ಬೆಂಗಳೂರು: ಸೌದಿ ಅರೇಬಿಯಾದಲ್ಲಿ ಸುಮಾರು ಹತ್ತು ತಿಂಗಳು ಊಟ, ವಸತಿಗಾಗಿ ಪರದಾಡಿದ್ದ, ರಾಮನಗರದ ಯುವಕ ಮೊಹಮ್ಮದ್ ಅಶ್ಪಾಕ್ ಅವರನ್ನು ಕರ್ನಾಟಕದ ಅನಿವಾಸಿ ಭಾರತೀಯ ಸಮಿತಿ ಸ್ವದೇಶಕ್ಕೆ ಕರೆತಂದಿದೆ.
ಸಹೋದರಿ ಮದುವೆಗಾಗಿ ಹಣ ಸಂಪಾದಿಸಲು ಸುಮಾರು ₹2 ಲಕ್ಷ ವೆಚ್ಚ ಮಾಡಿ ಏಜೆಂಟ್ ಮೂಲಕ ಸೌದಿ ಅರೇಬಿಯಾಗೆ ತೆರಳಿದ್ದ. ಅಲ್ಲಿ ಸಮಸ್ಯೆಗೆ ಸಿಲುಕಿದ್ದ ಮೊಹಮ್ಮದ್ ಅಶ್ಪಾಕ್ ಅವರು ಆ ದೇಶದಲ್ಲಿ ನರಕಯಾತನೆ ಅನುಭವಿಸಿದ್ದರು. ಅವರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವಲ್ಲಿ ಕರ್ನಾಟಕದ ಅನಿವಾಸಿ ಭಾರತೀಯ ಸಮಿತಿ ಯಶಸ್ವಿ ಆಗಿದೆ.
ಶಿವಾಜಿನಗರದ ಜಾನ್ಸನ್ ಮಾರುಕಟ್ಟೆಯ ಮೊಹಮ್ಮದ್ ಫೀರ್ ಎಂಬುವವರು ಮೊಹಮ್ಮದ್ ಅಶ್ಪಾಕ್‌ನಿಗೆ ಸೌದಿ ಅರೇಬಿಯಾದಲ್ಲಿ ಅಮೆಜಾನ್ ಕಂಪನಿಯಲ್ಲಿ ಸಹಾಯಕ ಹುದ್ದೆ ಕೊಡಿಸುವುದಾಗಿ ₹1 ಲಕ್ಷ ಪಡೆದಿದ್ದರು. ಬಳಿಕ ಸೆಪ್ಟೆಂಬರ್‌ನಲ್ಲಿ ಮುಂಬೈಗೆ ಕರೆಸಿಕೊಂಡು ಒಂದು ತಿಂಗಳು ಮೊಹಮ್ಮದ್ ಅಶ್ಪಾಕ್ ಅವರನ್ನು ಇರಿಸಿಕೊಂಡಿದ್ದರು. ಅಲ್ಲಿಂದ ಟ್ರಾವೆಲರ್ ಎಂದು ಸೌದಿ ಅರೇಬಿಯಾಗೆ ಕಳುಹಿಸಿದ್ದು, ಅಲ್ಲಿ ಎರಡು ತಿಂಗಳು ಕೆಲಸ, ಸಂಬಳವಿಲ್ಲದೆ ಕಾಯಿಸಿದ್ದರು ಎನ್ನಲಾಗಿದೆ. ಹೇಳಿದ್ದ ಕಂಪನಿಯಲ್ಲಿ ಕೆಲಸ ಕೊಡಿಸದೇ ಕೊನೆಗೆ ಯಾವುದೋ ಸಂಸ್ಥೆಯಲ್ಲಿ ಕೊಡಿಸಲಾಗಿತ್ತು. ಹೆಚ್ಚಿನ ಸಂಪಾದನೆಯಿಲ್ಲದೆ ಮೊಹಮ್ಮದ್ ಅಶ್ಪಾಕ್ ಅವರು ತೊಂದರೆಗೆ ಒಳಗಾಗಿದ್ದರು.
‘ಕುಟುಂಬದವರಿಗೆ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದರು. ಕೆಲವು ದಾಖಲೆಗಳಿಲ್ಲದ ಕಾರಣಕ್ಕೆ ಅಲ್ಲಿನ ಸ್ಥಳೀಯರೂ ಅಶ್ಪಾಕ್ ಅವರಿಗೆ ನೆರವು ನೀಡಿರಲಿಲ್ಲ. ಬಳಿಕ ಜೆಡ್ಡಾಗೆ ಬಂದು ಮಸೀದಿಯೊಂದರಲ್ಲಿ ವಾಸ್ತವ್ಯ ಮಾಡಿದ್ದರು. ಅಲ್ಲಿನ ಕನ್ನಡ ಸಂಘದ ಸದಸ್ಯರಾದ ಜಲಾಲ್ ಬೇಗ್ ಅವರಿಗೆ ವಿಷಯ ತಿಳಿಸಿದ್ದರು. ನಂತರ ಜೆಡ್ಡಾ ಕನ್ನಡ ಸಂಘದ ಮಾಜಿ ಅಧ್ಯಕ್ಷ ಮಹಮ್ಮದ್ ಸೈಫ್ ಉದ್ದಿನ್ ಅವರು ಕರ್ನಾಟಕದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ ಅವರನ್ನು ಸಂಪರ್ಕಿಸಿದ್ದರು. ನಂತರ, ಮೊಹಮ್ಮದ್ ಅಶ್ಪಾಕ್ ಅವರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆಸಿಕೊಳ್ಳಲಾಗಿತ್ತು.
‘ಕಾನ್ಸುಲ್ ಜನರಲ್ ಅವರನ್ನು ಸಂಪರ್ಕಿಸಿ ಮೊಹಮ್ಮದ್ ಅಶ್ಪಾಕ್ ಅವರನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನ ಮಾಡಲಾಯಿತು. ಕೆಲವು ಏಟೆಂಟ್‌ಗಳು ಈ ರೀತಿಯಾಗಿ ವರ್ಕ್ ಪರ್ಮಿಟ್ ಸೇರಿದಂತೆ ಟ್ರಾವೆಲರ್ ಎಂದು ತೋರಿಸಿ ಹೊರದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುವ ಕೆಲಸ ಮಾಡುತ್ತಿದ್ದಾರೆ. ಎಚ್ಚರಿಕೆ ವಹಿಸಬೇಕು’ ಎಂದು ಕರ್ನಾಟಕದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಕ್ಟೋಬರ್‌ನಿಂದ ಈ ರೀತಿಯ 18 ಪ್ರಕರಣಗಳು ದಾಖಲಾಗಿವೆ. ಕಾಂಬೋಡಿಯಾ ಮತ್ತು ವಿಯೆಟ್ನಾಂನಿಂದ ಮೂವರು, ಕೊಲ್ಲಿ ರಾಷ್ಟ್ರಗಳಿಂದ 15 ಮಂದಿಯನ್ನು ರಕ್ಷಿಸಿ, ಕರೆ ತರಲಾಗಿದೆ ಎಂದು ಮಾಹಿತಿ ನೀಡಿದರು.
‘ವಿದೇಶದಲ್ಲಿ ಪುತ್ರ ಸಮಸ್ಯೆ ಸಿಲುಕಿದ್ದಾನೆ ಎಂದು ಏಜೆಂಟ್ ಮಹಮ್ಮದ್ ಪೀರ್ ಅವರಿಗೆ ಅನೇಕ ಬಾರಿ ತಿಳಿಸಿದ್ದೆ. ಅವರು ಗಮನ ಹರಿಸಲಿಲ್ಲ. ಫೆಬ್ರುವರಿಯಲ್ಲಿ ಅಶೋಕ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಅದೂ ಸಹ ಪ್ರಯೋಜನ ಆಗಲಿಲ್ಲ. ಜುಲೈ 8ರಂದು ಆರತಿ ಕೃಷ್ಣ ಅವರನ್ನು ಭೇಟಿ ಮಾಡಿ, ಮಾಹಿತಿ ನೀಡಿದ್ದೆ. ಜುಲೈ 14ರಂದು ಆತ ಮನೆಗೆ ಬಂದಿದ್ದಾನೆ’ ಎಂದು ಯುವಕ ತಾಯಿ ನೂರ್‌ಬಾನು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.