
ಕೆ.ಆರ್.ಪುರ: ರಸ್ತೆ ತುಂಬ ಗುಂಡಿಗಳು, ದುರ್ಗಮ ರಸ್ತೆಯಲ್ಲಿ ಜೀವ ಪಣಕ್ಕಿಟ್ಟು ಸಾಗುವ ಸವಾರರು, ಪರ್ಯಾಯ ರಸ್ತೆಯಿಲ್ಲದೆ ಗೋಳಾಡುವ ಸ್ಥಳೀಯ ನಿವಾಸಿಗಳು..
ಇದು ಮಹದೇವಪುರ ಕ್ಷೇತ್ರದ ಪಣತ್ತೂರಿನಲ್ಲಿ ಕಂಡು ಬಂದ ದೃಶ್ಯ.
ಪಣತ್ತೂರು ಬಳಗೆರೆ ರಸ್ತೆಯೂ ಗುಂಡಿಗಳಿಂದ ಸಮಸ್ಯೆ ಎದುರಿಸುವಂತಾಗಿತ್ತು. ಈಗ ಪಣತ್ತೂರಿನಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಬಳಗೆರೆ ಮೂಲಕ ವರ್ತೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಪಣತ್ತೂರಿನಲ್ಲಿ ಹಲವು ದಿನಗಳಿಂದ ವೈಟ್ ಟಾಪಿಂಗ್ ನಡೆಯುತ್ತಿದೆ. ಮುಖ್ಯರಸ್ತೆಯ ಮೂಲಕ ಸಾಗಲು ಪರ್ಯಾಯ ಮಾರ್ಗವೂ ಇಲ್ಲದೆ ಸಂಪರ್ಕ ಸಂಪೂರ್ಣ ಕಡಿತಗೊಂಡು ವಾಹನ ಸವಾರರು, ಸ್ಥಳೀಯರು, ಟೆಕಿಗಳು ನಿತ್ಯ ನರಕ ಅನುಭವಿಸುತ್ತಿದ್ದಾರೆ.
ಐಟಿ,ಬಿಟಿ ಹಬ್, ಸಿಲಿಕಾನ್ ವ್ಯಾಲಿ ಕಾರಿಡಾರ್ ಎನಿಸಿರುವ ಮಾರತ್ತಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಐಟಿ ಸೇವೆ ಒದಗಿಸುವ ವಿವಿಧ ಕಂಪನಿಗಳಿಗೆ ಬರಲು ರಸ್ತೆ ಸಂಪರ್ಕ ಕಡಿತಗೊಂಡಿರುವ ಕಾರಣ ಸುಮಾರು 10–15 ಕಿಲೋ ಮೀಟರ್ ಸುತ್ತು ಹಾಕಬೇಕಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು, ಟೆಕಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರ, ಜಿಬಿಎ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಸ್ತೆ ಕಾಮಗಾರಿ ನಡೆಸುವ ವೇಳೆ ಪರ್ಯಾಯ ಮಾರ್ಗಕ್ಕೆ ಸೂಕ್ತ ವ್ಯವಸ್ಥೆ ಮಾಡದೇ ಜನರ ಜೀವದೊಂದಿಗೆ ಅಧಿಕಾರಿಗಳು ಆಟವಾಡುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಣತ್ತೂರು ಬಳಗೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಖಾಸಗಿ ಶಾಲೆಗಳಿದ್ದು, ಇದೇ ರಸ್ತೆಯ ಮೂಲಕ ಸಾಗಬೇಕಿರುವುದರಿಂದ ಶಾಲಾ ಮಕ್ಕಳು ಭವಿಷ್ಯಕ್ಕೆ ಕುತ್ತು ಉಂಟಾಗುವ ಬಗ್ಗೆ ಮಕ್ಕಳ ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬಳಗೆರೆ ಸುತ್ತಮುತ್ತಲಿನ ಪ್ರದೇಶಗಳ ವಾಸಿಗಳು ಸುಮಾರು 14 ಕಿಲೋ ಮೀಟರ್ ಸುತ್ತು ಹಾಕಿ ತಮ್ಮ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಾರೆ. ಪಣತ್ತೂರು ರೈಲ್ವೆ ಕೆಳಸೇತುವೆ ಬಳಿ ಪರ್ಯಾಯ ರಸ್ತೆ ವ್ಯವಸ್ಥೆ ಮಾಡದೆ ಇರುವುದರಿಂದ ಸಮಸ್ಯೆ ಉಂಟಾಗಿದೆ. ಕೆಲಸಕ್ಕೆ ಹೋಗುವ ಧಾವಂತದಲ್ಲಿ ಕಾಲುವೆಗಾಗಿ ಅಗೆದಿರುವ ದಾರಿಯಲ್ಲಿ ಸವಾರರು ಸಾಗುತ್ತಿದ್ದಾರೆ.
‘ಪಣತ್ತೂರು ಬಳಗೆರೆ ಮುಖ್ಯರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯಿಂದಾಗಿ ಸಂಚಾರ ದುಸ್ತರವಾಗಿದೆ. ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಪಕ್ಕದಲ್ಲಿಯೇ ಪಣತ್ತೂರು ರೈಲ್ವೆ ನಿಲ್ದಾಣದ ಕಾಮಗಾರಿ ನಡೆಯುತ್ತಿರುವ ಕಾರಣ ನಿಲ್ದಾಣ ಮುಂಭಾಗದ ಮೂಲಕ ಸಾಗಲು ಅವಕಾಶ ನೀಡುತ್ತಿಲ್ಲ. ದುರ್ಗಮ ದಾರಿಯಲ್ಲಿ ಸಾಗಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಬಳಗೆರೆ ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಪವನ್ ಪಟೇಲ್ ಅಳಲು ತೊಡಿಕೊಂಡರು.
‘ವೈಟ್ ಟಾಪಿಂಗ್ ನಡೆಯುತ್ತಿದ್ದು, ನಿತ್ಯ ಸಾವಿರಾರು ವಿದ್ಯಾರ್ಥಿಗಳು ಇದೇ ರಸ್ತೆ ಮೂಲಕ ಬಸ್ ಗಳ ಮೂಲಕ ಸಾಗಬೇಕಿದೆ. ಪರ್ಯಾಯ ಮಾರ್ಗವಿಲ್ಲದೆ ಸುಮಾರು 15 ಕಿಲೋ ಮೀಟರ್ ದೂರ ಕ್ರಮಿಸಿ ಶಾಲೆಗೆ ತೆರಳಬೇಕಿದೆ. ಇದರಿಂದ ಸಮಯ ವ್ಯರ್ಥವಾಗುತ್ತಿದೆ. ವಿದ್ಯಾಭ್ಯಾಸಕ್ಕೆ ತೊಡಕು ಉಂಟಾಗುತ್ತಿದೆ. ಆದಷ್ಟು ಬೇಗ ಸೂಕ್ತ ಪರಿಹಾರ ಸೂಚಿಸಬೇಕು’ ಎಂದು ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.