ADVERTISEMENT

ಬೆಂಗಳೂರು: ನಿರ್ವಹಣೆ ಇಲ್ಲದೇ ಸೊರಗುತ್ತಿದೆ ಯಶವಂತಪುರದ ಆರ್‌ಟಿಒ ಕಚೇರಿ

ಪುಡಿ ಪುಡಿಯಾಗಿ ಬೀಳುತ್ತಿರುವ ಸಿಮೆಂಟ್‌, ಅಲ್ಲಲ್ಲಿ ಕಾಣುತ್ತಿರುವ ಕಬ್ಬಿಣದ ಕಂಬಿಗಳು

ಬಾಲಕೃಷ್ಣ ಪಿ.ಎಚ್‌
Published 20 ಡಿಸೆಂಬರ್ 2025, 0:30 IST
Last Updated 20 ಡಿಸೆಂಬರ್ 2025, 0:30 IST
ಯಶವಂತಪುರ ಆರ್‌ಟಿಒ ಕಚೇರಿ ಕಟ್ಟಡದಲ್ಲಿ ಹುಲ್ಲು ಬೆಳೆದಿದೆ ಮತ್ತು ಸಿಮೆಂಟ್‌ ಇಲ್ಲದೇ ಕಬ್ಬಿಣದ ಕಂಬಿಗಳಷ್ಟೇ ಕೆಲವು ಕಡೆ ಕಾಣುತ್ತಿದೆ.
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಯಶವಂತಪುರ ಆರ್‌ಟಿಒ ಕಚೇರಿ ಕಟ್ಟಡದಲ್ಲಿ ಹುಲ್ಲು ಬೆಳೆದಿದೆ ಮತ್ತು ಸಿಮೆಂಟ್‌ ಇಲ್ಲದೇ ಕಬ್ಬಿಣದ ಕಂಬಿಗಳಷ್ಟೇ ಕೆಲವು ಕಡೆ ಕಾಣುತ್ತಿದೆ. ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಮಳೆ ನೀರು ಜಿನುಗಿ ತುಂಡು ತುಂಡಾಗಿ ಬೀಳುತ್ತಿರುವ ಚಾವಣಿಯ ಸಿಮೆಂಟ್‌, ಬೆಂಡಾಗಿರುವ ಕಿಟಕಿಗಳು, ಮುರಿದು ಹೋಗಿರುವ ಕಿಟಕಿಯ ಗಾಜುಗಳು, ಚಾವಣಿ ಮೇಲೆ ಬೆಳೆದಿರುವ ಹುಲ್ಲು. ಇದರ ನಡುವೆ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯ ಪರಿಸ್ಥಿತಿ...

ಇದು ನಿತ್ಯ ನೂರಾರು ಜನರು ಭೇಟಿ ನೀಡುವ ಯಶವಂತಪುರ ಪ್ರಾದೇಶಿಕ ಸಾರಿಗೆ ಕಚೇರಿಯ ದುಃಸ್ಥಿತಿ. 

ಬಿಬಿಎಂಪಿಗೆ (ಈಗ ಜಿಬಿಎಗೆ) ಸೇರಿದ ಈ ಕಟ್ಟಡವನ್ನು 45 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ನೆಲ ಮತ್ತು ಮೂರು ಮಹಡಿ ಹೊಂದಿರುವ ಕಟ್ಟಡವು ನಿರ್ವಹಣೆ ಇಲ್ಲದೇ ಸೊರಗುತ್ತಿದೆ. ಇದೇ ಕಟ್ಟಡದಲ್ಲಿದ್ದ ಅಬಕಾರಿ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆಗಳು ಈಗಾಗಲೇ ಅಲ್ಲಿಂದ ಬೇರೆಡೆಗೆ ಸ್ಥಳಾಂತರಗೊಂಡಿವೆ. ಪ್ರಾದೇಶಿಕ ಸಾರಿಗೆ ಕಚೇರಿ ಮಾತ್ರವಲ್ಲ ಬಿಬಿಎಂಪಿ ಕಚೇರಿ, ಅಂಚೆ ಕಚೇರಿ, ಬೆಂಗಳೂರು –1 ಕಚೇರಿಗಳು ಇಲ್ಲೇ ಇವೆ.

ADVERTISEMENT

ಕಟ್ಟಡವು ಸುಣ್ಣ ಬಣ್ಣ ಕಾಣದೇ ದಶಕಗಳೇ ಕಳೆದಿವೆ. ಆದರೆ ಮಹಡಿ ಹತ್ತುವ ಮೆಟ್ಟಿಲುಗಳ ಮೂಲೆ ಮೂಲೆಗಳು ಮಾತ್ರ ಕೆಂಪು ಬಣ್ಣದಿಂದ ಕಂಗೊಳಿಸುತ್ತಿವೆ. ಇದು ಕಚೇರಿಗಳಿರುವ ಕಟ್ಟಡ ಎಂದೂ ನೋಡದೇ ಪಾನ್‌ ಬೀಡಾ ತಿನ್ನುವವರು ಮೂಲೆಗಳಲ್ಲಿ ಉಗಿದಿರುವುದೇ ಇದಕ್ಕೆ ಕಾರಣ. ಮೇಲೆ ಶೌಚಾಲಯವಿದ್ದರೆ ಕೆಳಗಿನ ಮಹಡಿಯಲ್ಲಿ ಅದರ ನೀರು ಬೀಳುತ್ತಿರುತ್ತದೆ.

ಎರಡು ಲಿಫ್ಟ್‌ಗಳಿವೆಯಾದರೂ ಕೆಟ್ಟು ನಿಂತಿರುವುದೇ ಹೆಚ್ಚು. ಗುರುವಾರ ಒಂದು ಲಿಫ್ಟ್‌ ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು. ಒಮ್ಮೆಗೆ ಐದು ಜನರಷ್ಟೇ ಹೋಗಲು ಸಾಧ್ಯ ಇರುವುದರಿಂದ ವಯಸ್ಸಾದವರು, ದುರ್ಬಲರು ಕೂಡ ಮೆಟ್ಟಿಲೇರಿಯೇ ಹೋಗುವುದು ಇಲ್ಲಿ ಸಾಮಾನ್ಯವಾಗಿದೆ.

‘ಮಳೆ ಬಂದರೆ ನೀರು ಜಿನುಗಿ ಗೋಡೆಗಳೆಲ್ಲ ಒದ್ದೆಯಾಗಿರುತ್ತದೆ. ಬಿಸಿಲು ಬಂದಾಗ ನೀರು ಜಿನುಗಿದ ಜಾಗವೆಲ್ಲ ಸಣ್ಣ ತುಂಡುಗಳಾಗಿ ಬೀಳತೊಡಗುತ್ತವೆ’ ಎಂದು ಸಾರಿಗೆ ಕಚೇರಿಯ ನೌಕರರು ಅಲವತ್ತುಕೊಂಡರು.

ಕಟ್ಟಡದ ಮೇಲೆ ಗಿಡಗಳು, ಹುಲ್ಲು ಬೆಳೆದಿದೆ. ಹುಲ್ಲು ಬಿಸಿಲಿಗೆ ಒಣಗಿ ಮಳೆ ಶುರುವಾದಾಗ ಚಿಗುರಿಕೊಳ್ಳುತ್ತದೆ. ಗಿಡಗಳನ್ನು ತುಂಡು ಮಾಡಿದರೂ ಅದರ ಬೇರು ಕಟ್ಟಡದ ಒಳಗೆ ಇಳಿದಿರುವುದರಿಂದ ಮತ್ತೆ ದೊಡ್ಡದಾಗುತ್ತದೆ. ಇದರಿಂದ ಕಟ್ಟಡ ದುರ್ಬಲಗೊಳ್ಳುತ್ತಿದೆ ಎಂದು ದೂರಿದರು.

ಹಲವು ಕಡೆಗಳಲ್ಲಿ ಸೀಮೆಂಟ್‌ ಕೆಳಗೆ ಬಿದ್ದು, ಒಳಗೆ ಇರುವ ಕಬ್ಬಿಣದ ಕಂಬಿಗಳು ಕಾಣುತ್ತಿವೆ. ದುರ್ಬಲಗೊಂಡಿರುವ ಕಿಟಕಿಗಳು ಭಾರ ತಾಳಲಾರದೇ ಬಾಗಿವೆ. ಇಲ್ಲಿನ ಸ್ಥಿತಿಯನ್ನು ನೋಡಿದರೆ ಕೆಲಸ ಮಾಡಲು ಹೆದರಿಕೆಯಾಗುತ್ತದೆ. ಆದರೆ, ಕಟ್ಟಡದ ಪಿಲ್ಲರ್‌ಗಳಲ್ಲಿರುವ ದಪ್ಪ ದಪ್ಪ  ಕಂಬಿಗಳನ್ನು ನೋಡಿದರೆ ಏನೂ ಆಗಲ್ಲ ಎಂಬ ಧೈರ್ಯ ಬರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಬೆಂಡ್‌ ಆಗಿರುವ ಕಿಟಕಿ ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಕಟ್ಟಡ ನೆಲಸಮ?

ಈ ಕಟ್ಟಡವನ್ನು ನೆಲಸಮಗೊಳಿಸಲು ವರ್ಷದ ಹಿಂದೆ ಬಿಬಿಎಂಪಿ ನಿರ್ಧರಿಸಿತ್ತು. ಕಚೇರಿಗಳನ್ನು ತೆರವುಗೊಳಿಸುವಂತೆ ಈ ಕಟ್ಟಡದಲ್ಲಿರುವ ವಿವಿಧ ಇಲಾಖೆಗಳಿಗೆ ಪತ್ರ ಬರೆದಿತ್ತು. ಕೆಲವು ಇಲಾಖೆಗಳು ಬೇರೆಡೆಗೆ ಸ್ಥಳಾಂತರಗೊಂಡವು. ಈ ಮಧ್ಯೆ ತಜ್ಞ ಎಂಜಿನಿಯರ್‌ಗಳ ತಂಡವು ಕಟ್ಟಡದ ಪರಿಶೀಲನೆ ನಡೆಸಿತು. ಕಟ್ಟಡವು ಗಟ್ಟಿ ಇದ್ದು ದುರಸ್ತಿಪಡಿಸಬೇಕು ಎಂದು ಹೇಳಿತ್ತು ಎಂದು ಪ್ರಾದೇಶಿಕ ಸಾರಿಗೆ ಕಚೇರಿಯ ಸಿಬ್ಬಂದಿ ಮಾಹಿತಿ ನೀಡಿದರು. ಪ್ರಾದೇಶಿಕ ಸಾರಿಗೆ ಕಚೇರಿಗೆ ಮಾತ್ರವಲ್ಲ ಎರಡನೇ ಮಹಡಿಯಲ್ಲಿರುವ ಅಂಚೆ ಕಚೇರಿಗೆ ಬರುವವರ ಸಂಖ್ಯೆಯೂ ಹೆಚ್ಚಿದೆ. ಹಿರಿಯರು ಪಿಂಚಣಿಗಾಗಿ ಅಂಚೆ ಕಚೇರಿಗೆ ಬರುತ್ತಾರೆ. ಅಲ್ಲದೇ ಮೊದಲ ಮಹಡಿಯಲ್ಲಿ ಇರುವ ಬೆಂಗಳೂರು ಒನ್‌ ಕಚೇರಿ ನಿತ್ಯ ಗಿಜಿಗಿಡುತ್ತಿದೆ. ಅಗತ್ಯವಿರುವ ಮೂಲಸೌಕರ್ಯ ಈ ಕಟ್ಟಡದಲ್ಲಿಲ್ಲ ಎಂದು ದೂರಿದರು.

ಚಾವಣಿ ಬಿರುಕು ಬಿಟ್ಟಿರುವುದು... ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.

ನಿರ್ವಹಣೆ ಮಾಡಬೇಕು: ಆರ್‌ಟಿಒ

ಕಟ್ಟಡವು ಗಟ್ಟಿ ಇದೆ. ಆದರೆ ನಿರ್ವಹಣೆ ಇಲ್ಲದ ಕಾರಣ ದುರ್ಬಲವಾಗಿರುವಂತೆ ಕಾಣುತ್ತಿದೆ. ಕಟ್ಟಡದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಅಗತ್ಯ ಇದ್ದಲ್ಲಿ ದುರಸ್ತಿ ಮಾಡಿ ಬಣ್ಣ ಬಳಿದರೆ ಇನ್ನು ಹಲವು ವರ್ಷ ಇಲ್ಲಿ ಕೆಲಸ ಮಾಡಬಹುದು ಎಂದು ಯಶವಂತಪುರ (ಬೆಂಗಳೂರು ಉತ್ತರ) ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ. ಶ್ರೀನಿವಾಸ ಪ್ರಸಾದ್‌ ತಿಳಿಸಿದರು. 1984ರಿಂದ ಪ್ರಾದೇಶಿಕ ಸಾರಿಗೆ ಕಚೇರಿ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ವರ್ಷದ ಹಿಂದೆಯೇ  ಬಿಬಿಎಂಪಿಗೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಜನರು ಏನಂತಾರೆ?

ದುರಸ್ತಿಗೆ ಕ್ರಮ ಕೈಗೊಳ್ಳಲಿ

ಇಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಕೆಳಗೆ ಇರುವ ಅಂಗಡಿ ಕಚೇರಿಗಳ ಷಟರ್‌ಗಳು ಹಾಳಾಗಿವೆ. ಈ ಕಟ್ಟಡವನ್ನು ನೆಲಸಮ ಮಾಡುತ್ತಾರೆ ಎಂಬ ಸುದ್ದಿ ಹರಡಿದೆ. ನೆಲಸಮ ಮಾಡುವ ಬದಲು ದುರಸ್ತಿ ಮಾಡಿದರೆ ಇನ್ನು 20 ವರ್ಷ ಕಟ್ಟಡ ಗಟ್ಟಿಯಾಗಿ ಇರಲಿದೆ. ಸಂಬಂಧಪಟ್ಟವರು  ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
ಕಾಂತರಾಜ್‌ ಇನ್ಶೂರೆನ್ಸ್‌ ಏಜೆಂಟ್‌ ಯಶವಂತಪುರ

ಲಿಫ್ಟ್ ಸರಿಪಡಿಸಲಿ

ಪಾರ್ಕಿಂಗ್‌ಗೆ ಬೇಕಾದಷ್ಟು ಜಾಗ ಇದೆ. ಕಟ್ಟಡದಲ್ಲಿ ವಿಶಾಲವಾದ ಜಾಗಗಳಿವೆ. ಆದರೆ ಲಿಫ್ಟ್‌ ಸರಿ ಇಲ್ಲ.  ಜನರಿಗೆ ತೊಂದರೆಯಾಗುತ್ತದೆ. ಅವುಗಳನ್ನು ಸರಿಪಡಿಸಬೇಕು.
ಶೇಖರ್‌ ಸ್ಥಳೀಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.