ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶಾಸನಬದ್ಧ ಸಂಸ್ಥೆಯಾಗಿದ್ದು, ರಿಯಲ್ ಎಸ್ಟೇಟ್ ಯೋಜನೆಗಳ ಪ್ರವರ್ತಕವಲ್ಲ. ಹಾಗಾಗಿ ಬಿಡಿಎ ಅನ್ನು ತನ್ನ ಅಧಿಕಾರ ವ್ಯಾಪ್ತಿಯಿಂದ ಹೊರಗಿಡಬೇಕು’ ಎಂದು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನು (ಕೆ–ರೇರಾ) ಒತ್ತಾಯಿಸಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ತನ್ನ ವಿರುದ್ಧ ರೇರಾದಲ್ಲಿ ಸಲ್ಲಿಸಿರುವ ಅರ್ಜಿಗೆ ಬಿಡಿಎ ಈ ರೀತಿ ಪ್ರತಿಕ್ರಿಯಿಸಿದೆ.
ಬಿಡಿಎ ಕೈಗೆತ್ತಿಕೊಂಡ ಯೋಜನೆಗಳು ವಾಣಿಜ್ಯ ಉದ್ದೇಶದ್ದಲ್ಲ. ಆದ್ದರಿಂದ ಅವುಗಳನ್ನು ರಿಯಲ್ ಎಸ್ಟೇಟ್ ಯೋಜನೆಗಳೆಂದು ಕರೆಯಲು ಆಗುವುದಿಲ್ಲ ಎಂದು ವಾದಿಸಿರುವ ಬಿಡಿಎ, ಇದು ರೇರಾ ಕಾಯ್ದೆಯಲ್ಲಿ ಹೇಳಿರುವಂತೆ 'ಪ್ರವರ್ತಕ'ದ ವ್ಯಾಖ್ಯಾನಕ್ಕೆ ಹೊಂದಿಕೆ ಆಗುವುದಿಲ್ಲ ಎಂದು ತಿಳಿಸಿದೆ.
‘ಬಿಡಿಎ ಕಾಯ್ದೆ ಅಡಿ ನಗರ ಯೋಜನೆಗಳನ್ನು ರೂಪಿಸಲಾಗಿದ್ದು, ವಸತಿ ಬಡಾವಣೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ನಿವೇಶನಗಳನ್ನು ನೀಡಲಾಗುತ್ತದೆ. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಹೆಚ್ಚಿನ ರಿಯಾಯಿತಿ ದರದಲ್ಲಿ ನಿವೇಶನಗಳನ್ನು ನೀಡುತ್ತದೆ. ಆದರೆ, ಡೆವಲಪರ್‌ಗಳು ಲಾಭದ ಉದ್ದೇಶದಿಂದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ. ಆದ್ದರಿಂದ, ರೇರಾ ಕಾಯ್ದೆ ನಿಬಂಧನೆಗಳನ್ನು ಪ್ರಾಧಿಕಾರಕ್ಕೆ ಅನ್ವಯಿಸಲು ಸಾಧ್ಯವಿಲ್ಲ’ ಎಂದು ಬಿಡಿಎ ವಾದಿಸಿದೆ.
ನಿವೇಶನದಾರರು ಎದುರಿಸುವ ಯಾವುದೇ ಸಮಸ್ಯೆಗಳನ್ನು ಬಿಡಿಎ ಕಾಯ್ದೆಯ ಪ್ರಕಾರ ಮಾತ್ರ ಪರಿಹರಿಸಬೇಕು ಮತ್ತು ಅವರಿಗೆ ರೇರಾ ಕಾಯ್ದೆಯನ್ನು ಜಾರಿಗೊಳಿಸುವ ಹಕ್ಕಿಲ್ಲ ಎಂದು ಬಿಡಿಎ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.