ಬೆಂಗಳೂರು: ನಗರದಲ್ಲಿ ರಸ್ತೆಗೆ ಇಳಿಯುತ್ತಿರುವ ಹೊಸ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾದ ಬೆನ್ನಲ್ಲೇ ದಟ್ಟಣೆಯೂ ಮಿತಿಮೀರುತ್ತಿದೆ. ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆಯೂ ಏರಿಕೆಯಾಗಿದೆ. ಜತೆಗೆ, ಅಪಘಾತಗಳೂ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿದ್ದು, ಎರಡು ತಿಂಗಳಲ್ಲಿಯೇ 140 ಮಂದಿ ಮೃತಪಟ್ಟಿದ್ದಾರೆ.
ಈ ಅವಧಿಯಲ್ಲಿ ಸಂಭವಿಸಿದ 784 ಅಪಘಾತಗಳಲ್ಲಿ 682 ಮಂದಿ ಗಾಯಗೊಂಡಿದ್ದಾರೆ. 135 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಕೆಲವರು ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ.
ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಜನವರಿ ಹಾಗೂ ಫೆಬ್ರುವರಿಯಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸಿರುವುದು ವರದಿಯಾಗಿದೆ. 2023ರ ಜನವರಿ, ಫೆಬ್ರುವರಿ ತಿಂಗಳಲ್ಲಿ ಸಂಭವಿಸಿದ ಅಪಘಾತಗಳಿಂದ 120 ಮಂದಿ ಪ್ರಾಣ ಕಳೆದುಕೊಂಡಿದ್ದರು. 2024ರ ಜನವರಿ ಹಾಗೂ ಫೆಬ್ರುವರಿಯಲ್ಲಿ 130 ಮಂದಿ ಮೃತಪಟ್ಟಿದ್ದರು.
ಬಸ್, ಬೈಕ್, ನೀರು ಹಾಗೂ ಪೆಟ್ರೋಲ್ ಟ್ಯಾಂಕರ್, ಆಟೊ, ಲಾರಿ, ಕಾರು, ಕಂಟೈನರ್, ಜೀಪುಗಳ ಮಧ್ಯೆ ಅಪಘಾತಗಳು ನಡೆದಿವೆ. ಮದ್ಯ ಸೇವಿಸಿ ವಾಹನ ವಾಚನೆ ಮಾಡಿಕೊಂಡು ಹೋಗಿ ಸ್ವಯಂ ಅಪಘಾತಕ್ಕೀಡಾಗುವವರ ಸಂಖ್ಯೆಯೂ ಹೆಚ್ಚಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ನಗರದ ಒಳಗೆ ಹಾದು ಹೋಗಿರುವ ರಾಜ್ಯ–ರಾಷ್ಟ್ರೀಯ ಹೆದ್ದಾರಿ, ಬಡಾವಣೆಯ ರಸ್ತೆಗಳು, ಹೊರ ವರ್ತುಲ ರಸ್ತೆಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು, ಅತಿ ವೇಗದ ಚಾಲನೆ ಹಾಗೂ ಹೆಲ್ಮೆಟ್‌ರಹಿತ ಪ್ರಯಾಣ ಅಪಘಾತಕ್ಕೆ ಕಾರಣವಾಗುತ್ತಿದೆ ಎಂಬುದು ಸಂಚಾರ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಒಂದು ತಿಂಗಳ ಹಿಂದೆ, ಬಿಎಂಆರ್‌ಸಿಎಲ್ ‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ಏರಿಕೆ ಮಾಡಿತ್ತು. ಮೆಟ್ರೊ ಪ್ರಯಾಣಕರು ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದ್ದರೂ, ಬಿಎಂಆರ್‌ಸಿಎಲ್ ದರವನ್ನು ಇಳಿಕೆ ಮಾಡಿಲ್ಲ. ಇದರ ಪರಿಣಾಮ ಸ್ವಂತ ವಾಹನ ಬಳಸುವವರು ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ವಂತ ವಾಹನಗಳು ರಸ್ತೆಗಳು ಇಳಿದ ಪರಿಣಾಮ, ಸಂಚಾರ ದಟ್ಟಣೆಯೂ ಆರಂಭವಾಗಿದೆ. ಅಲ್ಲಲ್ಲಿ ಅಪಘಾತಗಳೂ ಸಂಭವಿಸುತ್ತಿವೆ. ಫೆಬ್ರುವರಿಯಲ್ಲಿ ಹೆಚ್ಚು ಅಪಘಾತಗಳು ನಡೆದಿವೆ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಬಿಎಂಟಿಸಿ ಬಸ್ ಚಾಲಕರಿಗೆ ಎಚ್ಚರಿಕೆ: ಕಳೆದ ಎರಡು ತಿಂಗಳಲ್ಲಿ ಬಿಎಂಟಿಸಿ ಬಸ್‌ನಿಂದ ಹೆಚ್ಚಿನ ಅಪಘಾತಗಳು ಸಂಭವಿಸಿವೆ. ಇದಕ್ಕೆ ಚಾಲಕರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಬನಶಂಕರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವಾರ ಎರಡು ಬಿಎಂಟಿಸಿ ಬಸ್ ಮಧ್ಯೆ ಸಿಲುಕಿ ವೈದ್ಯ ಹಾಗೂ ಆಟೊ ಚಾಲಕ ಮೃತಪಟ್ಟಿದ್ದರು.
‘ಹೊಸಕೆರೆಹಳ್ಳಿ ಕ್ರಾಸ್ನ 80 ಅಡಿ ರಸ್ತೆ ಕಡೆಯಿಂದ ಸೀತಾ ವೃತ್ತದ ಕಡೆಗೆ ಬರುತ್ತಿದ್ದ ಆಟೊಗೆ ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್‌ವೊಂದು ಗುದ್ದಿತ್ತು. ಡಿಕ್ಕಿಯ ರಭಸಕ್ಕೆ ಮುಂದೆ ಚಲಿಸುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್‌ನ ಹಿಂಭಾಗಕ್ಕೆ ಆಟೊ ಡಿಕ್ಕಿ ಹೊಡೆದಿತ್ತು. ಎರಡೂ ಬಸ್‌ಗಳ ಮಧ್ಯೆ ಸಿಲುಕಿ ಆಟೊ ನಜ್ಜುಗುಜ್ಜಾಗಿ, ಆಟೊದಲ್ಲಿದ್ದ ಇಬ್ಬರು ಮೃತಪಟ್ಟಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಎಚ್ಚರಿಕೆಯಿಂದ ಬಸ್ ಚಾಲನೆ ಮಾಡುವಂತೆ ಬಿಎಂಟಿಸಿ ಚಾಲಕರಿಗೆ ಸೂಚನೆ ನೀಡಲಾಗಿದೆ’ ಎಂದು ಸಂಚಾರ ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
‘ಅತಿ ವೇಗದಿಂದ ದ್ವಿಚಕ್ರ ವಾಹನ ಚಲಾಯಿಸಿದ್ದರಿಂದ ಉರುಳಿ ಬಿದ್ದು, ಬೈಕ್ ಸವಾರರು ಮೃತಪಡುತ್ತಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಸವಾರರು ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿ ಜೀವ ಕಳೆದುಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ನಿತ್ಯ 30 ಸಾವಿರ ಸಂಚಾರ ನಿಯಮ ಉಲ್ಲಂಘನೆ
ನಗರದ ಹಲವು ಕಡೆ ಕೃತಕ ಬುದ್ಧಿಮತ್ತೆ ಆಧರಿಸಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ತಂತ್ರಜ್ಞಾನವನ್ನು ಆಧರಿಸಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಮಾಡಲಾಗುತ್ತಿದ್ದು ಪ್ರತಿನಿತ್ಯ 30 ಸಾವಿರ ಪ್ರಕರಣಗಳು ಪತ್ತೆ ಆಗುತ್ತಿವೆ ಎಂದು ಸಂಚಾರ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.