ನೆಲಮಂಗಲ: ‘ತಾಲ್ಲೂಕಿನಲ್ಲಿರುವ 64 ಕೆರೆಗಳ ಪೈಕಿ 50 ಕೆರೆಗಳಿಗೆ ವೃಷಭಾವತಿ ಕಣಿವೆಯ ಸಂಸ್ಕರಿಸಿದ ನೀರು ಹರಿಸಲಾಗುತ್ತದೆ. ಮೊದಲ ಕೆರೆಗೆ ನೀರು ಬಂದ ಕೂಡಲೆ ತಜ್ಞರಿಂದ ಪರೀಕ್ಷಿಸೋಣ, ಬಳಸಲು ಯೋಗ್ಯವಲ್ಲ ಎಂದಾದರೆ ವಾಪಸ್ ಕಳುಹಿಸೋಣ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಆರ್.ಗೌಡ ತಿಳಿಸಿದರು.
‘ಚಿಕ್ಕಬಳ್ಳಾಪುರ, ಕೋಲಾರ, ಹೊಸಕೋಟೆ, ಯಲಹಂಕ ಕ್ಷೇತ್ರದ ರೈತರು ವೃಷಭಾವತಿ ಯೋಜನೆಯ ಫಲ ಪಡೆಯುತ್ತಿದ್ದಾರೆ. ತುಮಕೂರಿನಲ್ಲಿ ಶೀಘ್ರ ಕಾಮಗಾರಿ ಪ್ರಾರಂಭಿಸಲು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಶಾಸಕ ಎಸ್.ಆರ್. ವಿಶ್ವನಾಥ್ ಅವರ ಕ್ಷೇತ್ರದಲ್ಲಿ ಯೋಜನೆ ಅನುಷ್ಠಾನವಾಗಿದೆ. ಎಲ್ಲೂ ವಿರೋಧ ವ್ಯಕ್ತವಾಗಿಲ್ಲ. ತಾಲ್ಲೂಕಿನ ಬಿಜೆಪಿ, ಜೆಡಿಎಸ್‌ನವರಿಗೆ ಏಕೆ ಬೇಡ? ತಿಳಿವಳಿಕೆ ಇಲ್ಲದೆ ಯೋಜನೆ ಅನುಷ್ಠಾನಕ್ಕೆ ಶ್ರಮಿಸುತ್ತಿರುವ ಶಾಸಕ ಎನ್.ಶ್ರೀನಿವಾಸ್ ಹಾಗೂ ಯೋಜನೆಯನ್ನು ವಿರೋಧಿಸುವುದು ಸರಿ ಅಲ್ಲ’ ಎಂದರು.
ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ವಜ್ರಘಟ್ಟ ನಾಗರಾಜು ಮಾತನಾಡಿ, ‘ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಯೋಜನೆಯಿಂದ ಅಂತರ್ಜಲ ವೃದ್ಧಿಯಾಗಿ, 300 ಅಡಿಗಳಿಂದ 500 ಅಡಿಗಳಿಗೆ ಕೊಳವೆ ಬಾವಿಗಳಲ್ಲಿ ನೀರು ದೊರೆಯುತ್ತಿದೆ. ಹೀಗಾಗಿ, ಎಲ್ಲದಕ್ಕೂ ವಿರೋಧಿಸುವುದು ಬೇಡ’ ಎಂದರು.
ವಕೀಲ ಹನುಮಂತೇಗೌಡ, ‘ಯೋಜನೆ ವಿರೋಧಿಸುವವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಲಿ’ ಎಂದರು.
ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ, ಮಾಜಿ ಅಧ್ಯಕ್ಷ ಎನ್.ಪಿ. ಹೇಮಂತಕುಮಾರ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ನಾಗರತ್ನ, ಮುಖಂಡರಾದ ಎಂ.ಕೆ.ನಾಗರಾಜು, ವಾಸು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.