ADVERTISEMENT

ಸೈನಿಕನಂತೆ ಬಂದು 8 ಜನರ ಪ್ರಜ್ಞೆ ತಪ್ಪಿಸಿದ! ಪ್ರಯಾಣಿಕರಿಗೆ ಪಾನೀಯ ಕುಡಿಸಿ ವಂಚನೆ

ಅಜ್ಮೇರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳ್ಳತನ

ಎಂ.ಸಿ.ಮಂಜುನಾಥ
Published 3 ಮಾರ್ಚ್ 2019, 7:10 IST
Last Updated 3 ಮಾರ್ಚ್ 2019, 7:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸೈನಿಕನ ಸಮವಸ್ತ್ರದಲ್ಲಿ ರೈಲು ಹತ್ತಿದ ಚಾಲಾಕಿಯೊಬ್ಬ, ತನ್ನ ನಯವಾದ ಮಾತುಗಳಿಂದಲೇ ಬೋಗಿಯಲ್ಲಿದ್ದ ಎಲ್ಲಾ ಪ್ರಯಾಣಿಕರ ವಿಶ್ವಾಸ ಗಿಟ್ಟಿಸಿಕೊಳ್ಳುತ್ತಾನೆ. ಮಾರ್ಗಮಧ್ಯೆ ನಿದ್ರೆ ಮಾತ್ರೆ ಬೆರೆಸಿದ್ದ ತಂಪು ಪಾನೀಯ ಕುಡಿಸಿ ಎಂಟು ಮಂದಿಯ ಪ್ರಜ್ಞೆ ತಪ್ಪಿಸುವ ಆತ, ಕೊನೆಗೆ ಅಷ್ಟೂ ಮಂದಿಯ ಬ್ಯಾಗ್‌ಗಳನ್ನು ತೆಗೆದುಕೊಂಡು ಚಲಿಸುತ್ತಿದ್ದ ರೈಲಿನಿಂದಲೇ ಜಿಗಿದು ಪರಾರಿಯಾಗುತ್ತಾನೆ...

ಇದು ಯಾವುದೋ ಸಿನಿಮಾದ ಕತೆಯಲ್ಲ. ಮೈಸೂರು–ಅಜ್ಮೇರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ವಾಸ್ತವ ಘಟನೆ. ಜಯನಗರದಲ್ಲಿ ಕೆಲಸ ಮಾಡುವ ರಾಜಸ್ಥಾನದ ಸುರೇಶ್, ತಾರಾರಾಮ್, ಲಾಟಾಪೂನಾರಾಮ್ ಚೌಧರಿ, ಜಗತ್ ರಾಮ್, ಲಾಕಾ ರಾಮ್, ಕೇನಾಬೆನ್ ಹಾಗೂ ಅವರ ಇನ್ನಿಬ್ಬರು ಸ್ನೇಹಿತರು ಅಜ್ಮೇರ್‌ಗೆ ತೆರಳುತ್ತಿದ್ದಾಗ ಈ ಕೃತ್ಯ ನಡೆದಿದೆ.

ರೈಲಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಎಂಟೂ ಮಂದಿಯನ್ನು ರೈಲ್ವೆ ಸಿಬ್ಬಂದಿಯೇ ಗುಜರಾತ್‌ನ ಪಾಲನಪುರ ಸಿವಿಲ್ ಆಸ್ಪತ್ರೆಗೆದಾಖಲಿಸಿದ್ದರು. ಚೇತರಿಸಿಕೊಂಡ ಬಳಿಕ ಪ್ರಯಾಣಿಕರು ಅಲ್ಲಿನ ಮಹೇಸನಾ ರೈಲ್ವೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಆ ಪ್ರಕರಣ ಶುಕ್ರವಾರ ಬೆಂಗಳೂರು ರೈಲ್ವೆ ಠಾಣೆಗೆ ವರ್ಗವಾಗಿದ್ದು, ಇದೀಗ ಎರಡೂ ರಾಜ್ಯಗಳ ಪೊಲೀಸರು ವಿಶೇಷ ತಂಡಗಳನ್ನು ರಚಿಸಿಕೊಂಡು ವಂಚಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ADVERTISEMENT

ಸೈನಿಕನೆಂದು ನಂಬಿದೆವು: ‘ವರ್ಷದ ಹಿಂದೆ ನಗರಕ್ಕೆ ಬಂದಿದ್ದನಾನು, ಜಯನಗರದ ಎಲೆಕ್ಟ್ರಾನಿಕ್ ಉಪಕರಣಗಳ ಮಳಿಗೆಯಲ್ಲಿ ಕೆಲಸ ಮಾಡಿಕೊಂಡಿದ್ದೆ. ನಾವೆಲ್ಲ 9ನೇ ಬೋಗಿಯಲ್ಲಿ ಕುಳಿತಿದ್ದಾಗ ಬಂದ ಒಬ್ಬಾತ, ‘ನಾನು ಸೈನಿಕ. ಪತ್ನಿಗೆ ಹೆರಿಗೆ ಆಗಿದೆ. ಹೀಗಾಗಿ ಊರಿಗೆ ಹೋಗುತ್ತಿದ್ದೇನೆ. ನಿಮ್ಮೊಟ್ಟಿಗೆ ಕೂರಬಹುದೇ’ ಎಂದು ಕೇಳಿದ. ಸೈನಿಕ ಎಂಬ ಕಾರಣಕ್ಕೆ ಎಲ್ಲರೂ ಆತನನ್ನು ಪ್ರೀತಿಯಿಂದ ಕಂಡೆವು’ ಎಂದು ವಂಚನೆಗೆ ಒಳಗಾದ ಸುರೇಶ್ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

‘ಮರುದಿನ ನಸುಕಿನವರೆಗೂ ನಮ್ಮೊಟ್ಟಿಗೇ ಇದ್ದ ಆತ, ಸೂರತ್ ನಿಲ್ದಾಣದಲ್ಲಿ ಮೂರು ಬಾಟಲಿ ತಂಪು ಪಾನೀಯ ಖರೀದಿಸಿದ. ಒಂದನ್ನು ತಾನು ಇಟ್ಟುಕೊಂಡು, ಎರಡು ಬಾಟಲಿ ಪಾನೀಯವನ್ನು ಬಲವಂತವಾಗಿ ನಮ್ಮೆಲ್ಲರಿಗೂ ಕುಡಿಸಿದ. ಸ್ವಲ್ಪ ಸಮಯದಲ್ಲೇ ಎಲ್ಲರೂ ಪ್ರಜ್ಞೆ ತಪ್ಪಿದೆವು. ಎಚ್ಚರಗೊಂಡಾಗ ನಾವು ಪಾಲನಪುರದ ಆಸ್ಪತ್ರೆಯಲ್ಲಿದ್ದೆವು’ ಎಂದು ಹೇಳಿದ್ದಾರೆ.

ಫೋಟೊಗೆ ಬೇಡವೆಂದ: ಸೈನಿಕನ ಧಿರಿಸಿನಲ್ಲಿದ್ದ ಕಾರಣ ಈ ಪ್ರಯಾಣಿಕರು ಆತನೊಟ್ಟಿಗೆ ಫೋಟೊ ತೆಗೆದುಕೊಳ್ಳಲು ಮುಂದಾಗಿದ್ದರು. ಆದರೆ, ಅದಕ್ಕೆ ಆತ ಒಪ್ಪಿರಲಿಲ್ಲ. ‘ನಾವು ಹಾಗೆಲ್ಲ ಫೋಟೊ ತೆಗೆಸಿಕೊಳ್ಳುವಂತಿಲ್ಲ. ನೀವು ಸಾಮಾಜಿಕ ಜಾಲತಾಣಗಳಿಗೆ ಫೋಟೊ ಹಾಕಿಬಿಟ್ಟರೆ ಹಿರಿಯ ಅಧಿಕಾರಿಗಳಿಂದ ನನಗೆ ತೊಂದರೆ ಆಗುತ್ತದೆ’ ಎಂದು ಸಬೂಬು ಹೇಳಿದ್ದ.

‘ಒಟ್ಟು ಎಂಟು ಬ್ಯಾಗ್‌ಗಳು ಕಳವಾಗಿದ್ದು, ಅದರಲ್ಲಿ ಬಟ್ಟೆಗಳು, ₹ 42 ಸಾವಿರ ಮೌಲ್ಯದ ಚಿನ್ನಾಭರಣ, ಆಧಾರ್ ಕಾರ್ಡ್ ಸೇರಿದಂತೆ ಮತ್ತಿತರೆ ದಾಖಲೆಗಳು ಇದ್ದುದಾಗಿ ಪ್ರಯಾಣಿಕರು ದೂರು ಕೊಟ್ಟಿದ್ದಾರೆ’ ಎಂದು ರೈಲ್ವೆ ಪೊಲೀಸರು ಹೇಳಿದರು.

ವಡೋದರಾ ಜಂಕ್ಷನ್‌ನಲ್ಲಿ ಜಿಗಿದ

‘ಪ್ರಯಾಣಿಕರಿಂದ ದೋಚಿದ್ದ ಎಲ್ಲ ಬ್ಯಾಗ್‌ಗಳನ್ನೂ ತನ್ನ ಬಳಿ ಇದ್ದ ದೊಡ್ಡ ಬ್ಯಾಗ್‌ವೊಂದಕ್ಕೆ ತುಂಬಿಕೊಂಡಿರುವ ಆರೋಪಿ, ವಡೋದರಾ ಜಂಕ್ಷನ್‌ ಬಳಿ ರೈಲು ನಿಧಾನವಾಗಿ ಚಲಿಸುತ್ತಿದ್ದಾಗಲೇ ಜಿಗಿದು ಪರಾರಿಯಾಗಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಎಂಟೂ ಪ್ರಯಾಣಿಕರ ಹೇಳಿಕೆ ಪಡೆದ, ತನಿಖೆ ಚುರುಕುಗೊಳಿಸಲಾಗುವುದು’ ಎಂದು ನಗರ ರೈಲ್ವೆ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.