ADVERTISEMENT

ರೌಡಿಶೀಟರ್‌ಗಳನ್ನು ಹೀರೋಗಳಂತೆ ‌‌ಬಿಂಬಿಸಿ ರೀಲ್ಸ್: 8 ಮಂದಿ ವಿರುದ್ಧ ರೌಡಿ ಪಟ್ಟಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 0:21 IST
Last Updated 6 ಅಕ್ಟೋಬರ್ 2025, 0:21 IST
   

ಬೆಂಗಳೂರು: ರೌಡಿಶೀಟರ್‌ಗಳನ್ನು ಹೀರೋಗಳಂತೆ ‌‌ಬಿಂಬಿಸಿ,  ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ 8 ಮಂದಿ ವಿರುದ್ಧ ದಕ್ಷಿಣ ವಿಭಾಗದ ಪೊಲೀಸರು ರೌಡಿಪಟ್ಟಿ ತೆರೆದಿದ್ದಾರೆ.

ಸರ್ಜಾಪುರದ ದೀಪಕ್(22 ), ಯಲಹಂಕದ ಕುಶಾಲ್ (20 ), ಬೊಮ್ಮನಹಳ್ಳಿ ಕುಮಾರಿ ಕೈಸರ್ (21) ಜಯನಗರದ ಮಂಜುನಾಥ್ ಅಲಿಯಾಸ್ ದೊಣ್ಣೆ ಮಂಜ (31) , ಜಯನಗರದ ಶಂಕರ್ (32) ಚಿಕ್ಕಬಳ್ಳಾಪುರದ ಮನೋಜ್ (22), ಆನೇಕಲ್‌ನ ವೇಣು (19) ಮತ್ತು ಬಾಲಕನ ವಿರುದ್ಧ ರೌಡಿಶೀಟ್‌ರ್ ತೆರೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಾಲತಾಣದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಬೇಕು ಎಂಬ ಆಸೆಗೆ ಬಿದ್ದಿದ್ದ ಆರೋಪಿಗಳು, ರೌಡಿಗಳ ಫೋಟೊ ಮತ್ತು ವಿಡಿಯೊಗಳಲ್ಲಿ ಅವರನ್ನು ಹೀರೋ ರೀತಿ ಬಿಂಬಿಸುತ್ತಿದ್ದರು. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.

ADVERTISEMENT

‘ರೌಡಿಗಳನ್ನು ಬೆಂಬಲಿಸಿ ವಿಡಿಯೊ ಮಾಡಿ ಹರಿಬಿಡುವವರ ವಿರುದ್ಧ ರೌಡಿಪಟ್ಟಿ ತೆರೆಯಲಾಗಿದೆ. ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ, ಮಹೇಶ್ ಸಿದ್ದಾಪುರ ಸಂಬಂಧ ಫ್ಯಾನ್ಸ್‌ ಪೇಜ್‌ಗಳಲ್ಲಿ ಪರಸ್ಪರ ವೈಷಮ್ಯ ಬರುವ ರೀತಿ ಮತ್ತು ಸಹಾನುಭೂತಿ ವಿಡಿಯೊಗಳನ್ನು ಹರಿಬಿಡಲಾಗುತ್ತಿತ್ತು. ತನಿಖೆ ವೇಳೆ ಇದರ ಹಿಂದೆ ವಿದ್ಯಾರ್ಥಿಗಳು ಇರುವುದು ಗೊತ್ತಾಯಿತು. ವಿಚಾರಣೆ ನಡೆಸಿದ ಬಳಿಕ 8 ಜನರ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿದೆ. ಈ ವಿಶೇಷ ಕಾರ್ಯಾಚರಣೆ ಮುಂದುವರಿಸಲಾಗುತ್ತದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ  ಲೋಕೇಶ್ ಬಿ. ಜಗಲಾಸರ್ ಮಾಹಿತಿ ನೀಡಿದರು.

‘ಮದ್ಯದ ಪಾರ್ಟಿಯಲ್ಲಿ ರೌಡಿಶೀಟರ್‌ಗಳು ಡಾನ್ಸ್ ಮಾಡುತ್ತಿರುವ ವಿಡಿಯೊಗಳಿಗೆ ಹಾಡುಗಳನ್ನು ಸೇರಿಸುವುದು ಮತ್ತು ಅವರ ಭಾವಚಿತ್ರಕ್ಕೆ ಸಿನಿಮಾ ಸಂಭಾಷಣೆ ಸೇರಿಸಿ  ರೀಲ್ಸ್ ಮಾಡಿ ಅಪ್‌ಲೋಡ್‌ ಮಾಡುತ್ತಿದ್ದರು. ರೌಡಿಗಳ ಕಟೌಟ್‌ಗಳಿಗೆ ಹಾರ, ಹಾಲು ಹಾಕುವ ವಿಡಿಯೊಗಳು, ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸುತ್ತಿರುವ ವಿಡಿಯೊಗಳು, ರೌಡಿಗಳಿಗೆ ಅಣ್ಣ, ಬಾಸ್, ಕಿಂಗ್ ಎಂದು ಸಂಬೋಧಿಸುತ್ತಿದ್ದರು. ಈ ಮೂಲಕ ಯುವಕರನ್ನು ರೌಡಿಸಂಗೆ ಪರೋಕ್ಷವಾಗಿ ಆಹ್ವಾನ ನೀಡುತ್ತಿದ್ದರು. ಹೀಗಾಗಿ ಈ ಕ್ರಮಕೈಗೊಳ್ಳಲಾಗಿದೆ‘ ಎಂದು ಪೊಲೀಸರು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.