ADVERTISEMENT

ಹುತಾತ್ಮನಂತೆಯೇ ಸೈರನ್‌ ಮೌನ: ಗಂಟೆ ಮೊಳಗಿದರೂ ಮಾತು ನಿಲ್ಲಿಸದ ಸಿಎಂ, ಡಿಸಿಎಂ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 19:47 IST
Last Updated 30 ಜನವರಿ 2019, 19:47 IST
ಮೌನಾಚರಣೆ ನಡೆಯುತ್ತಿದ್ದ ವೇಳೆ ಶಾಸಕ ರಘು ಆಚಾರ್, ಸಚಿವ ಸಾ.ರಾ.ಮಹೇಶ್, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಿರುವುದನ್ನು ಕಂಡ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅವರನ್ನು ಎಚ್ಚರಿಸಿದರು. (ಎಡದಿಂದ) ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಇದ್ದಾರೆ –ಪ್ರಜಾವಾಣಿ ಚಿತ್ರ
ಮೌನಾಚರಣೆ ನಡೆಯುತ್ತಿದ್ದ ವೇಳೆ ಶಾಸಕ ರಘು ಆಚಾರ್, ಸಚಿವ ಸಾ.ರಾ.ಮಹೇಶ್, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಿರುವುದನ್ನು ಕಂಡ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅವರನ್ನು ಎಚ್ಚರಿಸಿದರು. (ಎಡದಿಂದ) ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹುತಾತ್ಮರ ದಿನದಂದು ಮಹಾತ್ಮ ಗಾಂಧಿ ಅವರಿಗೆ ಗೌರವ ಅರ್ಪಿಸುವ ಕ್ಷಣವನ್ನು ನೆನಪಿಸಲು ನಗರದೆಲ್ಲೆಡೆ ಮೊಳಗುತ್ತಿದ್ದ ಸೈರನ್‌ ಇದೀಗ ಮೌನವಾಗಿದೆ.

‘ಹುತಾತ್ಮರ ದಿನ ಬೆಳಿಗ್ಗೆ 11 ಗಂಟೆಗೆ ಒಂದು ನಿಮಿಷ ಇರುವಾಗಲೇ ನಗರದ ವಿವಿಧ ಸ್ಥಳಗಳಲ್ಲಿ ಸೈರನ್‌ ಮೊಳಗಿಸಲಾಗುತ್ತಿತ್ತು. ಜನರು ಅಲ್ಲಲ್ಲೇ ನಿಂತು ಒಂದು ಕ್ಷಣ ಮೌನಾಚರಿಸಿ ಮುಂದೆ ಹೋಗುತ್ತಿದ್ದರು. ಆ ಪರಿಪಾಠ ಇದೀಗ ನಿಂತು ಹೋಗಿದೆ. ಹುತಾತ್ಮನ ತತ್ವಗಳಂತೆಯೇ ಇದು ಸಹ ಮರೆಗೆ ಸರಿದಿದೆ’ ಎಂದು ‘ಪ್ರಜಾವಾಣಿ’ಗೆ ಮಾತಿಗೆ ಸಿಕ್ಕ ಸ್ವಾತಂತ್ರ್ಯ ಹೋರಾಟಗಾರರು, ಹಿರಿಯ ನಾಗರಿಕರು ಬೇಸರ ವ್ಯಕ್ತಪಡಿಸಿದರು.

ಅಂದಿನ ನೆನಪು: ‘ಸೈರನ್‌ ಮೊಳಗಿಸಲು ಸರ್ಕಾರದ ಆದೇಶವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯಾವುದೇ ಸಂಸ್ಥೆಯ ಸೈರನ್‌ಗಳು ಕೂಗುತ್ತಿಲ್ಲ. ಎಂ.ಜಿ.ರಸ್ತೆಯ ಮಹಾತ್ಮ ಗಾಂಧಿ ಅವರ ಧ್ಯಾನಾಸಕ್ತ ಪ್ರತಿಮೆ, ಗಾಂಧಿ ಸ್ಮಾರಕ ಟ್ರಸ್ಟ್‌, ವಿಧಾನಸೌಧ, ಕಬ್ಬನ್‌ ಪಾರ್ಕ್‌, ಬಹುಮಹಡಿ ಕಟ್ಟಡ, ಬಿಬಿಎಂಪಿ ಹೀಗೆ ಹಲವು ಕಡೆಗಳಲ್ಲಿ ಸೈರನ್‌ ಮೊಳಗಿಸಲಾಗುತ್ತಿತ್ತು. ಮೌನಾಚರಣೆಗೆ ಇದು ಅನುಕೂಲವಾಗುತ್ತಿತ್ತು’ ಎಂದು ಅವರು ಸ್ಮರಿಸಿದರು.

ADVERTISEMENT

‘ಕಳೆದ ಎಂಟು ವರ್ಷಗಳಿಂದ ಎಲ್ಲಿಯೂ ನಾನು ಸೈರನ್‌ ಧ್ವನಿಯನ್ನೇ ಕೇಳಿಲ್ಲ. ಆದರೆ, ಅಂದಿನ ದಿನಗಳಲ್ಲಿ ನಗರದೆಲ್ಲೆಡೆ ಸೈರನ್‌ಗಳು ಮೊಳಗುತ್ತಿದ್ದವು. ಮಹಾತ್ಮನ ಸ್ಮರಣೆ ನಮ್ಮ ಕರ್ತವ್ಯ ಎಂದು ನೆನಪು ಮಾಡಿಕೊಡುವ ಈ ಜಾಗೃತಿ ಗಂಟೆಗಳು ಮೊಳಗಿದರೆ, ಒಂದು ಕ್ಷಣ ಎಲ್ಲರೂ ನಿಂತ ಜಾಗದಲ್ಲೇ ಮೌನಾಚರಣೆ ಮಾಡುತ್ತಿದ್ದೆವು’ ಎಂದುಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಮೆಲುಕು ಹಾಕಿದರು.

‘ಸೈರನ್‌ಗಳನ್ನು ಏಕೆ ಸ್ಥಗಿತಗೊಳಿಸಿದ್ದಾರೋ ಗೊತ್ತಿಲ್ಲ. ಆದರೆ, ಅವುಗಳನ್ನು ಪುನರಾರಂಭಿಸುವುದು ಉತ್ತಮ. ಹುತಾತ್ಮರ ಮೇಲಿನ ಗೌರವಕ್ಕಾಗಿ ನಾವು ಒಂದು ಕ್ಷಣವನ್ನಾದರೂ ಮೀಸಲಿಡಬೇಕಲ್ಲವೇ’ ಎಂದು ಅವರು ಪ್ರಶ್ನಿಸಿದರು.

ಮಲ್ಲೇಶ್ವರದ ಕೆ.ವಿ.ನರೇಂದ್ರ, ‘ಇನ್ನೇನು ಸೈರನ್‌ ಮೊಳಗುತ್ತದೆ ಎನ್ನುವಷ್ಟರಲ್ಲಿಯೇ ಸ್ನೇಹಿತರೆಲ್ಲ ಒಂದೆಡೆ ಸೇರಿ, ಮಹಾತ್ಮರಿಗೆ ಗೌರವ ಸಲ್ಲಿಸುತ್ತಿದ್ದೆವು. ಈಗ ಅದೆಲ್ಲ ಬರೀ ನೆನಪಾಗಿ ಉಳಿದಿದೆ. ಗಾಂಧೀಜಿ ಅವರ 150ನೇ ಜಯಂತಿ ವರ್ಷವಾದ ಈ ಸಂದರ್ಭದಲ್ಲಾದರೂ ಹುತಾತ್ಮರಿಗೆ ಗೌರವ ಕೊಡುವ ಈ ಸಂಪ್ರದಾಯವನ್ನು ಪುನರಾರಂಭಿಸಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

ಹುತಾತ್ಮರ ಸ್ಮರಣಾರ್ಥವಾಗಿ ನಗರದಲ್ಲಿ ಎಲ್ಲೆಲ್ಲಿ ಸೈರನ್‌ಗಳು, ಸೈನಿಕರ ಬಂದೂಕುಗಳು ಲಭ್ಯವಿವೆಯೋ ಅಲ್ಲೆಲ್ಲ ಎರಡು ನಿಮಿಷಗಳ ಮೌನ ಪ್ರಾರಂಭವನ್ನು ಸೂಚಿಸಲು ಬೆಳಿಗ್ಗೆ 10.59ಕ್ಕೆ ಅವುಗಳ ಶಬ್ದ ಮೊಳಗಬೇಕು. ಮೌನ ಮುಕ್ತಾಯದ ನಂತರ ಮತ್ತೆ ಸೈರನ್‌, ಬಂದೂಕಿನ ಶಬ್ದ ಮೊಳಗಬೇಕು ಎಂದು ಸರ್ಕಾರದ ಆದೇಶವಿದ್ದರೂ ಪಾಲನೆಯಾಗುತ್ತಿಲ್ಲ.

ಗಂಟೆ ಮೊಳಗಿದರೂ ನಿಲ್ಲದ ಮಾತುಕತೆ

ವಿಧಾನಸೌಧದಲ್ಲಿ ಹುತಾತ್ಮರ ದಿನಾಚರಣೆ ನಿಮಿತ್ತ ಬೆಳಿಗ್ಗೆ ನಡೆಯುತ್ತಿದ್ದ ಮೌನಾಚರಣೆ ವೇಳೆ, ಮೌನ ಪ್ರಾರಂಭದ ಗಂಟೆ ಮೊಳಗಿದರೂ ಅದರ ಬಗೆಗೆ ತಿಳಿಯದ ಶಾಸಕ ರಘು ಆಚಾರ್, ಸಚಿವ ಸಾ.ರಾ. ಮಹೇಶ್, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತಿನಲ್ಲಿ ತೊಡಗಿದ್ದರು.

ಪಕ್ಕದಲ್ಲೇ ನಿಂತಿದ್ದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರನ್ನು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.