ADVERTISEMENT

ಹಕ್ಕುಪತ್ರದ ನಿರೀಕ್ಷೆಯಲ್ಲಿ ಸಾಕಮ್ಮನದೊಡ್ಡಿ ನಿವಾಸಿಗಳು

ನಾಲ್ಕು ದಶಕಗಳಿಂದ ಕಾಯುತ್ತಿದ್ದಾರೆ ಗ್ರಾಮಸ್ಥರು * ವಸತಿ ಸೌಲಭ್ಯ ಇನ್ನೂ ಮರೀಚಿಕೆ

ಚಿಕ್ಕ ರಾಮು
Published 31 ಮೇ 2020, 20:35 IST
Last Updated 31 ಮೇ 2020, 20:35 IST
ಸಾಕಮ್ಮನದೊಡ್ಡಿಯಲ್ಲಿರುವ ಗುಡಿಸಲುಗಳು
ಸಾಕಮ್ಮನದೊಡ್ಡಿಯಲ್ಲಿರುವ ಗುಡಿಸಲುಗಳು   

ಬೆಂಗಳೂರು: ರಾಜ್ಯ ರಾಜಧಾನಿಯಿಂದ ಕೇವಲ 25 ಕಿ.ಮೀ. ದೂರದಲ್ಲಿರುವ ದಿಣ್ಣೇಪಾಳ್ಯ ಗ್ರಾಮದ ಸಾಕಮ್ಮನದೊಡ್ಡಿಯ ನಿವಾಸಿಗಳು 40 ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿರುವ ಇವರಿಗೆ ಹಕ್ಕುಪತ್ರವೂ ಸಿಕ್ಕಿಲ್ಲ. ವಸತಿ ಸೌಲಭ್ಯವೂ ದೊರೆತಿಲ್ಲ.

ಬೆಂಗಳೂರು ದಕ್ಷಿಣ ತಾಲ್ಲೂಕು ದಿಣ್ಣೇಪಾಳ್ಯ ಗ್ರಾಮದ ಸರ್ವೆ ನಂ.46ರಲ್ಲಿರುವ ಸರ್ಕಾರದ ಗೋಮಾಳ ಜಮೀನಿನ ಸಾಕಮ್ಮನದೊಡ್ಡಿಯಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಮಳೆ ಬಂದರೆ ಕೊಚ್ಚಿ ಹೋಗುವಂತಹ ಗುಡಿಸಲುಗಳಲ್ಲಿ ಇರುವ ಇವರು, ಜೀವ ಕೈಯಲ್ಲಿ ಹಿಡಿದುಕೊಂಡು ದಿನ ದೂಡುತ್ತಿದ್ದಾರೆ.

ಇಲ್ಲಿ ವಾಸಿಸುತ್ತಿರುವ ಹೆಚ್ಚಿನವರು ಗಿರಿಜನ (ಪರಿಶಿಷ್ಟ ಪಂಗಡ) ಜನಾಂಗದವರು. ಅವಿದ್ಯಾವಂತರೇ ಹೆಚ್ಚಾಗಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಲಾಕ್‌ಡೌನ್‌ ಸಂದರ್ಭದಲ್ಲಿ ಸರಿಯಾಗಿ ಕೂಲಿಯೂ ಇಲ್ಲದೆ ಪರದಾಡುತ್ತಿದ್ದಾರೆ.

ADVERTISEMENT

‘ಹಕ್ಕುಪತ್ರ ನೀಡಿ ಎಂದು ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ, ಅಧಿಕಾರಿಗಳಿಗೆ ಹಲವು ಬಾರಿ ಅರ್ಜಿ ಕೊಟ್ಟಿದ್ದೇವೆ. ಕ್ಷೇತ್ರದ ಹಿಂದಿನ ಶಾಸಕರಾಗಿದ್ದಆರ್.ಅಶೋಕ್, ಶೋಭಾ ಕರಂದ್ಲಾಜೆ ಹಾಗೂ ಈಗಿನ ಶಾಸಕ ಹಾಗೂ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೂ ಮನವಿ ಮಾಡಿದ್ದೇವೆ. ಆದರೂ ಹಕ್ಕುಪತ್ರ ಸಿಕ್ಕಿಲ್ಲ’ ಎಂದು ಮಹಿಳೆಯರು ಹೇಳುತ್ತಾರೆ.

‘ಸರ್ಕಾರಿ ಜಮೀನಿನಲ್ಲಿ ವಾಸಿಸುವ ಮನೆಯಿಲ್ಲದ ಪ್ರತಿಯೊಬ್ಬರೂ 94ಸಿಸಿ ಅಡಿಯಲ್ಲಿ ಹಕ್ಕುಪತ್ರ ನೀಡಲೇಬೇಕೆಂದು ಸರ್ಕಾರ ತೀರ್ಮಾನಿಸಿದೆ. ಬೆಂಗಳೂರು ನಗರ ಸುತ್ತ–ಮುತ್ತ ಗುಡಿಸಲಿನಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡಲಾಗಿದೆ. ನಮಗೆ ಮಾತ್ರ ಈವರೆಗೆ ಸಿಕ್ಕಿಲ್ಲ’ ಎಂದು ನಿವಾಸಿಗಳು ದೂರುತ್ತಾರೆ.

‘ಸಾಕಮ್ಮನದೊಡ್ಡಿಯು ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವುದರಿಂದ ಈ ಭೂಮಿಗೆ ಬಂಗಾರದ ಬೆಲೆ ಇದೆ. ಬಡವರನ್ನು ಇಲ್ಲಿಂದ ಎತ್ತಂಗಡಿ ಮಾಡಿಸಿ, ಈ ಜಾಗವನ್ನು ಕಬಳಿಸಲು ಪ್ರಭಾವಿಗಳು ಹವಣಿಸುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮಸ್ಥರು ಆರೋಪಿಸುತ್ತಾರೆ.

ಇಲ್ಲಿನ ಪ್ರತಿಯೊಂದು ಕುಟುಂಬಕ್ಕೂ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಹಾಗೂ ಆಧಾರ್‌ ಗುರುತಿನ ಚೀಟಿ ನೀಡಲಾಗಿದೆ. ಜಿಲ್ಲಾ ಪಂಚಾಯತಿ ಸದಸ್ಯ ಕೆ.ಎಸ್.ಪರ್ವೀಜ್ ಸ್ವಂತ ಹಣದಿಂದ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸಣ್ಣ ನೀರಿನ ಟ್ಯಾಂಕ್‌ ನಿರ್ಮಿಸಿಕೊಟ್ಟಿದ್ದಾರೆ. ಅಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿದೆ. ಈ ಮನೆಗಳ ವಿದ್ಯುತ್‌ ಶುಲ್ಕವನ್ನು 15 ವರ್ಷಗಳಿಂದ ಪರ್ವೀಜ್‌ ಅವರೇ ಭರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.