ADVERTISEMENT

ಸನಾತನ ಧರ್ಮ ಘಾಸಿಗೊಳಿಸುವ ಶಕ್ತಿಗಳ ಹೆಚ್ಚಳ: ವಿಶ್ವೇಶ್ವರ ಹೆಗಡೆ ಕಾಗೇರಿ

‘ಸಂಸ್ಕಾರೋತ್ಸವ’ ಸಮಾರಂಭ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 23:35 IST
Last Updated 31 ಆಗಸ್ಟ್ 2025, 23:35 IST
ಸಮಾರಂಭದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಗೌರವಿಸಿದರು. ಹರಿಪ್ರಸಾದ್ ಪೆರಿಯಪ್ಪು, ವಿನಾಯಕ ತೊರವಿ ಹಾಗೂ ಶ್ರೀಧರ ಜೆ. ಭಟ್ ಕೆಕ್ಕಾರು ಉಪಸ್ಥಿತರಿದ್ದರು
ಸಮಾರಂಭದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಗೌರವಿಸಿದರು. ಹರಿಪ್ರಸಾದ್ ಪೆರಿಯಪ್ಪು, ವಿನಾಯಕ ತೊರವಿ ಹಾಗೂ ಶ್ರೀಧರ ಜೆ. ಭಟ್ ಕೆಕ್ಕಾರು ಉಪಸ್ಥಿತರಿದ್ದರು   

ಬೆಂಗಳೂರು: ‘ರಾಷ್ಟ್ರದ ಉದ್ದಗಲಕ್ಕೂ ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಘಾಸಿಗೊಳಿಸುವ ಶಕ್ತಿಗಳು ಹೆಚ್ಚುತ್ತಿವೆ. ಭಾರತಕ್ಕೆ ಇದು ಹೊಸತಲ್ಲವಾದರೂ, ಇದನ್ನು ತಡೆಯದಿದ್ದರೆ ಮುಂದಿನ ಪೀಳಿಗೆಯ ಮೇಲೆ ಪರಿಣಾಮ ಬೀರುತ್ತದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.  

ಅಖಿಲ ಹವ್ಯಕ ಮಹಾಸಭಾವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸಂಸ್ಕಾರೋತ್ಸವ’ ಸಮಾರಂಭ ಉದ್ಘಾಟಿಸಿದ ಅವರು, ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸ್ಮರಣ ಸಂಚಿಕೆ ‘ಸಹಸ್ರಚಂದ್ರ’ ಬಿಡುಗಡೆಮಾಡಿದರು. ಬಳಿಕ ಮಾತನಾಡಿದ ಅವರು, ‘ಪುನರ್ಜನ್ಮ ಮತ್ತು ಕರ್ಮದ ಫಲದ ಮೇಲೆ ನಂಬಿಕೆ ಇದ್ದರೆ ಸಂಸ್ಕಾರಯುತ ಜೀವನ ಸಹಜವಾಗಿ ಬರುತ್ತದೆ. ಸನಾತನ ಸಂಸ್ಕೃತಿಯಲ್ಲಿ ಇದು ಅಂತರ್ಗತವಾಗಿ ಬೆಳೆದು ಬಂದಿದೆ. ಮುಂದಿನ ಜನಾಂಗಕ್ಕೂ ಸಂಸ್ಕಾರದ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಸಂಸ್ಕಾರೋತ್ಸವ ಮಾದರಿ ಕಾರ್ಯ’ ಎಂದು ಶ್ಲಾಘಿಸಿದರು.

‘ಹರಿದು ಹಂಚಿಹೋಗಿದ್ದ ಪುಟ್ಟ ದೇಶ ಇಸ್ರೇಲ್, ಮತ್ತೆ ಸಂಘಟನೆಗೊಂಡು ಜಗತ್ತಿನಲ್ಲಿ ಶಕ್ತಿಶಾಲಿಯಾಗಿ ಪುಟಿದ್ದೆದಿದೆ. ಅದೇ ರೀತಿ, ಹವ್ಯಕರು ಎಲ್ಲೆ ಇದ್ದರೂ ಸಂಘಟನೆಯನ್ನು ಬೆಳೆಸಬೇಕು. ಜಗತ್ತು ಜ್ಞಾನಾಧಾರಿತವಾಗಿ ವೇಗವಾಗಿ ಬೆಳೆಯುತ್ತಿದೆ. ಹವ್ಯಕ ಸಮಾಜ ಜ್ಞಾನದ ಮೂಲಕವೇ ಸಮಾಜದಲ್ಲಿ ಗುರುತಿಸಿಕೊಂಡಿದ್ದು, ಈ ಸಮಾಜವು ಇನ್ನಷ್ಟು ಸಂಘಟನೆಯಾಗಬೇಕು. ದೇಶ ಹಾಗೂ ರಾಜ್ಯದಲ್ಲಿ ಯಾವ ಸಮುದಾಯದ ಸಂಖ್ಯೆ ಎಷ್ಟು ಎಂಬ ಚರ್ಚೆ ನಡೆದಿದೆ. ಹವ್ಯಕ ಸಮುದಾಯದ ಸಂಖ್ಯೆಯು ಕೆಲವೇ ಲಕ್ಷದಷ್ಟಿದೆ. ಆದ್ದರಿಂದ ಅಲ್ಪಸಂಖ್ಯಾತರ ಸ್ಥಾನಮಾನ ನಿಜವಾಗಿಯೂ ಲಭಿಸಬೇಕಿರುವುದು ಹವ್ಯಕರಿಗೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಸಂಸ್ಕಾರಗಳ ಮಹತ್ವ ಹಾಗೂ ಪ್ರಸ್ತುತತೆ’ ಕುರಿತು ಮಾತನಾಡಿದ ವಿದ್ವಾಂಸ ಆರ್. ಗಣೇಶ್, ‘ಸನಾತನ ಧರ್ಮದ ಕುರಿತಾದ ಶ್ರದ್ಧೆ ಹಾಗೂ ರಾಷ್ಟ್ರಭಕ್ತಿಯ ವಿಚಾರದಲ್ಲಿ ಹವ್ಯಕ ಸಮುದಾಯ ಬೇರೆಲ್ಲರಿಗಿಂತ ದೊಡ್ದಮಟ್ಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಕಾಲದ ಪ್ರಭಾವ ಎಲ್ಲರ ಮೇಲೂ ಇದ್ದು, ನಾವು ನಿಂತ ನೀರಾಗಿರದೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಉಳಿಸಿಕೊಳ್ಳಬೇಕು’ ಎಂದು ಹೇಳಿದರು. 

‘ಜಪ ತಪಗಳೊಂದಿಗೆ ಆಧುನಿಕ ಜೀವನ’ ವಿಷಯದ ಬಗ್ಗೆ ಮಾತನಾಡಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ‘ಇಂದು ನಮ್ಮ ಶ್ರದ್ಧಾಸ್ಥಾನಗಳ ಮೇಲೆ ಆಕ್ರಮಣಗಳು ನಡೆಯುತ್ತಿದ್ದು, ನಮ್ಮ ನಂಬಿಕೆಯನ್ನು ಅಳಿಸುವ ಕೆಲಸಗಳು ನಡೆಯುತ್ತಿವೆ. ತಲೆಮಾರುಗಳಿಂದ ಬಂದ ನಂಬಿಕೆಯನ್ನು ಅಳಿಸುವುದು ಸುಲಭವಲ್ಲ’ ಎಂದು ಅಭಿಪ್ರಾಯಪಟ್ಟರು. 

ಇದಕ್ಕೂ ಪೂರ್ವದಲ್ಲಿ 108 ಮಾತೆಯರಿಂದ ಕುಂಕುಮಾರ್ಚನೆ, 108 ವೈದಿಕರಿಂದ ರುದ್ರಾಭಿಷೇಕ, ಶಂಕರ ಪಲ್ಲಕ್ಕಿ ಉತ್ಸವ, ಸಿದ್ಧಿವಿನಾಯಕ ದೇವರಿಗೆ ರಂಗಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಹವ್ಯಕ ಸಮಾಜದ ಸಂಸ್ಕಾರ ಶಕ್ತಿ ಎಲ್ಲ ಸಮುದಾಯಕ್ಕೆ ಮಾದರಿಯಾಗಿದೆ. ಸಂಸ್ಕಾರೋತ್ಸವದ ಮೂಲಕ ಹವ್ಯಕರಲ್ಲಿನ ಸಂಸ್ಕಾರ ಪುನಶ್ಚೇತನಗೊಳಿಸುವ ಕೆಲಸ ಶ್ಲಾಘನೀಯ.
-ವಿನಾಯಕ ತೊರವಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.