ADVERTISEMENT

ಹೊಸ ವರ್ಷಾಚರಣೆ ದಿನವೇ ಚಾಕು ಇರಿತ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 22:13 IST
Last Updated 3 ಜನವರಿ 2020, 22:13 IST

ಬೆಂಗಳೂರು: ಹೊಸ ವರ್ಷಾಚರಣೆಗಾಗಿ ಹೋಟೆಲ್‌ ಒಂದರ ಕೊಠಡಿಯಲ್ಲಿ ಉಳಿದುಕೊಂಡಿದ್ದ ನಾಲ್ಕೈದು ಯುವಕರು ಅದೇ ಹೋಟೆಲ್‌ನ ಸಿಬ್ಬಂದಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದು, ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೊಠಡಿ ಕಾಯ್ದಿರಿಸಲು ಯುವಕರು ಗುರುತಿನ ಚೀಟಿಗಳನ್ನು ನೀಡಿದ್ದಾರೆ. ಅದರ ಆಧಾರದಲ್ಲಿ ಯುವಕನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ದೊಡ್ಡ ಬಾಣಸವಾಡಿಯ ಹೋಟೆಲ್‌ ಒಂದರಲ್ಲಿ ಆರೋಪಿಗಳು ಕೊಠಡಿ ಕಾಯ್ದಿರಿಸಿದ್ದರು. ರಾತ್ರಿಯೇ ಕೊಠಡಿಗೆ ಬಂದಿದ್ದ ಆರೋಪಿಗಳು, ಮದ್ಯ ಕುಡಿದು ಪಾರ್ಟಿ ಮಾಡಿದ್ದರು. ಕೆಲ ಹೊತ್ತಿನ ಬಳಿಕ ಯುವಕರ ನಡುವೆಯೇ ಜಗಳ ಶುರುವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಕೊಠಡಿಯಲ್ಲಿದ್ದ ಪೀಠೋಪಕರಣಗಳನ್ನು ಆರೋಪಿಗಳು ಒಡೆದು ಹಾಕಿದ್ದರು.’

ADVERTISEMENT

‘ಗಲಾಟೆ ಶಬ್ದ ಕೇಳಿ ಕೊಠಡಿಗೆ ಹೋಗಿದ್ದ ಹೋಟೆಲ್‌ ಮೇಲ್ವಿಚಾರಕ ಅರ್ಷದ್, ಯುವಕರ ವರ್ತನೆಯನ್ನು ಪ್ರಶ್ನಿಸಿದ್ದರು. ಕೊಠಡಿಯನ್ನು ಖಾಲಿ ಮಾಡಿಕೊಂಡು ಹೋಗುವಂತೆ ಹೇಳಿದ್ದರು. ಇಲ್ಲದಿದ್ದರೆ, ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗುವುದೆಂದು ಎಚ್ಚರಿಸಿದ್ದರು. ಅಷ್ಟಕ್ಕೆ ಕೋಪಗೊಂಡ ಆರೋಪಿಗಳು, ಅರ್ಷದ್ ಜೊತೆ ಜಗಳ ತೆಗೆದಿದ್ದರು. ಅವರ ಮುಖಕ್ಕೆ ಒಡೆದಿದ್ದರು. ಬೆನ್ನಿಗೆ ಚಾಕುವಿನಿಂದ ಇರಿದಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.