ADVERTISEMENT

ಹೊಸ ತೊಡಕು: ₹1.60 ಕೋಟಿ ‘ಮಾಂಸ ಚೀಟಿ’ ವಂಚನೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 0:19 IST
Last Updated 15 ಏಪ್ರಿಲ್ 2024, 0:19 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಯುಗಾದಿ ಹೊಸ ತೊಡಕು ಸಂದರ್ಭದಲ್ಲಿ ‘ಮಾಂಸ’ ನೀಡುವುದಾಗಿ ಸಾರ್ವಜನಿಕರಿಂದ ಚೀಟಿ ಕಟ್ಟಿಸಿಕೊಂಡು ವಂಚಿಸಿದ್ದ ಆರೋಪದಡಿ ಪುಟ್ಟಸ್ವಾಮಿಗೌಡ ಎಂಬುವವರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದು, ಆರೋಪಿ ಮನೆಯಲ್ಲಿ ಶೋಧ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

‘ಬಟ್ಟೆ ಮಾರಾಟ ಮಳಿಗೆ ಮಾಲೀಕ ಪುಟ್ಟಸ್ವಾಮಿಗೌಡ, ಹೊಸ ತೊಡಕು ಮಾಂಸದ ಚೀಟಿ ನಡೆಸುತ್ತಿದ್ದ. ಬ್ಯಾಟರಾಯನಪುರ, ಗಿರಿನಗರ ಹಾಗೂ ಸುತ್ತಮುತ್ತಲಿನ ಜನರು ಈತನ ಬಳಿ ಪ್ರತಿ ತಿಂಗಳು ಚೀಟಿ ಹಣ ತುಂಬುತ್ತಿದ್ದರು. ಈ ಬಾರಿಯ ಹೊಸ ತೊಡಕು ಸಂದರ್ಭದಲ್ಲಿ ಯಾವುದೇ ಮಾಂಸ ಹಾಗೂ ಪಡಿತರ ನೀಡದೇ ಆರೋಪಿ ವಂಚಿಸಿದ್ದ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ. ವಂಚನೆ ಬಗ್ಗೆ ದೂರು ದಾಖಲಿಸಿಕೊಂಡು ಪುಟ್ಟಸ್ವಾಮಿಗೌಡನನ್ನು ಇತ್ತೀಚೆಗೆ ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘2 ಸಾವಿರಕ್ಕೂ ಹೆಚ್ಚು ಮಂದಿ ಸುಮಾರು ₹ 1.60 ಕೋಟಿ ಚೀಟಿ ಕಟ್ಟಿದ್ದರೆಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ಈ ಬಗ್ಗೆ ಹಲವರು ದಾಖಲೆಗಳನ್ನು ನೀಡಿದ್ದರು. ಎಲ್ಲ ಪುರಾವೆಗಳನ್ನು ಆಧರಿಸಿ ನ್ಯಾಯಾಲಯದ ಅನುಮತಿ ಪಡೆದು ಆರೋಪಿ ಮನೆಯಲ್ಲಿ ಶೋಧ ಸಹ ನಡೆಸಲಾಯಿತು’ ಎಂದು ತಿಳಿಸಿದರು.

‘ಆರೋಪಿ ಮನೆಯಲ್ಲಿ ಚೀಟಿಗೆ ಸಂಬಂಧಪಟ್ಟ ದಾಖಲೆಗಳು ಸಿಕ್ಕಿವೆ. ಎಲ್ಲವನ್ನೂ ಜಪ್ತಿ ಮಾಡಿ, ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು.

ಬಡ್ಡಿಗೆ ಹಣ ನೀಡಿರುವ ಆರೋಪಿ: ‘ಪುಟ್ಟಸ್ವಾಮಿಗೌಡ ಪ್ರತಿ ವರ್ಷವೂ ಮಾಂಸದ ಚೀಟಿ ನಡೆಸುತ್ತಿದ್ದ. ಹೊಸ ತೊಡಕು ಸಂದರ್ಭದಲ್ಲಿ ಚೀಟಿದಾರರಿಗೆ ಕುರಿ ಮಾಂಸ ಹಾಗೂ ಪಡಿತರ ನೀಡುವುದಾಗಿ ಹೇಳುತ್ತಿದ್ದ. ಜನರ ನಂಬಿಕೆಯನ್ನೂ ಸಂಪಾದಿಸಿದ್ದ’ ಎಂದು ಪೊಲೀಸರು ತಿಳಿಸಿದರು.

‘ಈ ವರ್ಷವೂ 4 ಸಾವಿರಕ್ಕೂ ಹೆಚ್ಚು ಮಂದಿ, ಪ್ರತಿ ತಿಂಗಳು ₹ 400 (ವರ್ಷಕ್ಕೆ ₹ 4,800) ಚೀಟಿ ಕಟ್ಟಿದ್ದರೆಂಬ ಮಾಹಿತಿ ಇದೆ. ಆದರೆ, 2 ಸಾವಿರ ಮಂದಿಯ ಚೀಟಿ ದಾಖಲೆಗಳು ಮಾತ್ರ ಸದ್ಯಕ್ಕೆ ಸಿಕ್ಕಿವೆ. ಈ ಬಾರಿ ಜನರು ಕಟ್ಟಿದ್ದ ಚೀಟಿ ಹಣವನ್ನು ಆರೋಪಿ ಬೇರೆಯವರಿಗೆ ಬಡ್ಡಿಗಾಗಿ ಸಾಲ ನೀಡಿದ್ದ. ಅವರು ವಾಪಸು ಕೊಟ್ಟಿಲ್ಲವೆಂದು ಆರೋಪಿ ಹೇಳುತ್ತಿದ್ದಾನೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು.

‘ಐಷಾರಾಮಿ ಜೀವನ ನಡೆಸಲು ಇಚ್ಛಿಸುತ್ತಿದ್ದ ಆರೋಪಿ, ಹಲವರ ಬಳಿ ಸಾಲ ಮಾಡಿಕೊಂಡಿದ್ದ. ಚೀಟಿ ಹಣದಲ್ಲಿಯೇ ಸಾಲ ತೀರಿಸಿರುವ ಮಾಹಿತಿ ಇದೆ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.