ADVERTISEMENT

ಬೆಂಗಳೂರು | ರಸ್ತೆ ಸುರಕ್ಷತೆ ಕುರಿತು ಅರಿವು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 14:40 IST
Last Updated 18 ಅಕ್ಟೋಬರ್ 2025, 14:40 IST
   

ಹೊಸ್ಮಟ್ ಹಾಸ್ಪಿಟಲ್ಸ್ ರಸ್ತೆ ಸುರಕ್ಷತೆ  ಮತ್ತು ಅಪಘಾತಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹೆಣ್ಣೂರು ಜಂಕ್ಷನ್‌ನಲ್ಲಿ ಫ್ಲ್ಯಾಷ್‌ ಮಾಬ್‌ ಆಯೋಜನೆ ಮಾಡಿತ್ತು. 

ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ಸಂಚಾರ ನಿಯಮಗಳನ್ನು ಪಾಲಿಸಲು, ಸುರಕ್ಷಿತ ಹೆಲ್ಮೆಟ್‌ವೊಂದನ್ನು ಕಡ್ಡಾಯವಾಗಿ ಧರಿಸಲು, ವೇಗದ ಚಾಲನೆ ತಪ್ಪಿಸುವಂತೆ ವಿನಂತಿಸಿತು. 

 ಹೆಣ್ಣೂರು ಪೊಲೀಸ್‌ ಸಿಬ್ಬಂದಿಗೆ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಶಾಂತಿಪ್ರಿಯ ಅವರ ನೇತೃತ್ವದಲ್ಲಿ ತುರ್ತು ಚಿಕಿತ್ಸೆಯ ಬಗ್ಗೆ ತರಬೇತಿ ಶಿಬಿರವನ್ನು ನೀಡಲಾಯಿತು. ಹೆಣ್ಣೂರು ಪೊಲೀಸ್ ಠಾಣೆಯ 50ಕ್ಕೂ ಹೆಚ್ಚು ಅಧಿಕಾರಿಗಳಿಗೆ ಪ್ರಾಯೋಗಿಕ ತಂತ್ರಗಳ ಮೂಲಕ ಜೀವ ರಕ್ಷಣಾ ತಂತ್ರಗಳನ್ನು ಕಲಿಸಲಾಯಿತು. 2025ರ ಮೊದಲ ಆರು ತಿಂಗಳಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲಿ 29,000ಕ್ಕೂ ಹೆಚ್ಚು ಜೀವಗಳು ಪ್ರಾಣ ಕಳೆದುಕೊಂಡಿವೆ. ಈ ಸಂಖ್ಯೆಯು ಕಳೆದ ವರ್ಷದ ಒಟ್ಟು ಸಾವಿನ ಸಂಖ್ಯೆಗಿಂತ ಶೇ 50ರಷ್ಟು ಹೆಚ್ಚು ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿ 2024ರಲ್ಲಿ 4,784 ರಸ್ತೆ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 893 ಜನರು ಮೃತಪಟ್ಟಿದ್ದಾರೆ.   ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಶೇ 70ರಷ್ಟು ವಾಹನಗಳು ದ್ವಿಚಕ್ರ ವಾಹನಗಳಾಗಿವೆ. 

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶಾಂತಿಪ್ರಿಯಾ, ‘ವಿಶ್ವ ಆಘಾತ ನಿಯಂತ್ರಣ ದಿನದ ಪ್ರಯುಕ್ತ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರತಿ ಕ್ಷಣವೂ ಅಮೂಲ್ಯ. ಅಪಘಾತ ಯಾವಾಗ ಬೇಕಾದರೂ ಸಂಭವಿಸಬಹುದು. ಸಹಾಯಕ್ಕೆ ಒದಗುವ ಪ್ರತಿಯೊಬ್ಬರು ಈ ಸಂದರ್ಭದಲ್ಲಿ ದೈವಸ್ವರೂಪಿಗಳು’ ಎಂದು ಹೇಳಿದರು. 

ಪೊಲೀಸ್ ಇನ್‌ಸ್ಪೆಕ್ಟರ್‌ ದೀಪಕ್ ಎಲ್., ‘ ಅಧಿಕಾರಿಗಳಿಗೆ ನೀಡಿದ ಪ್ರಾಯೋಗಿಕ ತರಬೇತಿ  ಉಪಯುಕ್ತ. ಹೃದಯ ಸ್ತಂಭನ ಪ್ರಕರಣಗಳಲ್ಲಿ ಯಾವ ರೀತಿಯ ತುರ್ತು ಚಿಕಿತ್ಸೆ ನೀಡಬೇಕು ಎಂಬುದು ಮನದಟ್ಟಾಗಿದೆ. ತಕ್ಷಣವೇ ನೆರವಿಗೆ ಧಾವಿಸುವವರಾಗಿರುವ ನಮಗೆ ಈ ತರಬೇತಿಯು ಬಹಳ ಉಪಯುಕ್ತ’ ಎಂದು
ಶ್ಲಾಘಿಸಿದರು. 

ಸಬ್ ಇನ್‌ಸ್ಪೆಕ್ಟರ್‌ಗಳಾದ ಪರಶುರಾಮ ಬಿ. ಮತ್ತು ನರಸಿಂಹಲು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.