ADVERTISEMENT

ಮಾಹಿತಿ ನೀಡದ ಎಂಜಿನಿಯರ್ ಬಡ್ತಿಗೆ ತಡೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 21:37 IST
Last Updated 14 ಮಾರ್ಚ್ 2020, 21:37 IST

ಬೆಂಗಳೂರು: ‘ದಂಡ ಬೇಕಿದ್ದರೆ ಕಟ್ಟುತ್ತೇನೆ. ಆದರೆ, ಮಾಹಿತಿ ನೀಡಲ್ಲ’ ಎಂದು ಪಟ್ಟು ಹಿಡಿದಿದ್ದ ಬಿಬಿಎಂಪಿ ಎಂಜಿನಿಯರ್‌ಗೆ ರಾಜ್ಯ ಮಾಹಿತಿ ಆಯೋಗದ ಶಿಫಾರಸು ಆಧರಿಸಿ ಎರಡು ವರ್ಷಗಳ ಕಾಲ ಮುಂಬಡ್ತಿ ತಡೆ ಹಿಡಿಯಲು ಸರ್ಕಾರ ಆದೇಶಿಸಿದೆ.

ಯಶವಂತಪುರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಉಮೇಶ್ ಮಾಹಿತಿ ಆಯೋಗದ ನಿರ್ದೇಶನ ಪಾಲಿಸದೆ ಇರುವುದು ಕರ್ತವ್ಯಲೋಪ ಎಂದು ಪರಿಗಣಿಸಿ ಈ ಕ್ರಮ ಕೈಗೊಳ್ಳಲು ಆದೇಶದಲ್ಲಿ ತಿಳಿಸಿದೆ.

‘ಯಶವಂತಪುರ ವಲಯದಲ್ಲಿ ಅನುಮೋದನೆ ಪಡೆದ ನಕ್ಷೆ ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ತಪಾಸಣೆ ನಡೆಸಿರುವ ವರದಿ ಮತ್ತು ಕಟ್ಟಡಗಳ ಮಾಲೀಕರಿಗೆ ನೀಡಿರುವ ನೋಟಿಸ್‌ ಪ್ರತಿಗಳನ್ನು ನೀಡಿ’ ಎಂದು ಕಿರಣ್‌ ಕುಮಾರ್ ಗೌಡ ಎಂಬುವರು ಮಾಹಿತಿ ಹಕ್ಕು ಕಾಯ್ದೆಯಡಿ 2017ರ ಮೇ ನಲ್ಲಿ ಅರ್ಜಿ ಸಲ್ಲಿಸಿ ಕೇಳಿದ್ದರು. ಮಾಹಿತಿ ಸಿಗದ ಕಾರಣ ಆಯೋಗದ ಕದ ತಟ್ಟಿದ್ದರು.

ADVERTISEMENT

ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತ ಎನ್.ಪಿ.ರಮೇಶ್ ಅವರು ಮಾಹಿತಿ ನೀಡುವಂತೆ ಆದೇಶ ಮಾಡಿದ್ದರು. 12 ಬಾರಿ ವಿಚಾರಣೆ ನಡೆಸಿ ನೋಟಿಸ್‌ ನೀಡಿದರೂ ಮಾಹಿತಿ ನೀಡಲಿಲ್ಲ ಎಂಬ ಕಾರಣಕ್ಕೆ ಅವರಿಗೆ ₹25 ಸಾವಿರ ದಂಡ ವಿಧಿಸಿದ್ದರು. ಉಮೇಶ್ ಅವರು ದಂಡದ ಮೊತ್ತ ಪಾವತಿಸಿದ್ದರೇ, ವಿನಃ ಮಾಹಿತಿ ನೀಡಿರಲಿಲ್ಲ.

ಆಯೋಗದ ಆದೇಶಗಳನ್ನು ಪಾಲಿಸದೆ ಶಾಸನಬದ್ಧ ಸಂಸ್ಥೆಗೆ ಅಪಮಾನ ಮಾಡಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ವರದಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಎನ್.ಪಿ. ರಮೇಶ್ ಅವರು ನಿರ್ದೇಶನ ನೀಡಿದ್ದರು. ಈ ಬಗ್ಗೆ ಫೆಬ್ರುವರಿ 27ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.