ಎಸ್‌ಜಿಐಟಿಒ ಆವರಣದಲ್ಲಿ ತಲೆಯೆತ್ತಿರುವ ಹೈಟೆಕ್ ಕ್ರೀಡಾ ಚಿಕಿತ್ಸಾ ಸಂಕೀರ್ಣದ ಹೊರನೋಟ
– ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಬೆಂಗಳೂರು: ಕ್ರೀಡಾ ಗಾಯಗಳಿಗೆ ಚಿಕಿತ್ಸೆ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ಒದಗಿಸಲು ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ (ಎಸ್‌ಜಿಐಟಿಒ) ಆವರಣದಲ್ಲಿ ತಲೆಯೆತ್ತಿರುವ ಹೈಟೆಕ್ ಕ್ರೀಡಾ ಚಿಕಿತ್ಸಾ ಸಂಕೀರ್ಣ ಗಡುವು ಮೀರಿದರೂ ಸೇವೆಗೆ ತೆರೆದುಕೊಂಡಿಲ್ಲ.
ಈ ಕಟ್ಟಡದ ಶಿಲಾನ್ಯಾಸವನ್ನು 2021ರ ಜುಲೈನಲ್ಲಿಯೇ ನೆರವೇರಿಸಲಾಗಿತ್ತು. ಆ ವೇಳೆ ಕಟ್ಟಡ ನಿರ್ಮಾಣಕ್ಕೆ 15 ತಿಂಗಳ ಗಡುವು ನೀಡಲಾಗಿತ್ತು. ಆದರೆ, ಕೋವಿಡ್ ಸೇರಿ ವಿವಿಧ ಕಾರಣಗಳಿಂದ ನಿರ್ಮಾಣ ಕಾಮಗಾರಿ ವಿಳಂಬವಾಗಿತ್ತು. ಇಷ್ಟಾಗಿಯೂ ಕಳೆದ ವರ್ಷವೇ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಸಂಸ್ಥೆಗೆ ಪೂರ್ಣಾವಧಿ ನಿರ್ದೇಶಕರಿಲ್ಲದಿರುವುದೂ ಸೇರಿ ವಿವಿಧ ಕಾರಣ ಒಳಾಂಗಣ ವಿನ್ಯಾಸದಂತಹ ಕಾಮಗಾರಿಗೆ ಹಿನ್ನಡೆಯಾಗಿತ್ತು. ಈಗ ಒಳಾಂಗಣಕ್ಕೂ ಅಂತಿಮ ಸ್ಪರ್ಶ ನೀಡಿ, ವೈದ್ಯಕೀಯ ಉಪಕರಣಗಳನ್ನು ಅಳವಡಿಕೆ ಮಾಡಲಾಗಿದೆ. ಈ ಕೇಂದ್ರಕ್ಕೆ ಅಗತ್ಯ ಫಿಸಿಯೋಥೆರಪಿಸ್ಟ್‌ಗಳ ನೇಮಕಾತಿ ಪ್ರಕ್ರಿಯೆ ನಡೆಯಬೇಕಿದೆ. ಕ್ರೀಡಾ ಸಂಕೀರ್ಣವು ಉದ್ಘಾಟನೆಗೊಳ್ಳದಿರುವುದರಿಂದ ರೋಗಿಗಳ ಸಹಾಯಕರು ಕಟ್ಟಡದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದಾರೆ.
ಅಪಘಾತ ಮತ್ತು ಮೂಳೆ ಚಿಕಿತ್ಸೆಗೆ ಸಂಸ್ಥೆಯು ಹೆಸರಾಗಿದ್ದು, ರಾಜ್ಯದ ವಿವಿಧೆಡೆಯಿಂದ ಜನರು ಚಿಕಿತ್ಸೆಗಾಗಿ ಬರುತ್ತಾರೆ. ಆಸ್ಪತ್ರೆ ಆವರಣದಲ್ಲಿ ಈ ಕಟ್ಟಡವು 22 ಸಾವಿರ ಚದರ ಅಡಿಯಲ್ಲಿ ನಿರ್ಮಾಣವಾಗಿದ್ದು, ದೇಶದ ಎರಡನೇ ಕ್ರೀಡಾ ಚಿಕಿತ್ಸಾ ಸಂಕೀರ್ಣವಾಗಿದೆ. ಈ ಕ್ರೀಡಾ ಚಿಕಿತ್ಸೆ ಸಂಕೀರ್ಣ ಕಾರ್ಯಾರಂಭಿಸಿದ ಬಳಿಕ ಅಲ್ಲಿಗೆ ಸಂಸ್ಥೆಯ ಹೊರರೋಗಿ ವಿಭಾಗ ಸ್ಥಳಾಂತರವಾಗಲಿದೆ. ಸದ್ಯ ಕಾರ್ಯನಿರ್ವಹಿಸುತ್ತಿರುವ ಹೊರರೋಗಿ ವಿಭಾಗವನ್ನು ವಾರ್ಡ್‌ಗಳಾಗಿ ಪರಿವರ್ತಿಸಿ, 40 ಹಾಸಿಗೆಗಳನ್ನು ಅಳವಡಿಸಲು ಸಂಸ್ಥೆ ನಿರ್ಧರಿಸಿದೆ. ಇದರಿಂದ ಹಾಸಿಗೆಗಳ ಸಂಖ್ಯೆ ಹೆಚ್ಚಳವಾಗಿ, ರೋಗಿಗಳ ಚಿಕಿತ್ಸೆಗೆ ಸಹಾಯಕವಾಗಲಿದೆ.
ಅಪಘಾತ ಪ್ರಕರಣ ಅಧಿಕ: ರಸ್ತೆ ಅಪಘಾತದಲ್ಲಿ ಗಾಯಗೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ಸಂಸ್ಥೆಗೆ ಬರುತ್ತಿದ್ದಾರೆ. ಮೂರು ವರ್ಷಗಳಲ್ಲಿ ಒಂಬತ್ತು ಸಾವಿರಕ್ಕೂ ಅಧಿಕ ಮಂದಿಗೆ ಅಪಘಾತ ಗಾಯಕ್ಕೆ ಸಂಸ್ಥೆಯ ವೈದ್ಯರು ಚಿಕಿತ್ಸೆ ಒದಗಿಸಿದ್ದಾರೆ. ವರ್ಷವಾರು ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆಯೂ ಹೆಚ್ಚಳವಾಗಿದೆ. 2021ರಲ್ಲಿ 61 ಸಾವಿರದಷ್ಟು ಪ್ರಕರಣಗಳಿಗೆ ಚಿಕಿತ್ಸೆ ಒದಗಿಸಿದ್ದರೆ, ಈಗ ಆ ಸಂಖ್ಯೆ 93 ಸಾವಿರ ದಾಟಿದೆ. ಸಂಸ್ಥೆಯ ಒಳಗಡೆಯೇ ಎಂಆರ್‌ಐ, ಸಿಟಿ ಸ್ಕ್ಯಾನ್, ಅಲ್ಟ್ರಾಸೌಂಡ್ ಡಾಪ್ಲರ್, ಮಸ್ಕ್ಯುಲೋಸ್ಕೆಲಿಟಲ್ ಅಲ್ಟ್ರಾಸೌಂಡ್ ಸೇರಿ ವಿವಿಧ ಸೌಲಭ್ಯಗಳಿವೆ.
ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಇನ್ಫೊಸಿಸ್ ಪ್ರಯೋಗಾಲಯಕ್ಕೆ ಹೋಲಿಸಿದಲ್ಲಿ ಇಲ್ಲಿ ಪರೀಕ್ಷೆಗಳಿಗೆ ದರ ಸ್ವಲ್ಪ ಹೆಚ್ಚಿದೆ. ಉಳಿದಂತೆ ಚಿಕಿತ್ಸೆ ಉತ್ತಮವಾಗಿ ದೊರೆಯುತ್ತಿದ್ದು, ಔಷಧಗಳನ್ನು ಆಸ್ಪತ್ರೆಯಲ್ಲಿಯೇ ಒದಗಿಸಲಾಗುತ್ತಿದೆ. ಬಿಸಿ ನೀರು, ಮೊಟ್ಟೆ ಅಥವಾ ಬಾಳೆಹಣ್ಣು ಒಳಗೊಂಡ ಊಟ ಸೇರಿ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎನ್ನುತ್ತಾರೆ ರೋಗಿಗಳು.
‘ಮರದಿಂದು ಬಿದ್ದು, ಎರಡೂ ಕಾಲುಗಳನ್ನು ಮುರಿದುಕೊಂಡಿದ್ದರಿಂದ ಒಂದು ತಿಂಗಳು ಆಸ್ಪತ್ರೆಯಲ್ಲಿಯೇ ಇರಬೇಕಾಗಿತ್ತು. ಖಾಸಗಿ ಆಸ್ಪತ್ರೆಗೆ ಹೋಗಿದ್ದರೆ ₹3 ಲಕ್ಷದಿಂದ ₹4 ಲಕ್ಷ ಚಿಕಿತ್ಸಾ ವೆಚ್ಚವಾಗುತ್ತಿತ್ತು. ಇಲ್ಲಿ ₹80 ಸಾವಿರದಲ್ಲಿ ಚಿಕಿತ್ಸೆ ದೊರೆತಿದ್ದು, ಮಾತ್ರೆಗಳನ್ನು ಉಚಿತವಾಗಿ ಒದಗಿಸಿದ್ದಾರೆ. ವೈದ್ಯರು ಉತ್ತಮವಾಗಿ ಚಿಕಿತ್ಸೆ ನೀಡಿದ್ದಾರೆ’ ಎಂದು ತುಮಕೂರಿನ ಶಿರಾದ ವ್ಯಕ್ತಿಯೊಬ್ಬರು ತಿಳಿಸಿದರು.
ಓಟದ ಟ್ರ್ಯಾಕ್, ಕ್ರೀಡಾ ಪ್ರಯೋಗಾಲಯ
ಸಂಸ್ಥೆಯ ಆವರಣದಲ್ಲಿರುವ ಕ್ರೀಡಾ ಚಿಕಿತ್ಸಾ ಸಂಕೀರ್ಣದಲ್ಲಿ ಓಟದ ಟ್ರ್ಯಾಕ್, ಕ್ರೀಡಾ ಪ್ರಯೋಗಾಲಯ, ಕ್ರಯೋ ಥೆರಪಿಯಂತಹ ಸೌಲಭ್ಯಗಳು ಇರಲಿವೆ. ಜತೆಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿ ಸೇರಿ ವಿವಿಧ ಸೌಲಭ್ಯಗಳೂ ಇಲ್ಲಿ ದೊರೆಯಲಿವೆ. ಈ ಕ್ರೀಡಾ ಸಂಕೀರ್ಣದ ಕಟ್ಟಡ ನಿರ್ಮಾಣಕ್ಕೆ ₹29 ಕೋಟಿ ವೆಚ್ಚವಾಗಿದೆ. ಕೆಳಮಹಡಿಯಲ್ಲಿ ವೈದ್ಯರ ವಾಹನಗಳ ಪಾರ್ಕಿಂಗ್, ಎಕ್ಸ್–ರೇ ಘಟಕಕ್ಕೆ ಅವಕಾಶ ನೀಡಲಾಗಿದೆ.
ಮೊದಲ ಮಹಡಿಯಲ್ಲಿ ಹೊರರೋಗಿ ವಿಭಾಗ, ಔಷಧಾಲಯ, ತುರ್ತು ಚಿಕಿತ್ಸಾ ಘಟಕಕ್ಕೆ ಸ್ಥಳಾವಕಾಶ ಒದಗಿಸಲಾಗಿದೆ. ಮೊದಲ ಮಹಡಿಯಲ್ಲಿ ಕ್ರೀಡಾ ಗಾಯಗಳು ಚಿಕಿತ್ಸಾ ಘಟಕವೂ ಇರಲಿದ್ದು, ಹೈಟೆಕ್ ಜಿಮ್, ಓಟದ ಟ್ರ್ಯಾಕ್‌ಗೆ ವಿಶಾಲ ಸ್ಥಳಾವಕಾಶ ನೀಡಲಾಗಿದೆ. ಗಾಯ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಇಲ್ಲಿ ತರಬೇತಿ ನೀಡಲಾಗುತ್ತದೆ. ಎರಡನೇ ಮಹಡಿಯಲ್ಲಿ ಎರಡು ಶಸ್ತ್ರಚಿಕಿತ್ಸಾ ಘಟಕ ಹಾಗೂ ಅಗತ್ಯ ಕೊಠಡಿಗಳನ್ನು ನಿರ್ಮಿಸಲಾಗಿದೆ. :
ಕ್ರೀಡಾ ಚಿಕಿತ್ಸಾ ಸಂಕೀರ್ಣವು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದೆ. ಹೊರರೋಗಿ ವಿಭಾಗವನ್ನು ಅಲ್ಲಿಗೆ ಸ್ಥಳಾಂತರಿಸಿ, ಸಂಸ್ಥೆಯಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ.–ಡಾ. ಮದನ್ ಬಲ್ಲಾಳ್, ಎಸ್‌ಜಿಐಟಿಒ ನಿರ್ದೇಶಕ
180: ಸಂಸ್ಥೆಯಲ್ಲಿರುವ ಒಟ್ಟು ಹಾಸಿಗೆಗಳು
16: ಐಸಿಯು ಹಾಸಿಗೆಗಳ ಸಂಖ್ಯೆ
200–230: ದೈನಂದಿನ ಹೊರರೋಗಿಗಳ ಭೇಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.