ADVERTISEMENT

Bengaluru | ರಸ್ತೆ ರಂಪಾಟ ಪ್ರಕರಣ ಹೆಚ್ಚಳ

ರಾಜಧಾನಿಯ ರಸ್ತೆಯಲ್ಲೇ ಕಿರಿಕ್‌, ಎದುರಾಳಿಯ ಮೇಲೆ ಹಲ್ಲೆ, ವಾಹನಗಳ ಗಾಜು ಪುಡಿ

ಆದಿತ್ಯ ಕೆ.ಎ
Published 13 ಮೇ 2025, 0:28 IST
Last Updated 13 ಮೇ 2025, 0:28 IST
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ರಸ್ತೆ ರಂಪಾಟ ಪ್ರಕರಣದ ದೃಶ್ಯ 
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ರಸ್ತೆ ರಂಪಾಟ ಪ್ರಕರಣದ ದೃಶ್ಯ    

ಬೆಂಗಳೂರು: ರಾಜಧಾನಿಯಲ್ಲಿ ಪ್ರತಿನಿತ್ಯ ರಸ್ತೆಗೆ ಇಳಿಯುತ್ತಿರುವ ವಾಹನಗಳ ಸಂಖ್ಯೆ ಹೆಚ್ಚಾದಂತೆಯೇ ರಸ್ತೆ ರಂಪಾಟ ಪ್ರಕರಣಗಳೂ ಏರಿಕೆ ಆಗಿವೆ.

ಸಣ್ಣಪುಟ್ಟ ವಿಚಾರಕ್ಕೂ ರಸ್ತೆಯಲ್ಲಿ ವಾಹನ ಸವಾರರ ನಡುವೆ ಗಲಾಟೆಗಳು ನಡೆಯುತ್ತಿವೆ. ಸಂಚಾರ ದಟ್ಟಣೆ, ಸ್ವಪ್ರತಿಷ್ಠೆಗಾಗಿ ರಸ್ತೆಯಲ್ಲಿ ವಾಹನ ಸವಾರರ ಮಧ್ಯೆ ಸಂಘರ್ಷಗಳು ನಡೆದು ಪ್ರಕರಣಗಳು ಪೊಲೀಸ್‌ ಠಾಣೆಯ ಮೆಟ್ಟಿಲೇರುತ್ತಿವೆ.

ಏಪ್ರಿಲ್‌ 21ರಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಕೆಲಸಕ್ಕೆ ತೆರಳುತ್ತಿದ್ದ ವಾಹನ ಸವಾರ, ಕನ್ನಡಿಗ ಎಸ್‌.ಜೆ.ವಿಕಾಸ್‌ ಕುಮಾರ್ ಅವರ ಮೇಲೆ ವಾಯಪಡೆ ಕೋಲ್ಕತ್ತ ನೆಲೆಯ ವಿಂಗ್ ಕಮಾಂಡರ್‌ ಶಿಲಾದಿತ್ಯ ಬೋಸ್‌ ಅವರು ರಸ್ತೆಯಲ್ಲಿ ಹಲ್ಲೆ ನಡೆಸಿದ್ದ ಪ್ರಕರಣವು ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿತ್ತು. ದ್ವಿಚಕ್ರ ವಾಹನ ಸವಾರನ ಮೇಲೆ ಶಿಲಾದಿತ್ಯ ಬೋಸ್‌ ಹಲ್ಲೆ ನಡೆಸಿದ್ದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದೇ ರೀತಿ ನಗರದ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳೆದ ತಿಂಗಳು 10ಕ್ಕೂ ಹೆಚ್ಚು ರಸ್ತೆ ರಂಪಾಟ ಪ್ರಕರಣಗಳು ವರದಿಯಾಗಿವೆ.

ADVERTISEMENT

ಹೊರವಲಯದ ರಸ್ತೆಗಳು ಹಾಗೂ ಜಂಕ್ಷನ್‌ಗಳಲ್ಲಿ ರಾತ್ರಿ ವೇಳೆ ಪುಂಡರ ಹಾವಳಿ ಮಿತಿಮೀರಿದೆ. ಉದ್ದೇಶಪೂರ್ವಕವಾಗಿಯೇ ಬೇರೆ ವಾಹನಗಳಿಗೆ ಬೈಕ್‌ ತಾಗಿಸಿ ಹಲ್ಲೆ ನಡೆಸಲಾಗುತ್ತಿದೆ. ಹಲ್ಲೆ ನಡೆಸಿದ ಬಳಿಕ ಕಾರು ಚಾಲಕರಿಂದ ಹಣ ಹಾಗೂ ಮೊಬೈಲ್‌ ಕಸಿದು ಕಿಡಿಗೇಡಿಗಳು ಪರಾರಿ ಆಗುತ್ತಿದ್ದಾರೆ. ಹಣ ದರೋಡೆ ಮಾಡುವ ಉದ್ದೇಶದಿಂದಲೇ ಏಕಮುಖ ಸಂಚಾರ ಮಾರ್ಗದಲ್ಲಿ ಬಂದು, ಎದುರಿನ ವಾಹನಕ್ಕೆ ತಾಗಿಸಿ ದರೋಡೆ ನಡೆಸಲಾಗುತ್ತಿದೆ. ಈ ರೀತಿಯ ಘಟನೆಗಳಿಂದ ರಾತ್ರಿಪಾಳಿಯ ಉದ್ಯೋಗಸ್ಥರು, ವ್ಯಾಪಾರಿಗಳು, ಫುಡ್‌ ಡೆಲಿವರಿ ಮಾಡುವವರು, ಸ್ವಂತ ವಾಹನಗಳಲ್ಲಿ ಹೊರ ಊರುಗಳಿಂದ ರಾತ್ರಿ ವೇಳೆ ನಗರಕ್ಕೆ ಬರುವ ಪ್ರಯಾಣಿಕರು ಭೀತಿಗೆ ಒಳಗಾಗಿದ್ದಾರೆ. 

‘ರಸ್ತೆಯಲ್ಲಿ ಕರ್ಕಶ ಹಾರ್ನ್‌ ಮಾಡಿಕೊಂಡು ವಾಹನಗಳನ್ನು ಹಿಂದಿಕ್ಕುವುದು, ಮುಂದೆ ಚಲಿಸುತ್ತಿದ್ದ ವಾಹನದ ಸವಾರರು ಜಾಗ ಬಿಡದಿದ್ದರೆ ಅಂತಹ ವಾಹನವನ್ನು ಅಡ್ಡಗಟ್ಟಿ ಸವಾರರ ಮೇಲೆ ಹಲ್ಲೆ ಮಾಡುವುದು, ವಾಹನಕ್ಕೆ ಹಾನಿ ಮಾಡುವ ಪ್ರಕರಣಗಳು ನಗರದಲ್ಲಿ ನಡೆಯುತ್ತಿವೆ’ ಎಂದು ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆಯಿದೆ. 1.19 ಕೋಟಿ ವಾಹನಗಳಿವೆ. ಪ್ರತಿನಿತ್ಯ 2,200 ವಾಹನಗಳು ಹೊಸದಾಗಿ ನೋಂದಣಿ ಆಗುತ್ತಿವೆ. ಪ್ರತಿನಿತ್ಯ ರಸ್ತೆಗೆ ಇಳಿಯುವ ವಾಹನ ಸಂಖ್ಯೆ ಹೆಚ್ಚಾದಂತೆ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆಯೂ ತೀವ್ರವಾಗಿದೆ. ವಾರಾಂತ್ಯ ಹಾಗೂ ದಟ್ಟಣೆ ಅವಧಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಆಗ ಒಂದು ವಾಹನಕ್ಕೆ ಮತ್ತೊಂದು ವಾಹನ ತಾಗಿದರೆ ರಸ್ತೆ ಮಧ್ಯೆದಲ್ಲಿಯೇ ಗಲಾಟೆಗಳು ಆಗುತ್ತಿವೆ. ಮಾಹಿತಿ ತಿಳಿದು ಸ್ಥಳಕ್ಕೆ ತೆರಳುವಷ್ಟರಲ್ಲಿ ಆರೋಪಿಗಳು ಹಲ್ಲೆ ನಡೆಸಿ ಪರಾರಿ ಆಗಿರುತ್ತಾರೆ ಎಂದು ಪೊಲೀಸರು ಹೇಳುತ್ತಾರೆ.

ಗಲಾಟೆಯಾದಂತಹ ಸಂದರ್ಭಗಳಲ್ಲಿ ಆರೋಪಿಗಳು, ಎದುರು ವಾಹನಗಳ ಚಾಲಕರನ್ನು ಥಳಿಸುವುದು, ಅವರ ಮುಖಕ್ಕೆ ಉಗಿಯುವುದು, ಗಾಜು ಒಡೆದು ಹಾಕುವುದನ್ನು ಮಾಡುತ್ತಿದ್ದಾರೆ.

‘ಮದ್ಯದ ಅಮಲಿನಲ್ಲಿ ಕೆಲವರು ವಾಹನ ಚಲಾಯಿಸುತ್ತಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಗಲಾಟೆಗಳು ನಡೆಯುತ್ತಿವೆ. ಮದ್ಯ ಕುಡಿದು ವಾಹನ ಚಾಲನೆ ಮಾಡುವವರನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕಳೆದ ವರ್ಷ ರಸ್ತೆ ರಂಪಾಟ ನಡೆಸಿದ್ದ 40 ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಪದೇ ಪದೇ ರಂಪಾಟ ನಡೆಸುವವರನ್ನು ಪತ್ತೆಹಚ್ಚಿ ರೌಡಿಪಟ್ಟಿಗೂ ಸೇರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಗಲಾಟೆ ದೃಶ್ಯವನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಬದಲು ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿದರೆ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ತಕ್ಷಣವೇ ಕ್ರಮ ಕೈಗೊಳ್ಳಲಿದ್ದಾರೆ
ಬಿ.ದಯಾನಂದ ನಗರ ಪೊಲೀಸ್‌ ಕಮಿಷನರ್‌

ಹಲ್ಲೆಗೆ ಕಾರಣಗಳು?

* ದಟ್ಟಣೆಯ ಪರಿಣಾಮ ದೀರ್ಘ ಸಮಯ ರಸ್ತೆಯಲ್ಲೇ ಕಳೆಯುವ ಸವಾರರು ತಾಳ್ಮೆ ಕಳೆದುಕೊಳ್ಳುತ್ತಾರೆ ಎದುರು ವಾಹನದ ಚಾಲಕ ಸಣ್ಣತಪ್ಪು ಮಾಡಿದರೂ ಹಲ್ಲೆ ನಡೆಸುತ್ತಾರೆ

* ಬೇಗನೆ ಗಮ್ಯ ಸ್ಥಳಗಳಿಗೆ ತಲುಪಲು ವೇಗವಾಗಿ ವಾಹನ ಚಾಲನೆ ಮಾಡುತ್ತಾರೆ. ಆಗ ಹಾರ್ನ್‌ ಮಾಡುವುದು ಹಾಗೂ ಏಕಮುಖ ಸಂಚಾರ ಮಾರ್ಗದಲ್ಲಿ ವಾಹನ ಚಾಲನೆ ಮಾಡುವುದು ಸಹ ಗಲಾಟೆಗೆ ಕಾರಣ ಆಗುತ್ತಿದೆ

* ಅಪಘಾತದ ನೆಪವೊಡ್ಡಿ ಅಡ್ಡಗಟ್ಟಿ ಬೆದರಿಸಿ ಹಣ ದೋಚುತ್ತಾರೆ

* ಕೌಟುಂಬಿಕ ಸಮಸ್ಯೆ ಇದ್ದವರು ಅದೇ ಆಲೋಚನೆಯಲ್ಲಿ ವಾಹನ ಚಾಲನೆ ಮಾಡುತ್ತಿದ್ದಾಗ ಆಗುವ ಎಡವಟ್ಟಿನಿಂದಲೂ ರಂಪಾಟ ನಡೆಯುತ್ತಿದೆ 

ಬೆಂಗಳೂರಿನಲ್ಲಿ ಏಪ್ರಿಲ್‌ನಲ್ಲಿ ನಡೆದ ಪ್ರಕರಣಗಳು

* ಏ.21: ಕೋಣನಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಹಾರ್ನ್ ಮಾಡಿದ್ದಕ್ಕೆ ಕಾರನ್ನು ಅಡ್ಡಗಟ್ಟಿ ಅಸಭ್ಯ ವರ್ತನೆ ತೋರಿದ್ದ ಆಟೊ ಚಾಲಕ 

* ಏ.25: ಲಿಂಗರಾಜಪುರ ಕೆಳಸೇತುವೆಯಲ್ಲಿ ಕಾರು ಚಾಲಕನ ಜತೆಗೆ ಆಟೊ ಚಾಲಕನ ದುರ್ವರ್ತನೆ

* ಏ.26: ಜೀವನ್‌ಭಿಮಾ ನಗರದಲ್ಲಿ ವಾಹನಗಳ ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದ ಮಹಿಳೆ

* ಏ.28: ‌ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ವಾಹನ ನಿಲುಗಡೆಯ ವಿಚಾರಕ್ಕೆ ಗಲಾಟೆ ನಡೆದು ಕ್ಯಾಬ್‌ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.