ADVERTISEMENT

ಮಗಳ ಅಂತ್ಯಸಂಸ್ಕಾರಕ್ಕೆ ಅಡಿಗಡಿಗೂ ಲಂಚ: ಮರಣ ಪ್ರಮಾಣಪತ್ರಕ್ಕಾಗಿ ತಂದೆಯ ಪಡಿಪಾಟಲು

ಮರಣೋತ್ತರ ಪರೀಕ್ಷಾ ವರದಿ, ಮರಣ ಪ್ರಮಾಣಪತ್ರ ಪಡೆಯಲು ತಂದೆಯ ಪಡಿಪಾಟಲು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 23:30 IST
Last Updated 30 ಅಕ್ಟೋಬರ್ 2025, 23:30 IST
ಕೆ.ಶಿವಕುಮಾರ್ 
ಕೆ.ಶಿವಕುಮಾರ್    

ಬೆಂಗಳೂರು: ಪುತ್ರಿಯ ಮೃತದೇಹ ಸಾಗಿಸಲು ಹಾಗೂ ಮರಣೋತ್ತರ ಪರೀಕ್ಷೆ ನಡೆಸಲು ಪಟ್ಟ ಸಂಕಷ್ಟ ಹಾಗೂ ಆಂಬುಲೆನ್ಸ್‌ ಚಾಲಕ, ಪೊಲೀಸರು, ಸ್ಮಶಾನದ ಸಿಬ್ಬಂದಿ ಮತ್ತು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಂದ ಅನುಭವಿಸಿದ ನೋವು ಹಾಗೂ ಸಿಬ್ಬಂದಿ ಹಣಕ್ಕೆ ಬೇಡಿಕೆಯಿಟ್ಟ ಬಗೆಯನ್ನು ಭಾರತ್ ಪೆಟ್ರೋಲಿಯಂ ನಿಗಮದ ನಿವೃತ್ತ ಸಿಎಫ್​ಒ ಕೆ.ಶಿವಕುಮಾರ್ ಅವರು ‘ಲಿಂಕ್ಡ್​​ಇನ್‌’ನಲ್ಲಿ ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.

ಪುತ್ರಿಯ ಅಂತ್ಯಸಂಸ್ಕಾರಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಡಿಗಡಿಗೂ ಲಂಚ ಕೇಳಿದ ಸಂಗತಿಯನ್ನೂ ಕೇಂದ್ರ ಸರ್ಕಾರದ ಸ್ವಾಮ್ಯದ ಕಂಪನಿಯಲ್ಲಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಆಗಿದ್ದ ಶಿವಕುಮಾರ್‌ ಅವರು ನೋವಿನಿಂದ ಹೇಳಿಕೊಂಡಿದ್ದಾರೆ.

‘ಪುತ್ರಿ ಅಕ್ಷಯಾ (34) ಅವರು ಮಿದುಳು ರಕ್ತಸ್ರಾವ(ಬ್ರೇನ್‌ ಹೆಮರೇಜ್‌) ಸಮಸ್ಯೆಯಿಂದಾಗಿ ಸೆ.18ರಂದು ಮೃತಪಟ್ಟಿದ್ದರು. ಅಕ್ಷಯಾ ಅವರು ಅಹಮದಾಬಾದ್‌ನ ಐಐಎಂನಿಂದ ಬಿ.ಟೆಕ್ ಮತ್ತು ಎಂಬಿಎ ಪದವಿ ಪಡೆದಿದ್ದರು. ವೃತ್ತಿ ಜೀವನದ 11 ವರ್ಷಗಳ ಪೈಕಿ, 8 ವರ್ಷ ಬೆಂಗಳೂರಿನ ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿ ಕೆಲಸ ಮಾಡಿದ್ದರು’ ಎಂದು ಶಿವಕುಮಾರ್ ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಕೆ.ಶಿವಕುಮಾರ್ ಅವರು ಕೆಲವು ಗಂಟೆಗಳ ಬಳಿಕ ಪೋಸ್ಟ್ ಅಳಿಸಿ ಹಾಕಿದ್ದರು. 

ADVERTISEMENT

‘ಕಸವನಹಳ್ಳಿಯ ಆಸ್ಪತ್ರೆಯಿಂದ ಕೋರಮಂಗಲದ ಸೇಂಟ್ ಜಾನ್ಸ್‌ ಆಸ್ಪತ್ರೆಗೆ ಮೃತದೇಹ ಸಾಗಿಸಲು ಆಂಬುಲೆನ್ಸ್ ಚಾಲಕರೊಬ್ಬರು ₹3 ಸಾವಿರ ಕೇಳಿದ್ದರು. ಮರಣೋತ್ತರ ಪರೀಕ್ಷೆಗೆ ಮೃತದೇಹ ಕೊಂಡೊಯ್ಯುವ ಸಂದರ್ಭದಲ್ಲಿ ಪೊಲೀಸ್‌ ಸಿಬ್ಬಂದಿ ದರ್ಪ ತೋರಿದ್ದರು. ಸ್ಥಳದಲ್ಲಿದ್ದ ಮಾಜಿ ಸಹೋದ್ಯೋಗಿ ನನ್ನ ನೆರವಿಗೆ ಬಂದಿದ್ದರು. ಅವರ ಮಧ್ಯಪ್ರವೇಶದಿಂದ ಪೊಲೀಸರು ಸುಮ್ಮನಾದರು. ನಂತರ, ಪುತ್ರಿಯ ಕಣ್ಣುಗಳನ್ನು ದಾನ ಮಾಡಲಾಯಿತು. ಮರಣೋತ್ತರ ಪರೀಕ್ಷೆ ಮುಗಿಸಿ ಅಂತ್ಯಸಂಸ್ಕಾರಕ್ಕೆ ಮೃತದೇಹ ತೆಗೆದುಕೊಂಡು ಹೋದಾಗ ಸ್ಮಶಾನದ ಸಿಬ್ಬಂದಿ ಸಹ ಹಣ ಕೇಳಿದರು. ಸ್ಮಶಾನದ ಸಿಬ್ಬಂದಿಗೂ ಹಣ ನೀಡಿದ್ದೆವು’ ಎಂದು ಉಲ್ಲೇಖಿಸಿದ್ದಾರೆ.

‘ಯುಡಿಆರ್‌ ಹಾಗೂ ಮರಣೋತ್ತರ ಪರೀಕ್ಷೆ ವರದಿಯ ಪ್ರತಿಗಾಗಿ ನಾಲ್ಕು ಬಾರಿ ಪೊಲೀಸರನ್ನು ಭೇಟಿ ಮಾಡಿದ್ದೆ. ವರದಿ ನೀಡುವುದಕ್ಕೂ ಪೊಲೀಸರು ಹಣ ಕೇಳಿದ್ದರು. ಠಾಣೆಯಲ್ಲೇ ಹಣ ತೆಗೆದುಕೊಂಡರು. ಆದರೆ, ಅವರು ಲಂಚ ಪಡೆದ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಇರಲಿಲ್ಲ. ಆರಂಭದಲ್ಲಿ ಪಿಎಸ್‌ಐ ಚೆನ್ನಾಗಿ ಮಾತನಾಡಿದ್ದರು. ದಾಖಲೆಗಳಿಗೂ ಸಹಿ ಹಾಕಿದ್ದರು. ಆದರೆ, ಲಂಚ ನೀಡಲು ಅವರ ಸಹಾಯಕರನ್ನು ಭೇಟಿಯಾಗಲು ಹೇಳಿದ್ದರು’ ಎಂದು ಶಿವಕುಮಾರ್ ಆರೋಪಿಸಿದ್ದಾರೆ.

‘ಮರಣ ಪ್ರಮಾಣಪತ್ರಕ್ಕಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕಚೇರಿಗೆ ಅಲೆಯಬೇಕಾದ ಸ್ಥಿತಿ ಬಂದಿತ್ತು. ಐದು ಬಾರಿ ಕಚೇರಿಗೆ ಅಲೆದಿದ್ದೆ. ಕಚೇರಿಯಲ್ಲಿ ಸಿಬ್ಬಂದಿ ಇಲ್ಲ. ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಗೆ ತೆರಳಿದ್ದಾರೆ ಎಂದು ಅಲ್ಲಿದ್ದವರು ಹೇಳಿದ್ದರು. ಬಳಿಕ ಹಿರಿಯ ಅಧಿಕಾರಿಯನ್ನು ಸಂಪರ್ಕಿಸಿದೆ. ಅವರೂ ಸಹ ಹಣ ಪಡೆದು ಪತ್ರ ನೀಡಿದರು’ ಎಂದು ದೂರಿದ್ದಾರೆ.

‘ನನ್ನ ಸ್ಥಿತಿಯೇ ಈ ರೀತಿಯಾದರೆ ಜನಸಾಮಾನ್ಯರ ಪಾಡೇನು’ ಎಂದು ಪೋಸ್ಟ್​​ನಲ್ಲಿ ಉಲ್ಲೇಖಿಸಿದ್ದಾರೆ.

ಪಿಎಸ್​ಐ ಕಾನ್​ಸ್ಟೆಬಲ್‌ ಅಮಾನತು

‘ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪೋಸ್ಟ್‌ ಗಮನಿಸಿ ಪ್ರಾಥಮಿಕ ತನಿಖೆ ನಡೆಸಲಾಗಿದೆ. ವಿಚಾರಣೆ ವೇಳೆ ಬೆಳ್ಳಂದೂರು ಪೊಲೀಸ್ ಠಾಣೆಯ ಪಿಎಸ್​ಐ ಸಂತೋಷ್ ಹಾಗೂ ಕಾನ್​ಸ್ಟೆಬಲ್‌ ಗೋರಖ್​ನಾಥ್ ಅವರು ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿದೆ. ಹಣ ಪಡೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇಲಾಖಾ ತನಿಖೆ ಕಾಯ್ದಿರಿಸಿ ಇಬ್ಬರನ್ನೂ ಅಮಾನತು ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.