
ಗುಂಡೇಟಿನಿಂದ ಗಾಯಗೊಂಡ ರೌಡಿಶೀಟರ್
ಬೆಂಗಳೂರು: ರೌಡಿಶೀಟರ್ ಪವನ್ ಕುಮಾರ್‌ನನ್ನು ಹತ್ಯೆಗೈದಿದ್ದ ಪ್ರಕರಣದಲ್ಲಿ ಬಂಧಿಸಲು ತೆರಳಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಮಡಿವಾಳ ಠಾಣೆ ರೌಡಿಶೀಟರ್ ರಂಜಿತ್ (31) ಎಂಬಾತನ ಬಲಗಾಲಿಗೆ ಗುಂಡೇಟು ಬಿದ್ದಿದ್ದು, ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ಈಶಾನ್ಯ ವಿಭಾಗದ ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ವೆಂಕಟೇಶ್, ಸಂಪಿಗೆಹಳ್ಳಿ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಹನುಮಂತ ಬಿದರಹಳ್ಳಿ, ಕಾನ್‌ಸ್ಟೆಬಲ್ ಶಂಕರಪ್ಪ ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಇದೇ ವೇಳೆ ರೌಡಿಶೀಟರ್ ರಂಜಿತ್, ಈತನ ಸಹಚರರಾದ ಪ್ರೇಮ್, ಕಾರ್ತಿಕ್, ಪ್ರವೀಣ್ ಕುಮಾರ್, ಅರುಣ್, ವೇಲು ಎಂಬುವವರನ್ನು ಬಂಧಿಸಲಾಗಿದೆ.
ಫೆಬ್ರುವರಿ 25ರಂದು ರೌಡಿಶೀಟರ್ ಪವನ್ ಕುಮಾರ್ ಎಂಬಾತನನ್ನು ಆತನ ಮನೆ ಬಳಿ ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ರಂಜಿತ್ ಸೇರಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಖಚಿತ ಮಾಹಿತಿ ಮೇರೆಗೆ ಶನಿವಾರ ಬೆಳಿಗ್ಗೆ ಬಾಗಲೂರಿನ ಮಿಟ್ಟಗಾನಹಳ್ಳಿಯ ನಿರ್ಜನ ಪ್ರದೇಶದಲ್ಲಿ ಅಡಗಿಕೊಂಡಿದ್ದ ರಂಜಿತ್ ಬಂಧಿಸಲು ವೆಂಕಟೇಶ್ ಮತ್ತು ತಂಡ ತೆರಳಿತ್ತು. ಆಗ ಪೊಲೀಸರನ್ನು ನೋಡಿದ ಆರೋಪಿ ಏಕಾಏಕಿ ಮಾರಕಾಸ್ತ್ರದಿಂದ ಅವರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ. ವೆಂಕಟೇಶ್ ಅವರು ಆತ್ಮರಕ್ಷಣೆಗಾಗಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಕೇಳಿದ್ದಾರೆ. ಆದರೂ ಮತ್ತೆ ದಾಳಿ ನಡೆಸಿದಾಗ ಆರೋಪಿಯ ಬಲಗಾಲಿಗೆ ಗುಂಡು ಹೊಡೆದಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಮೂರು ವರ್ಷಗಳ ಹಿಂದೆ ಆರೋಪಿಗಳ ಪೈಕಿ ಪ್ರೇಮ್ ಸಹೋದರ ಕಪಿಲ್ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ಪವನ್ ಕುಮಾರ್ ಭಾಗಿಯಾಗಿದ್ದ. ಹಾಗಾಗಿ ಈತನ ಕೊಲೆ ಮಾಡಲು ಪ್ರೇಮ್ ಮತ್ತು ತಂಡ ಕಾಯುತ್ತಿತ್ತು. ಎಂಟು ತಿಂಗಳ ಹಿಂದೆ ಬಿಡುಗಡೆಯಾಗಿ ಬಂದಿದ್ದ ಪವನ್ ಕುಮಾರ್, ಮನೆ ಸಮೀಪವೇ ಬೇಕರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ.
ಫೆ.25ರಂದು ರಾತ್ರಿ ಥಣಿಸಂದ್ರ ಸಮೀಪದ ಅಮರಜ್ಯೋತಿ ಲೇಔಟ್‌ನಲ್ಲಿ ಬೇಕರಿ ಬಾಗಿಲು ಹಾಕಿಕೊಂಡು ಮನೆ ಬಳಿ ಬರುತ್ತಿದ್ದಂತೆಯೇ ಪವನ್ ಕುಮಾರ್ ನನ್ನು ಅಡ್ಡಗಟ್ಟಿದ ಆರೋಪಿಗಳು, ಮಾರಕಾಸ್ತ್ರದಿಂದ ಹಲ್ಲೆ ನಡೆಸಿ, ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.