ADVERTISEMENT

‘ನಿವೇಶನದಲ್ಲಿ ಕಸವಿದ್ದರೆ ಮಾಲೀಕರೇ ಹೊಣೆ’

ಬಿಬಿಎಂಪಿ ವಿಶೇಷ ಆಯುಕ್ತ ಡಾ.ಲೋಕೇಶ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 19:58 IST
Last Updated 1 ಅಕ್ಟೋಬರ್ 2019, 19:58 IST
ಸಹಾಯಕ ಕಂದಾಯ ಅಧಿಕಾರಿ ಸಂತೋಷ್‍ಕುಮಾರ್ ಮಾಹಿತಿ ನೀಡಿದರು. ಉಪ ಆಯುಕ್ತ ಕೆ.ಶಿವೇಗೌಡ ಇದ್ದಾರೆ.
ಸಹಾಯಕ ಕಂದಾಯ ಅಧಿಕಾರಿ ಸಂತೋಷ್‍ಕುಮಾರ್ ಮಾಹಿತಿ ನೀಡಿದರು. ಉಪ ಆಯುಕ್ತ ಕೆ.ಶಿವೇಗೌಡ ಇದ್ದಾರೆ.   

ರಾಜರಾಜೇಶ್ವರಿ ನಗರ: ‘ವೈಜ್ಞಾನಿಕ ರೀತಿಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಬೇಕು. ಮುಖ್ಯರಸ್ತೆಗಳಲ್ಲಿ ಎಲ್ಲಿಯೂ ಗುಂಡಿಗಳು ಕಾಣಬಾರದು’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ. ಲೋಕೇಶ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೇ ರಸ್ತೆಯಲ್ಲಿ ಹರಿದು ಗುಂಡಿ ಉಂಟಾಗುತ್ತದೆ. ಒಳಚರಂಡಿ ದುರಸ್ತಿ ಮಾಡಬೇಕು’ ಎಂದು ಹೇಳಿದರು.

‘ಖಾಲಿ ನಿವೇಶನಗಳಲ್ಲಿ ಕಸ ಇರುವುದು ಕಂಡುಬಂದರೆ ಅದರ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಬೇಕು ಹಾಗೂ ಪೊಲೀಸ್‌ ಕೇಸು ದಾಖಲು ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

‘ಆಸ್ತಿ ಮತ್ತು ಕಟ್ಟಡ ತೆರಿಗೆಯಲ್ಲಿ ಲೋಪಗಳಿದ್ದರೆ ಸ್ಥಳದಲ್ಲಿಯೇ ಪರಿಹರಿಸಬೇಕು. ತಪ್ಪು ಕಂಡು ಬಂದರೆ ಪುನರ್ ಅರ್ಜಿ ಪಡೆದು ಜಾಗ ಗುರುತಿಸಿ ಕಂದಾಯ ನಿಗದಿಪಡಿಸಬೇಕು’ ಎಂದು ಸಲಹೆ ನೀಡಿದರು.

ಕೆಂಗೇರಿ ಸಹಾಯಕ ಕಂದಾಯ ಅಧಿಕಾರಿ ಸಂತೋಷ್‍ಕುಮಾರ್, ‘ಬಿಡಿಎ ವತಿಯಿಂದ ಕೆಲವು ಬಡಾವಣೆಯ ನಿವೇಶನಗಳು ಬಿಬಿಎಂಪಿ ವ್ಯಾಪ್ತಿಗೆ ಹಸ್ತಾಂತರವಾಗಿಲ್ಲ. ಖಾತೆ ಮತ್ತು ಕಂದಾಯ ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದರು.

‘ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಸ್ಥಳಗಳನ್ನು ಗುರುತಿಸಿ ಕಂದಾಯ ನಿಗದಿ ಪಡಿಸಿ, ಯಾವ ವಾರ್ಡ್‍ನಲ್ಲಿ ಸಮಸ್ಯೆ ಕಂಡು ಬರುತ್ತದೋ ಆ ವಾರ್ಡ್‌ನಲ್ಲಿ ಪುನರ್ ಸರ್ವೆ ಮಾಡಿಸಿ’ ಎಂದು ಲೋಕೇಶ್‌ ಸಲಹೆ ನೀಡಿದರು.

ಉಪ ಆಯುಕ್ತ ಕೆ.ಶಿವೇಗೌಡ, ‘2018-19ನೇ ಸಾಲಿನವರೆಗೆ ₹254 ಕೋಟಿ ಆಸ್ತಿ ತೆರಿಗೆ ಬಾಕಿ ಇತ್ತು. ಕೆಲವೇ ದಿನಗಳಲ್ಲಿ ₹141.56 ಕೋಟಿ ಬಾಕಿ ವಸೂಲಿ ಮಾಡಿದ್ದರೂ ಬಲಿಷ್ಠರು, ಉದ್ಯಮಿಗಳು ಇನ್ನೂ ಹತ್ತಾರು ಕೋಟಿ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದಾರೆ. ಈ ತಿಂಗಳ ಒಳಗೆ ಆಸ್ತಿ ತೆರಿಗೆ ಪಾವತಿಸದಿದ್ದಲ್ಲಿ ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.