ADVERTISEMENT

ಬಂಗಾರಪ್ಪ ನೆನಪು: 100 ಚಾಲಕರಿಗೆ ವಿಮೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 20:52 IST
Last Updated 26 ಅಕ್ಟೋಬರ್ 2021, 20:52 IST
ಬಂಗಾರಪ್ಪ ಅವರ ಭಾವಚಿತ್ರಕ್ಕೆ ಗೋವಿಂದ ಬಾಬು ಪೂಜಾರಿ, ಈಶ್ವರಾನಂದ ಪುರಿ ಸ್ವಾಮೀಜಿ, ಚಂದ್ರಶೇಖರ್, ಸೈದಪ್ಪ ಗುತ್ತೇದಾರ್‌ ಪುಷ್ಪಾರ್ಚನೆ ಮಾಡಿದರು
ಬಂಗಾರಪ್ಪ ಅವರ ಭಾವಚಿತ್ರಕ್ಕೆ ಗೋವಿಂದ ಬಾಬು ಪೂಜಾರಿ, ಈಶ್ವರಾನಂದ ಪುರಿ ಸ್ವಾಮೀಜಿ, ಚಂದ್ರಶೇಖರ್, ಸೈದಪ್ಪ ಗುತ್ತೇದಾರ್‌ ಪುಷ್ಪಾರ್ಚನೆ ಮಾಡಿದರು   

ಬೆಂಗಳೂರು: ದಿವಂಗತ ಎಸ್. ಬಂಗಾರಪ್ಪ ಅವರ ಜನ್ಮದಿನ ಪ್ರಯುಕ್ತ ನೂರು ಮಂದಿ ವಾಹನ ಚಾಲಕರಿಗೆ ಬ್ರಹ್ಮ ಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಘ ಉಚಿತ ಜೀವ ವಿಮೆ ವಿತರಣೆ ಹಮ್ಮಿಕೊಂಡಿತ್ತು.

ಬಂಗಾರಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಉದ್ಯಮಿ, ಶ್ರೀ ನಾರಾಯಣಗುರು ಕೋ–ಆಪರೇಟಿವ್ ಸೊಸೈಟಿ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ, ‘ಬಂಗಾರಪ್ಪ ಕೇವಲ ನಮ್ಮ ಜನಾಂಗಕ್ಕೆ ಸೀಮಿತವಲ್ಲ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಎಲ್ಲ ಜನಾಂಗದವರಿಗೆ ಉತ್ತಮ ಕಾರ್ಯಕ್ರಮಗಳನ್ನು ಜಾರಿ ತಂದಿದ್ದಾರೆ‌’ ಎಂದರು.

ಆಶೀರ್ವಚನ ನೀಡಿದ ಉಡುಪಿಯ ಶಂಕರಪುರದ ಈಶ್ವರಾನಂದ ಪುರಿ ಸ್ವಾಮೀಜಿ, ‘ನನ್ನ ಬಾಲ್ಯದ ದಿನಗಳಲ್ಲಿ ಬಂಗಾರಪ್ಪ ಅವರ ಕಾರ್ಯಗಳನ್ನು ದೂರದಿಂದ ಗಮನಿಸಿದೆ. ಅವರ ಚುನಾವಣಾ ಪ್ರಚಾರ ಭಿತ್ತಿಪತ್ರಗಳ ಟೋಪಿಗಳನ್ನು ಹಾಕಿಕೊಂಡು ಆಟವಾಡಿದ್ದೆವು. ಅವರ ಜನ್ಮದಿನದಂದು ವಾಹನ ಚಾಲಕರಿಗೆ ವಿಮೆ ವಿತರಿಸುವ ಭಾಗ್ಯ ದೊರೆತಿದೆ’ ಎಂದರು.

ADVERTISEMENT

‘ಇತೀಚಿನ ದಿನಗಳಲ್ಲಿ ಮತಾಂತರ ನಡೆಯುತ್ತಿದೆ. ಹಿಂದೂ ಹೆಣ್ಣು ಮಕ್ಕಳು ಇಂಥ ಕೃತ್ಯಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ಹಿಂದೂ ಧರ್ಮ ಉಳಿಸಲು ಎಲ್ಲರೂ ಶ್ರಮಿಸಬೇಕಿದೆ. ಸಂಘಟನೆ ನಾರಾಯಣ ಗುರುಗಳ ತತ್ವ, ಸಿದ್ದಾಂತ ಪ್ರಚುರಪಡಿಸಬೇಕು’ ಎಂದರು.

ಆರ್ಯ ಈಡಿಗ ರಾಜ್ಯ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ‘ಆಶ್ರಯ ಯೋಜನೆಯನ್ನುಬಂಗಾರಪ್ಪ ಅವರು ಜಾರಿಗೆ ತಂದಿದ್ದರಿಂದ ಲಕ್ಷಾಂತರ ಬಡವರು ಮನೆ ಹೊಂದುವಂತಾಗಿದೆ’ ಎಂದು ತಿಳಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೈದಪ್ಪ ಗುತ್ತೇದಾರ್ ಮಾತನಾಡಿ, ‘ಬಂಗಾರಪ್ಪ ಅವರು ಜನಮನಗೆದ್ದ ಅಪರೂಪದ ನಾಯಕ. ಕೊರೊನಾ ಸಂದರ್ಭದಲ್ಲಿ ಸಾಕಷ್ಟು ನೋವು ಅನುಭವಿಸಿದ ನೂರು ವಾಹನ ಚಾಲಕರಿಗೆ ಬಂಗಾರಪ್ಪ ಅವರ ನೆನಪಿಗಾಗಿ ಉಚಿತವಾಗಿ ಜೀವವಿಮಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರೀಮಿಯಂ ಮೊತ್ತ ಸಂಘ ಭರಿಸಲಿದೆ’ ಎಂದರು.

ಸಂಘದ ಉಪಾಧ್ಯಕ್ಷ ಪ್ರಕಾಶ್ ಕೊಟ್ಯಾನ್, ಖಚಾಂಚಿ ಲೋಹಿತ್ ನಾಯಕ, ರವಿದಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.