ADVERTISEMENT

ರೆಸ್ಟೋರೆಂಟ್‌ಗಳಿಗೆ ಸುಣ್ಣ ದರ್ಶಿನಿಗಳಿಗೆ ಬೆಣ್ಣೆ!

ಬಂದ್ ಆದೇಶದ ವಿರುದ್ಧ ಹೋಟೆಲ್‌ ಸಂಘದ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 20:30 IST
Last Updated 21 ಮಾರ್ಚ್ 2020, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕೋವಿಡ್‌–19’ ಹಿನ್ನೆಲೆಯಲ್ಲಿ ಎಲ್ಲ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳನ್ನು ಮಾರ್ಚ್‌ 31ರವರೆಗೆ ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರದ ಆದೇಶದಲ್ಲಿನ ಕೆಲವು ಅಂಶಗಳ ಬಗ್ಗೆ ಕರ್ನಾಟಕ ಹೋಟೆಲ್‌ ಮತ್ತು ಉಪಾಹಾರ ಮಂದಿರಗಳ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

‘ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಬಂದ್ ಆದೇಶ ಸಣ್ಣ ದರ್ಶಿನಿಗಳಿಗೆ ಅನ್ವಯಿಸುವುದಿಲ್ಲ ಎಂದು ಸರ್ಕಾರ ಹೇಳಿದೆ. ಅಲ್ಲದೆ, ಪಾರ್ಸೆಲ್‌ ಒಯ್ಯುವ ಮತ್ತು ನಿಂತು ತಿನ್ನುವ ವ್ಯವಸ್ಥೆ ಇರುವ ಕಡೆಯೂ ಈ ಆದೇಶ ಅನ್ವಯಿಸುವುದಿಲ್ಲ ಎಂಬ ಆದೇಶವನ್ನು ಮಾರ್ಪಾಡುಗೊಳಿಸಬೇಕು’ ಎಂದುಸಂಘದ ರಾಜ್ಯಘಟಕದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಒತ್ತಾಯಿಸಿದ್ದಾರೆ.

‘ದರ್ಶಿನಿಗಳಿಗೆ ಮಾತ್ರ ಈ ವಿನಾಯ್ತಿ ನೀಡಿದರೆ, ದೊಡ್ಡ ಹೋಟೆಲ್ ಮತ್ತು ರೆಸ್ಟೋರೆಂಟ್‌ನವರು ಕುರ್ಚಿ, ಟೇಬಲ್‌ ಎಲ್ಲ ತೆಗೆದು ದರ್ಶಿನಿ ಮಾದರಿ ಸೇವೆ ನೀಡಬೇಕಾಗುತ್ತದೆ. ಸರ್ಕಾರವು ದರ್ಶಿನಿ ಮತ್ತು ರೆಸ್ಟೋರೆಂಟ್‌ಗಳಿಗೆ ಏಕರೂಪದ ಷರತ್ತು ವಿಧಿಸಬೇಕು’ ಎಂದರು.

ADVERTISEMENT

‘ರೆಸ್ಟೋರೆಂಟ್‌ನಲ್ಲಿ ಪಾರ್ಸೆಲ್‌ ತೆಗೆದುಕೊಳ್ಳುವವರು ಅಲ್ಲೇ ಇರುವ ಕುರ್ಚಿ, ಟೇಬಲ್‌ ಬಳಸಿ ಊಟ–ಉಪಾಹಾರ ಸೇವಿಸುತ್ತಾರೆ. ನೀರನ್ನೂ ಕುಡಿಯುತ್ತಾರೆ. ಬೇಡ ಎನ್ನಲು ಆಗುವುದಿಲ್ಲ. ಆಗ ಸರ್ಕಾರದ ಈ ಆದೇಶಕ್ಕೆ ಅರ್ಥವೇ ಇರುವುದಿಲ್ಲ’ ಎಂದು ಅವರು ಅಭಿಪ್ರಾಯ ಪಟ್ಟರು.

‘ಸಣ್ಣ ದರ್ಶಿನಿಗಳಲ್ಲಿ ವ್ಯಕ್ತಿಗಳ ನಡುವೆ ಆರು ಅಡಿ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ದರ್ಶಿನಿಗಳು ಅಥವಾ ಚಿಕ್ಕಹೋಟೆಲುಗಳು ಇರುವುದೇ 8ರಿಂದ 10 ಅಡಿ ಅಗಲ ಇರುತ್ತವೆ. ಇಂಥದ್ದರಲ್ಲಿ ಈ ನಿಯಮ ಪಾಲನೆ ಸಾಧ್ಯವೇ’ ಎಂದರು.

‘ಸೇವೆ (ಸರ್ವಿಸ್‌) ನೀಡುವ ರೆಸ್ಟೋರೆಂಟ್‌ ಅಥವಾ ದೊಡ್ಡ ಹೋಟೆಲ್‌ಗಳು ಪರವಾನಗಿ ಶುಲ್ಕವೆಂದು ₹10 ಸಾವಿರ ಕಟ್ಟಬೇಕು. ಸರ್ವಿಸ್‌ ನೀಡದ ದರ್ಶಿನಿಗಳು ₹5 ಸಾವಿರ ಪರವಾನಗಿ ಶುಲ್ಕ ಕಟ್ಟುತ್ತವೆ. ₹10 ಸಾವಿರ ಕಟ್ಟಿ, ಸರ್ವಿಸ್‌ ನೀಡಬೇಡಿ ಎಂದರೆ ಕಷ್ಟವಾಗುತ್ತದೆ.ಸರ್ಕಾರದ ಆದೇಶ ದರ್ಶಿನಿಗಳಿಗೆ ಪೂರಕವಾಗಿಯೇ ಇರುತ್ತದೆ ಎಂದರೆ ಎಲ್ಲರೂ ದರ್ಶಿನಿಗಳನ್ನೇ ಮಾಡಬೇಕಾಗುತ್ತದೆ’ ಎಂದೂ ಹೇಳಿದರು.

ನಗರದಲ್ಲಿ ಶನಿವಾರ ಸಂಜೆ 7ಗಂಟೆಯಾದರೂ ಹೋಟೆಲ್‌ , ರೆಸ್ಟೋರೆಂಟ್‌ಗಳು ಕಾರ್ಯನಿರ್ವಹಿಸುತ್ತಿದ್ದುದು ಕಂಡು ಬಂತು.

ಸೋಂಕು ತಡೆಗಟ್ಟಲು ಹೋಟೆಲ್‌, ರೆಸ್ಟೋರೆಂಟ್‌ಗೆ ನಿರ್ಬಂಧ ವಿಧಿಸಿರುವುದು ಒಳ್ಳೆಯದು. ದರ್ಶಿನಿಗಳಲ್ಲಿ ಊಟ ಸಿಗುವುದರಿಂದ ಹೆಚ್ಚಿನ ತೊಂದರೆ ಇಲ್ಲಸಂಗಮೇಶ ತೋಟದ, ಗ್ರಾಹಕ

25,000

ರಾಜ್ಯದ ನೋಂದಾಯಿತ ಹೋಟೆಲ್‌, ರೆಸ್ಟೋರೆಂಟ್‌ಗಳು

10,000

ಬೆಂಗಳೂರಿನ ನೋಂದಾಯಿತ ಹೋಟೆಲ್, ರೆಸ್ಟೋರೆಂಟ್‌ಗಳು

3,000

ಬೆಂಗಳೂರಿನ ದರ್ಶಿನಿ ಮತ್ತು ಸಣ್ಣ ಹೋಟೆಲುಗಳು

₹37.5 ಕೋಟಿ

ಹೋಟೆಲ್‌–ರೆಸ್ಟೊರೆಂಟ್‌ಗಳ ದಿನದ ವಹಿವಾಟಿನ ಅಂದಾಜು ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.