ADVERTISEMENT

‘ಸತ್ತುಹೋದ ಸಾಂಸ್ಕೃತಿಕ ಕ್ಷೇತ್ರ’

ಕಲಾವಿದ ‘ಮುಖ್ಯಮಂತ್ರಿ’ ಚಂದ್ರು ಬೇಸರ *ಇಬ್ಬರು ಸಾಧಕರಿಗೆ ‘ಸಂಸ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 17:00 IST
Last Updated 8 ಫೆಬ್ರುವರಿ 2023, 17:00 IST
ಸಮಾರಂಭದಲ್ಲಿ ಶಶಿಕಲಾ ಎನ್. ಹಾಗೂ ಗಣೇಶ್ ಪಿ.ಬಿ. ಅವರಿಗೆ ‘ಸಂಸ ಪ್ರಶಸ್ತಿ’ ಪ್ರದಾನ ಮಾಡಲಾಯಿತು. (ಎಡದಿಂದ) ಜಗದೀಶ್ ಜಾಲ, ವಲ್ಲಭ ಸೂರಿ, ಕಲಾವಿದೆ ಗಿರಿಜಾ ಲೋಕೇಶ್, ಎ. ಪದ್ಮನಾಭ, ಕೆ.ವಿ. ನಾಗರಾಜಮೂರ್ತಿ, ಚಲನಚಿತ್ರ ಕಲಾವಿದ ಪ್ರಮೋದ್ ಕೆ. ಶೆಟ್ಟಿ, ಮಾಯಾಬ್ರಹ್ಮಚಾರ್, ಕನ್ನಳ್ಳಿ ಮಹದೇವಯ್ಯ ಹಾಗೂ ‘ಮುಖ್ಯಮಂತ್ರಿ’ ಚಂದ್ರು ಇದ್ದಾರೆ. –ಪ್ರಜಾವಾಣಿ ಚಿತ್ರ
ಸಮಾರಂಭದಲ್ಲಿ ಶಶಿಕಲಾ ಎನ್. ಹಾಗೂ ಗಣೇಶ್ ಪಿ.ಬಿ. ಅವರಿಗೆ ‘ಸಂಸ ಪ್ರಶಸ್ತಿ’ ಪ್ರದಾನ ಮಾಡಲಾಯಿತು. (ಎಡದಿಂದ) ಜಗದೀಶ್ ಜಾಲ, ವಲ್ಲಭ ಸೂರಿ, ಕಲಾವಿದೆ ಗಿರಿಜಾ ಲೋಕೇಶ್, ಎ. ಪದ್ಮನಾಭ, ಕೆ.ವಿ. ನಾಗರಾಜಮೂರ್ತಿ, ಚಲನಚಿತ್ರ ಕಲಾವಿದ ಪ್ರಮೋದ್ ಕೆ. ಶೆಟ್ಟಿ, ಮಾಯಾಬ್ರಹ್ಮಚಾರ್, ಕನ್ನಳ್ಳಿ ಮಹದೇವಯ್ಯ ಹಾಗೂ ‘ಮುಖ್ಯಮಂತ್ರಿ’ ಚಂದ್ರು ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು‌: ‘ಇತ್ತೀಚಿನ ದಿನಗಳಲ್ಲಿ ನಾಟಕಗಳನ್ನು ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಮಾಡಿದರೂ ನೋಡುಗರು ಬರುತ್ತಿಲ್ಲ. ಸಾಂಸ್ಕೃತಿಕ ಕ್ಷೇತ್ರ ಸತ್ತುಹೋಗಿದೆ’ ಎಂದು ಕಲಾವಿದ ‘ಮುಖ್ಯಮಂತ್ರಿ’ ಚಂದ್ರು ಬೇಸರ ವ್ಯಕ್ತಪಡಿಸಿದರು.

ಭಾರತ ಯಾತ್ರಾ ಕೇಂದ್ರ ಹಾಗೂ ರಂಗಸೌರಭ ಜಂಟಿಯಾಗಿ ನಗರದಲ್ಲಿ ಬುಧವಾರ ಹಮ್ಮಿಕೊಂಡ ಸೌರಭ 2023 ಸಮಾರಂಭದಲ್ಲಿ ಗಣೇಶ್ ಪಿ.ಬಿ. ಹಾಗೂ ಶಶಿಕಲಾ ಎನ್. ಅವರಿಗೆ ‘ಸಂಸ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು. ‘ಈ ಹಿಂದೆ ರಂಗಭೂಮಿಯಲ್ಲಿ ಅವಕಾಶ ಪಡೆಯುವುದು ಕಷ್ಟವಾಗಿತ್ತು. 1980ರಲ್ಲಿ ಸಂಸ ರಂಗಮಂದಿರದಲ್ಲಿ ‘ಮುಖ್ಯಮಂತ್ರಿ’ ನಾಟಕವನ್ನು ಪ್ರಥಮ ಬಾರಿಗೆ ಪ್ರದರ್ಶಿಸಿದೆ. ಈಗ ಆ ನಾಟಕ 800 ಪ್ರದರ್ಶನಗಳು ಆಗಿವೆ. ಕೈ–ಕಾಲುಗಳು ಗಟ್ಟಿ ಇರುವವರೆಗೂ ನಾಟಕ ಪ್ರದರ್ಶನ ಮಾಡುತ್ತೇನೆ. ಸಿನಿಮಾ ರಂಗದಲ್ಲಿ ಹೆಸರು ಮಾಡಿದರೂ ರಂಗಭೂಮಿಯನ್ನು ಬಿಟ್ಟಿಲ್ಲ. ಆಧುನಿಕ ಯುಗದಲ್ಲಿ ಆರ್ಥಿಕ ಭದ್ರತೆಯಿಂದ ಕೆಲವರು ಮೂಲ ಕಲೆಯನ್ನು ಮರೆಯುತ್ತಾರೆ’ ಎಂದು ಹೇಳಿದರು.

‘ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ನಾವು ಅತಂತ್ರರಾಗಿಯೇ ಇದ್ದೇವೆ. ಇದಕ್ಕೆ ಅನುಭವದ ಕೊರತೆ ಮೂಲ ಕಾರಣ’ ಎಂದು ತಿಳಿಸಿದರು.

ADVERTISEMENT

ಭಾರತ ಯಾತ್ರಾ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕೆ.ವಿ. ನಾಗರಾಜಮೂರ್ತಿ, ‘ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ನಾಟಕಕಾರರೆನಿಸಿರುವ ಸ್ವಾಮಿ ವೆಂಕಟಾದ್ರಿ ಅಯ್ಯರ್ ಅವರೇ ಸಂಸ. ಕರ್ನಾಟಕದ ಮೊಟ್ಟ ಮೊದಲ ಬಯಲು ರಂಗಮಂದಿರವನ್ನು ಅವರ ಹೆಸರಿನಲ್ಲಿ ನಿರ್ಮಿಸಲಾಗಿದೆ. ಅವರು ಅದ್ಭುತ ನಾಟಕಕಾರರಾಗಿದ್ದರು’ ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತ ಗಣೇಶ ಪಿ.ಬಿ., ‘ಕನ್ನಡ ರಂಗಭೂಮಿಗೆ ಸದಭಿರುಚಿಯ ಪ್ರೇಕ್ಷಕರನ್ನು ಹುಟ್ಟು ಹಾಕಿದರೂ ಸಾರ್ಥಕ ಅಂದುಕೊಂಡಿರುವೆ. ಎಲ್ಲ ಕಾಲೇಜುಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ನಾನು ಪ್ರಾಂಶುಪಾಲನಾಗಿ ಕಾರ್ಯನಿರ್ವಹಿಸುವ ಕಾಲೇಜುಗಳಲ್ಲಿ ರಂಗ ಚಟುವಟಿಕೆಗಳಿಗೆ ಅವಕಾಶ ಇರದಿದ್ದಲ್ಲಿ ಅಲ್ಲಿ ಸೇವೆಯನ್ನು ಮುಂದುವರಿಸುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.