ADVERTISEMENT

ಪ್ರವಾಸಕ್ಕೆ ಹೋಗಿದ್ದವರ ಫ್ಲ್ಯಾಟ್‌ನಲ್ಲಿ ಕಳ್ಳತನ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 16:11 IST
Last Updated 17 ಜೂನ್ 2022, 16:11 IST
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ   

ಬೆಂಗಳೂರು: ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

‘ಅಮೃತಹಳ್ಳಿ ವರದರಾಜ್ ಬಡಾವಣೆಯ ಇಸೈರಾಜ್ ಅಲಿಯಾಸ್ ಕುಂಟ (26) ಹಾಗೂ ಕೊಡಿಗೇಹಳ್ಳಿ ಧನಲಕ್ಷ್ಮಿ ಬಡಾವಣೆಯ ಆನಂದ್‌ಕುಮಾರ್ ಅಲಿಯಾಸ್ ಡಿಜೆ (22) ಬಂಧಿತರು. ಇವರಿಂದ ₹ 19 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಪ್ರವೀಣ್ ಫ್ಲ್ಯಾಟ್‌ಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಮೇ 25ರಂದು ಪ್ರವಾಸಕ್ಕೆ ಹೋಗಿದ್ದರು. ಮೇ 27ರಂದು ರಾತ್ರಿ ಮನೆಗೆ ವಾಪಸು ಬಂದು ನೋಡಿದಾಗ, ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿ ಕಳ್ಳತನವಾಗಿದ್ದು ಗೊತ್ತಾಗಿತ್ತು. ನಂತರ ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿದರು.

ADVERTISEMENT

‘ಕೆಲ ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಫ್ಲ್ಯಾಟ್‌ನಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ರಾತ್ರಿ ಕಳ್ಳತನ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.

‘ಹಲವು ತಿಂಗಳಿನಿಂದ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಅಮೃತಹಳ್ಳಿ, ಯಲಹಂಕ, ಸಂಜಯನಗರ, ದೇವನಹಳ್ಳಿ ಹಾಗೂ ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲೂ ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದುಬಂದಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.