗಳು ನಡೆದಿವೆ. ಅಂದ ಹಾಗೆ ಈ ಬಾರಿಯ ಪ್ರದರ್ಶನ ರಾಷ್ಟ್ರಪಿತನಿಗೆ ಅರ್ಪಣೆ.

ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ರಾಜ್ಯ ತೋಟಗಾರಿಕೆ ಇಲಾಖೆಯು 209ನೇ ಫಲಪುಷ್ಪ ಪ್ರದರ್ಶನದಲ್ಲಿ ಗಾಂಧೀಜಿ ಬದುಕಿನ ಪ್ರಮುಖ ಘಟನೆಗಳನ್ನು ಹೂವಿನ ರೂಪದಲ್ಲಿ ಕಟ್ಟಿಕೊಡಲಿದೆ. ಈ ಸಲುವಾಗಿ ಪುಣೆ, ಊಟಿ ಸೇರಿದಂತೆ ವಿವಿಧೆಡೆಗಳಿಂದ ಹೂಗಳನ್ನು ತರಿಸಿಕೊಳ್ಳಲಾಗುತ್ತಿದೆ.

‘ಗಾಜಿನ ಮನೆಯ ಮಧ್ಯ ಭಾಗದಲ್ಲಿ ಸಬರಮತಿ ಆಶ್ರಮದ ಪ್ರತಿರೂಪ ನಿರ್ಮಾಣಗೊಳ್ಳುತ್ತಿದ್ದು, ಇದು 35 ಅಡಿ ಉದ್ದ, 20 ಅಡಿ ಅಗಲ ಹಾಗೂ 16 ಅಡಿ ಎತ್ತರವಿರಲಿದೆ. ಒಂದು ಬಾರಿಗೆ 1.20 ಲಕ್ಷ ಗುಲಾಬಿ ಹೂಗಳು (ಕೆಂಪು, ಕೇಸರಿ ಬಣ್ಣ) ಹಾಗೂ ಸುಮಾರು 1.60 ಲಕ್ಷ ಸೇವಂತಿಗೆ ಹೂವುಗಳನ್ನು ಬಳಸಲಾಗುತ್ತಿದೆ’ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

‘ಪ್ರದರ್ಶನ ಆರಂಭವಾದ ಐದು ದಿನಗಳ ನಂತರ ಹೂವುಗಳು ಬಾಡುತ್ತವೆ. ಹೀಗಾಗಿ ಮತ್ತೆ ಇಷ್ಟೇ ಸಂಖ್ಯೆಯ ಹೂವುಗಳನ್ನು ಮರು ಜೋಡಿಸಲಾಗುವುದು. ಹೀಗಾಗಿ ಒಟ್ಟಾರೆ 2.40 ಲಕ್ಷ ಗುಲಾಬಿ, 3.20 ಲಕ್ಷ ಸೇವಂತಿಗೆ ಹೂವುಗಳನ್ನು ಸಬರಮತಿ ಆಶ್ರಮದ ಪ್ರತಿರೂಪ ನಿರ್ಮಾಣಕ್ಕೆ ಬಳಲಾಗುವುದು’ ಎಂದರು.

ಗಾಜಿನ ಮನೆ ಮಧ್ಯಭಾಗದಲ್ಲಿ ಸಬರಮತಿ ಆಶ್ರಮ, ನಂತರ ಧ್ಯಾನಾಸಕ್ತ ಗಾಂಧಿಯ ಮೂರ್ತಿ, ಕೊನೆಯಲ್ಲಿ ರಾಜ್‌ಘಾಟ್‌ ಪ್ರತಿರೂಪಗಳು ನಿರ್ಮಾಣಗೊಳ್ಳಲಿವೆ. ಗಾಜಿನ ಮನೆಯ ಎಡಭಾಗದಲ್ಲಿ10 ಅಡಿ ಅಗಲ, 10 ಅಡಿ ಉದ್ದ ಹಾಗೂ 12 ಅಡಿ ಎತ್ತರದ ಬಾಪು ಕುಟೀರ ನಿರ್ಮಾಣವಾಗಲಿದೆ. ಅದರ ಪಕ್ಕ ಊಟಿಯ ಶೀತವಲಯದ ಹೂಗಳು ಇರಲಿವೆ. ಬಲಭಾಗದಲ್ಲಿ ವರ್ಟಿಕಲ್‌ ಉದ್ಯಾನದ ಮಾದರಿಗಳು ಹಾಗೂ‘ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಮಾತನಾಡಬೇಡ’ ಎಂಬ ಸಂದೇಶ ಸಾರುವಮೂರು ಕೋತಿಗಳೂ ರೂಪ ತಾಳಲಿವೆ.

ಗಾಜಿನ ಮನೆಯ ಹಿಂಭಾಗದಲ್ಲಿ ‘ಬಾ–ಬಾಪು (ಕಸ್ತೂರಿ ಬಾ ಮತ್ತು ಬಾಪು)’‍ ಪ್ರತಿಮೆಗಳು ಇದರ ಹಿಂದೆ ದಂಡಿ ಸತ್ಯಾಗ್ರಹದ ಚಿತ್ರಣ ಇರಲಿದೆ.

ಗಾಜಿನ ಮನೆಯ 4 ಮೂಲೆಗಳಲ್ಲಿಡಾರ್ಜಿಲಿಂಗ್‌ನ ಆರ್ಕಿಡ್‌ಗಳು, ಲಾಲ್‌ಬಾಗ್‌ ಹಾಗೂ ಕಬ್ಬನ್‌ ಉದ್ಯಾನ ಸೇರಿದಂತೆ ವಿವಿಧ ಖಾಸಗಿ ನರ್ಸರಿಗಳ ಹೂಗಳ ಪ್ರದರ್ಶನ ನಡೆಯಲಿದೆ. ಹೊರಭಾಗದಲ್ಲಿ ಗಾಂಧಿಸಂದೇಶಗಳು, ಗಾಂಧಿ ಕುರಿತು ಗಣ್ಯರ ಸಂದೇಶಗಳ ಫಲಕಗಳು ಬಿತ್ತರಗೊಳ್ಳಲಿವೆ.ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘಗಳ ನೇತೃತ್ವದಲ್ಲಿ ಈ ಪ್ರದರ್ಶನ ನಡೆಯಲಿದೆ. ಜ.18 ರಿಂದ 27ರವೆಗೆ ಪ್ರದರ್ಶನ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.