ADVERTISEMENT

ಮನೆಗೆ ನುಗ್ಗಿ ದರೋಡೆ: ವೈದ್ಯನ ಕೂಡಿಹಾಕಿ ಪರಾರಿ

* ಸಹಕಾರ ನಗರದಲ್ಲಿ ಘಟನೆ * ಉತ್ತರ ಪ್ರದೇಶದ ತಂಡದಿಂದ ಕೃತ್ಯ ಶಂಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 15:42 IST
Last Updated 25 ಏಪ್ರಿಲ್ 2024, 15:42 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಸಹಕಾರ ನಗರದಲ್ಲಿರುವ ಮನೆಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಗಳು ಚಿನ್ನಾಭರಣ ಹಾಗೂ ನಗದು ದೋಚಿ ಮನೆ ಮಾಲೀಕನನ್ನು ಕೂಡಿಹಾಕಿ ಪರಾರಿಯಾಗಿದ್ದು, ಈ ಬಗ್ಗೆ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವೈದ್ಯ ಡಾ. ಉಮಾಶಂಕರ್ ಅವರ ಮನೆಯಲ್ಲಿ ದರೋಡೆ ನಡೆದಿದೆ. 500 ಗ್ರಾಂ ತೂಕದ ಚಿನ್ನಾಭರಣ, ಬೆಲೆಬಾಳುವ 6 ಕೈ ಗಡಿಯಾರಗಳು ಹಾಗೂ ₹ 20 ಲಕ್ಷ ಹಣವನ್ನು ದುಷ್ಕರ್ಮಿಗಳು ದೋಚಿದ್ದಾರೆ. ಉಮಾಶಂಕರ್ ನೀಡಿರುವ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಉಮಾಶಂಕರ್ ಅವರು ಬುಧವಾರ ಮನೆಯಲ್ಲಿ ಒಬ್ಬರೇ ಇದ್ದರು. ತರಕಾರಿ ಖರೀದಿಸಲೆಂದು ಮನೆಯಿಂದ ಹೊರಗೆ ಹೋಗಿದ್ದರು. ಬಾಗಿಲು ಲಾಕ್ ಮಾಡುವುದನ್ನು ಮರೆತಿದ್ದರು. ಇದೇ ಸಂದರ್ಭದಲ್ಲಿ ನಾಲ್ವರು ದುಷ್ಕರ್ಮಿಗಳು, ಮನೆಯೊಳಗೆ ನುಗ್ಗಿದ್ದರು. ಮನೆಯ ಮುಖ್ಯ ದ್ವಾರದ ಬಳಿ ಒಬ್ಬ ನಿಂತುಕೊಂಡಿದ್ದರು. ಉಳಿದ ಮೂವರು ಕೊಠಡಿಗಳಲ್ಲಿ ಹುಡುಕಾಟ ನಡೆಸಿದ್ದರು. ಚಿನ್ನಾಭರಣ ಹಾಗೂ ನಗದು ದೋಚಿ ಬ್ಯಾಗ್‌ನಲ್ಲಿ ತುಂಬಿಕೊಂಡಿದ್ದರು’ ಎಂದು ತಿಳಿಸಿದರು.

ADVERTISEMENT

ಬಂದೂಕು ತೋರಿಸಿ ಬೆದರಿಕೆ: ‘ತರಕಾರಿ ತರಲು ಹೋಗಿದ್ದ ಉಮಾಶಂಕರ್ ವಾಪಸು ಮನೆಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಮುಖ್ಯ ದ್ವಾರದ ಬಳಿ ನಿಂತಿದ್ದ ದುಷ್ಕರ್ಮಿಯನ್ನು ನೋಡಿದ್ದರು. ‘ಯಾರು ನೀನು?’ ಎಂದು ಪ್ರಶ್ನಿಸಿದ್ದರು. ಗಾಬರಿಗೊಂಡಿದ್ದ ದುಷ್ಕರ್ಮಿ, ಕೂಗಾಡಿ ಒಳಗಿದ್ದವರಿಗೆ ಮಾಹಿತಿ ನೀಡಿದ್ದ’ ಎಂದು ಪೊಲೀಸರು ಹೇಳಿದರು.

‘ಮನೆಯೊಳಗೆ ಹೋಗಿದ್ದ ಉಮಾಶಂಕರ್, ಬಾಗಿಲು ಒಳಗಿನಿಂದ ಲಾಕ್‌ ಮಾಡಿಕೊಳ್ಳಲು ಮುಂದಾಗಿದ್ದರು. ಇದೇ ಸಂದರ್ಭದಲ್ಲಿ ಉಮಾಶಂಕರ್ ಅವರನ್ನು ಸುತ್ತುವರೆದಿದ್ದ ಆರೋಪಿಗಳು, ಬಂದೂಕು ತೋರಿಸಿ ಜೀವ ಬೆದರಿಕೆಯೊಡ್ಡಿದ್ದರು. ಉಮಾಶಂಕರ್ ಅವರನ್ನು ಹಿಡಿದುಕೊಂಡು, ಕೊಠಡಿಯೊಂದರಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದಾರೆ’ ಎಂದು ತಿಳಿಸಿದರು.

‘ಬಾಗಿಲು ಮೀಟಿ ಕೊಠಡಿಯಿಂದ ಹೊರಬಂದಿದ್ದ ವೈದ್ಯ, ಮನೆಯಲ್ಲಿ ತಪಾಸಣೆ ನಡೆಸಿದ್ದರು. ಚಿನ್ನಾಭರಣ ಹಾಗೂ ನಗದು ದರೋಡೆಯಾಗಿದ್ದು ಗೊತ್ತಾಗಿತ್ತು. ಬಳಿಕವೇ ಠಾಣೆಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗಿದೆ. ಉತ್ತರ ಪ್ರದೇಶದ ಅಪರಾಧ ಹಿನ್ನೆಲೆಯುಳ್ಳ ಆರೋಪಿಗಳಿಂದ ಕೃತ್ಯ ನಡೆದಿರುವ ಶಂಕೆ ಇದ್ದು, ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.