ADVERTISEMENT

ಕೆರೆ, ರಾಜಕಾಲುವೆ ಮೇಲೆ ಬಿಡಿಎ, ಬಿಬಿಎಂಪಿಯಿಂದಲೇ ರಸ್ತೆ ನಿರ್ಮಾಣ

ಮಹದೇವಪುರ ವಲಯ: ಬಿಡಿಎ, ಬಿಬಿಎಂಪಿಯಿಂದಲೇ ನಿರ್ಮಾಣ

Published 9 ಸೆಪ್ಟೆಂಬರ್ 2022, 19:54 IST
Last Updated 9 ಸೆಪ್ಟೆಂಬರ್ 2022, 19:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ರಾಜಕಾಲುವೆಗಳ ಮೇಲೆಯೇ ಬಿಡಿಎ, ಬಿಬಿಎಂಪಿ ರಸ್ತೆಗಳನ್ನು ನಿರ್ಮಾಣ ಮಾಡಿವೆ. ಈ ರಸ್ತೆಗಳಲ್ಲಿ ಒಂದು ಬದಿಯಿಂದ ಮತ್ತೊಂದು ಬದಿಗೆ ನೀರು ಹರಿಯಲು ರಾಜಕಾಲುವೆಗಳಿಲ್ಲ. ಜೊತೆಗೆ ಕೆರೆ ಅಂಗಳದಲ್ಲೂ ಮಣ್ಣು ಸುರಿದು ರಸ್ತೆ ಕಾಮಗಾರಿ ನಡೆಸಲಾಗಿದೆ. ಇದಕ್ಕೆ ಹತ್ತಾರು ವರ್ಷಗಳಿಂದ ಸರ್ಕಾರವೇ ಅನುಮತಿ ನೀಡಿದೆ.

ಸರ್ಜಾಪುರ ಮುಖ್ಯರಸ್ತೆ ಹಾಗೂ ಹೊರ ವರ್ತುಲ ರಸ್ತೆ ನಿರ್ಮಾಣದಲ್ಲೂ ರಾಜಕಾಲುವೆಗಳು ಒತ್ತುವರಿಯಾಗಿವೆ. ಮಳೆನೀರು ಹರಿಯಲು ಈ ರಸ್ತೆಗಳಲ್ಲಿ ವ್ಯವಸ್ಥೆ ಕಲ್ಪಿಸಿಲ್ಲ. ಬಡಾವಣೆ, ಐಟಿ ಕಾರಿಡಾರ್‌ಗಳ ಒಳಗೆ ರಾಜಕಾಲುವೆಗಳ ಒತ್ತುವರಿ, ಕಿರಿದು ಮಾಡಿರುವುದು, ಸ್ಥಳ ಬದಲಾವಣೆ, ಮಾರ್ಪಾಡುಗಳಂತಹ ಪ್ರಕ್ರಿಯೆಗಳು ನಡೆದಿವೆ. ಆದರೆ, ಬಿಡಿಎ, ಬಿಬಿಎಂಪಿ ಎಂಜಿನಿಯರ್‌ಗಳು ‘ಸರ್ಕಾರದ ಸಮ್ಮತಿ ಇದೆ’ ಎಂದು ಹೇಳಿ ರಾಜಕಾಲುವೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿರುವುದು ಬೆಂಗಳೂರು ಪೂರ್ವಭಾಗ ಹಾಗೂ ಐಟಿ ಕಾರಿಡಾರ್‌ ಧಾರಾಕಾರ ಮಳೆ ಸಂದರ್ಭದಲ್ಲಿ ಮುಳುಗಲು ಪ್ರಮುಖ ಕಾರಣ. ಈ ಬಗ್ಗೆ ಗಮನಕ್ಕೆ ತಂದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಪರಿಸರ ಕಾರ್ಯಕರ್ತರ ಆರೋಪ. ರಾಜಕಾಲುವೆಗೆ ಅನುವು ಮಾಡಿಕೊಡದೆ ರಸ್ತೆ ನಿರ್ಮಿಸಿರುವುದು ನಕ್ಷೆಯಿಂದ ಸಾಬೀತಾಗುತ್ತದೆ.

ಬೆಳ್ಳಂದೂರು, ದೊಡ್ಡನೆಕ್ಕುಂದಿ, ನಲ್ಲೂರಹಳ್ಳಿ, ಹೊರಮಾವು, ವೆಂಗಯ್ಯನಕೆರೆ, ಎಲೆಮಲ್ಲಪ್ಪಶೆಟ್ಟಿಕೆರೆ, ಕಲ್ಕೆರೆ, ಗುಂಜೂರು ಪಾಳ್ಯ, ಶೀಲವಂತನಕೆರೆ, ಪಣತ್ತೂರು, ಪಟ್ಟಂದೂರು ಅಗ್ರಹಾರ ಕೆರೆಗಳ ಬಳಿ ರಸ್ತೆಗಾಗಿ ಕೆರೆ ಅಂಗಳಕ್ಕೆ ಮಣ್ಣು ಸುರಿಯಲಾಗಿದೆ. ಅಲ್ಲದೆ, ಆ ಕೆರೆಗಳಿಗೆ ಹಾಗೂ ಅಲ್ಲಿಂದ ಸಂಪರ್ಕವಿರುವ ರಾಜಕಾಲುವೆಗಳನ್ನು ‘ರಸ್ತೆಗೆ ಸಮ’ ಮಾಡಿರುವುದು ಜಲಾವೃತ ಸಮಸ್ಯೆಗೆ ಪ್ರಮುಖ ಕಾರಣ.

ADVERTISEMENT

‘ರಸ್ತೆಗಳ ಅಭಿವೃದ್ಧಿಗೆ ನಮಗೆ ಸರ್ಕಾರದಿಂದ ಅನುಮತಿ ಇದೆ. ಸಾರ್ವಜನಿಕರ ಉಪಯೋಗಕ್ಕಾಗಿ ರಾಜಕಾಲುವೆ ಹಾಗೂ ಕೆರೆಯಲ್ಲಿ ರಸ್ತೆ ಮಾಡಬಹುದಾಗಿದೆ’ ಎಂದು ಬಿಡಿಎ ಹಾಗೂ ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

ಒತ್ತುವರಿಯಿಂದ ಜಲಾವೃತ

ಸಂದೀಪ್‌ ಅನಿರುಧನ್‌

‘ನಗರದಲ್ಲಿ ಅತಿಹೆಚ್ಚು ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದು ಹೊರವಲಯ. ಈ ಹಿಂದೆ ಯೋಜನೆ ಮಾಡಿದಾಗ ಪಾಲಿಕೆ ವ್ಯಾಪ್ತಿಯಲ್ಲಿ ಇರಲಿಲ್ಲ. ರಾಜಕಾಲುವೆ, ಕೆರೆಗಳ ಮೇಲೆಲ್ಲ ಅಭಿವೃದ್ಧಿಗೆ ಆಕ್ಷೇಪವನ್ನೇ ಬಿಡಿಎ ಅಧಿಕಾರಿಗಳು ಮಾಡಿಲ್ಲ. ಆರ್‌ಎಂಪಿಯನ್ವಯ ನಕ್ಷೆ ಮಾಡಿದ್ದಾರೆ. ಆದರೆ ಅದು ಅಂತಿಮವಲ್ಲ. ಕಂದಾಯ ನಕ್ಷೆಯನ್ನು ನೋಡಬೇಕು. ಅದರಂತೆ ಎಲ್ಲವೂ ಇಲ್ಲಿ ಒತ್ತುವರಿಯೇ. ಹೀಗಾಗಿ ಜಲಕಂಟಕವಾಗಿದೆ. ಪಟ್ಟಂದೂರು ಕೆರೆಯ ಮೇಲೂ ರಸ್ತೆ ಮಾಡುತ್ತಿದ್ದಾರೆ. ಮೊಕದ್ದಮೆ ಹೂಡಲಾಗಿದೆ’ ಎಂದು ಸಿಟಿಜನ್ಸ್‌ ಅಜೆಂಡಾ ಫಾರ್ ಬೆಂಗಳೂರಿನ ಸಂಚಾಲಕ ಸಂದೀಪ್‌ ಅನಿರುಧನ್‌ ಹೇಳಿದರು.

‘ಕೆರೆ ಹಾಗೂ ರಾಜಕಾಲುವೆಗಳ ಮೇಲೆ ಬಿಡಿಎ, ಬಿಬಿಎಂಪಿ ಅಧಿಕಾರಿಗಳೇ ರಸ್ತೆ ನಿರ್ಮಿಸಿದ್ದಾರೆ. ಇದರಿಂದಲೇ ಸಾಕಷ್ಟು ಸಮಸ್ಯೆ ಎದುರಾಗಿದೆ. ಸರ್ಕಾರವೇ ಒತ್ತುವರಿ ಮಾಡಿದರೆ ಇನ್ನು ಖಾಸಗಿಯವರು ಕೇಳಬೇಕೆ? ಹೀಗಾಗಿ ನಗರಕ್ಕೆ ಒಂದು ನೀತಿಯಿಲ್ಲ. ಇರುವುದನ್ನು ಪರಿಶೀಲಿಸುವವರಿಲ್ಲ. ಒತ್ತುವರಿ ತೆರವಾಗದ ಹೊರತು ಸಮಸ್ಯೆಗೆ ಪರಿಹಾರ ಇಲ್ಲ’ ಎಂದರು.

ನೀರೆಲ್ಲಿ ಹೋಗಬೇಕು...?

‘ರಸ್ತೆ ಮಾಡಬೇಕು ನಿಜ. ಆದರೆ, ಮಳೆ ನೀರು ಹೋಗುವುದಾದರೂ ಎಲ್ಲಿಗೆ ಎಂಬುದನ್ನು ಇವ‌ರ‍್ಯಾರೂ ಏಕೆ ಯೋಚಿಸಿಲ್ಲ? ಇದ್ಯಾವ ಸೀಮೆ ಎಂಜಿನಿಯರಿಂಗ್‌? ರಸ್ತೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ನೀರು ಕಾಲುವೆಯಲ್ಲಿ ಹರಿಯಬೇಕು. ಇದಾಗದಿದ್ದರೆ ರಸ್ತೆ ಹಾಗೂ ಬಡಾವಣೆಗಳಿಗೆ ನೀರು ನುಗ್ಗುತ್ತದೆ. ಇಂತಹ ಸಾಮಾನ್ಯ ಪರಿಜ್ಞಾನ ಇಲ್ಲದೆ ರಸ್ತೆಗಳನ್ನು ನಿರ್ಮಿಸಿರುವುದು ಪರಿಸರದ ಮೇಲೆ ಮಾಡಿರುವ ದೊಡ್ಡ ಆಕ್ರಮಣ. ಇದರಿಂದ ಜನರನ್ನೂ ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ’ ಎಂದು ಫ್ರೆಂಡ್ಸ್‌ ಆಫ್‌ ಲೇಕ್ಸ್‌ನ ರಾಮ್‌ಪ್ರಸಾದ್‌ ಹೇಳಿದರು.

ನೀರೆಲ್ಲಿ ಹೋಗಬೇಕು...?

‘ರಸ್ತೆ ಮಾಡಬೇಕು ನಿಜ. ಆದರೆ, ಮಳೆ ನೀರು ಹೋಗುವುದಾದರೂ ಎಲ್ಲಿಗೆ ಎಂಬುದನ್ನು ಇವ‌ರ‍್ಯಾರೂ ಏಕೆ ಯೋಚಿಸಿಲ್ಲ? ಇದ್ಯಾವ ಸೀಮೆ ಎಂಜಿನಿಯರಿಂಗ್‌? ರಸ್ತೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ನೀರು ಕಾಲುವೆಯಲ್ಲಿ ಹರಿಯಬೇಕು. ಇದಾಗದಿದ್ದರೆ ರಸ್ತೆ ಹಾಗೂ ಬಡಾವಣೆಗಳಿಗೆ ನೀರು ನುಗ್ಗುತ್ತದೆ. ಇಂತಹ ಸಾಮಾನ್ಯ ಪರಿಜ್ಞಾನ ಇಲ್ಲದೆ ರಸ್ತೆಗಳನ್ನು ನಿರ್ಮಿಸಿರುವುದು ಪರಿಸರದ ಮೇಲೆ ಮಾಡಿರುವ ದೊಡ್ಡ ಆಕ್ರಮಣ. ಇದರಿಂದ ಜನರನ್ನೂ ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ’ ಎಂದು ಫ್ರೆಂಡ್ಸ್‌ ಆಫ್‌ ಲೇಕ್ಸ್‌ನ ರಾಮ್‌ಪ್ರಸಾದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.