ADVERTISEMENT

ಕಸ: ₹7.85 ಲಕ್ಷ ದಂಡ ಸಂಗ್ರಹ

ಸಾರ್ವಜನಿಕ ಸ್ಥಳದಲ್ಲಿ ಕಸ : 4,466 ಮಂದಿ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 19:25 IST
Last Updated 23 ಜನವರಿ 2019, 19:25 IST
   

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದವರಿಂದ ಬಿಬಿಎಂಪಿ 2018ರ ಅಕ್ಟೋಬರ್‌ 25ರಿಂದ 2019ರ ಜನವರಿ 4ರವರೆಗೆ ಒಟ್ಟು ₹7.85 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದೆ.

ಬೇಕಾಬಿಟ್ಟಿ ಕಸ ಎಸೆಯುವವರಿಂದ ಪಾಲಿಕೆ ಇಷ್ಟೊಂದು ಮೊತ್ತವನ್ನು ದಂಡದ ರೂಪದಲ್ಲಿ ಸಂಗ್ರಹಿಸಿರುವುದು ಇದೇ ಮೊದಲು. ಈ ಅವಧಿಯಲ್ಲಿ ಎಂಟು ವಲಯಗಳಲ್ಲಿ ಒಟ್ಟು 4,466 ಮಂದಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುತ್ತಿರುವಾಗಲೇ ಮಾರ್ಷಲ್‌ಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. 3,127 ಮಂದಿ ದ್ವಿಚಕ್ರ ವಾಹನಗಳಲ್ಲಿ ಕಸವನ್ನು ತಂದು ಎಸೆದಿದ್ದರು. ಅನ್ಯ ವಾಹನಗಳಲ್ಲಿ ಬಂದು ಕಸ ಎಸೆದ 1,876 ಮಂದಿಗೂ ದಂಡ ವಿಧಿಸಲಾಗಿದೆ.

‘ಕುಮಾರಸ್ವಾಮಿ ಬಡಾವಣೆ, ಕೆ.ಆರ್‌.ಮಾರುಕಟ್ಟೆ, ಹೆಗಡೆ ನಗರಗಳಲ್ಲಿ ಅತಿ ಹೆಚ್ಚು ಮಂದಿಗೆ ದಂಡ ವಿಧಿಸಲಾಗಿದೆ. ಈ ರೀತಿ ಕಸ ಬಿಸಾಡುವವರಲ್ಲಿ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ನವರ ಸಂಖ್ಯೆಯೇ ಹೆಚ್ಚು’ ಎಂದು ಮಾರ್ಷಲ್‌ಗಳ ಮುಖ್ಯಾಧಿಕಾರಿ ಕ್ಯಾ.ರಾಜಬೀರ್‌ ಸಿಂಗ್‌ ತಿಳಿಸಿದರು.

ADVERTISEMENT

ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಮಂದಿಗೆ ದಂಡ ವಿಧಿಸಲಾಗಿದೆ. ಆದರೆ ದಂಡದಿಂದ ವಸೂಲಿಯಾದ ಮೊತ್ತವನ್ನು ಪರಿಗಣಿಸಿದರೆ ಯಲಹಂಕ ವಲಯ ಮುಂಚೂಣಿಯಲ್ಲಿದೆ. ಇಲ್ಲಿ ₹1.61 ಲಕ್ಷ ದಂಡ ಸಂಗ್ರಹಿಸಲಾಗಿದೆ.

‘ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವವರನ್ನು ‍ಪತ್ತೆ ಹಚ್ಚಿ ದಂಡ ವಿಧಿಸುವ ಕಾರ್ಯ ಮುಂದುವರಿಯಲಿದೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತ (ಆರೊಗ್ಯ ಮತ್ತು ಕಸ ನಿರ್ವಹಣೆ) ಸರ್ಫರಾಜ್‌ ಖಾನ್‌ ತಿಳಿಸಿದರು.

‘ಮಾರ್ಷಲ್‌ಗಳ ಕೊರತೆ’

ಸಾರ್ವಜನಿಕ ಜಾಗದಲ್ಲಿ ಕಸ ಎಸೆಯುವವರನ್ನು ಪತ್ತೆಹಚ್ಚಲು ಮಾರ್ಷಲ್‌ಗಳ ಕೊರತೆ ಇದೆ. ಇಂದಿರಾ ಕ್ಯಾಂಟೀನ್‌ಗಳ ಭದ್ರತೆಗೂ ಮಾರ್ಷಲ್‌ಗಳು ಸಾಲುತ್ತಿಲ್ಲ ಎಂದು ಕ್ಯಾ.ರಾಜಬೀರ್‌ ಸಿಂಗ್‌ ತಿಳಿಸಿದರು.

‘ಪ್ರತಿ ವಾರ್ಡ್‌ಗೆ ಒಬ್ಬ ಮಾರ್ಷಲ್‌ ಆದರೂ ಬೇಕು. ಪ್ರಸ್ತುತ 198 ವಾರ್ಡ್‌ಗಳಿಗೆ ಕೇವಲ 80 ಮಂದಿ ಇದ್ದಾರೆ. ಅವರು ಇಂದಿರಾ ಕ್ಯಾಂಟೀನ್‌ಗಳಿಗೆ ಭದ್ರತೆ ಒದಗಿಸುವುದರ ಜೊತೆ ಸಾರ್ವಜನಿಕ ಸ್ಥಳಗಳಲ್ಲಿಕಸ ಬಿಸಾಡುವವರ ಮೇಲೂ ನಿಗಾ ಇಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.