ಬೆಂಗಳೂರು: ಸವಿತಾ ಸಮಾಜದ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸವಿತಾ ಸಮಾಜದವರನ್ನೇ ಈ ಬಾರಿ ನಿಗಮದ ಅಧ್ಯಕ್ಷರನ್ನಾಗಿ ಮಾಡುವ ಕುರಿತು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು. ಸವಿತಾ ಸಮಾಜದ ಹೆಸರನ್ನು ನಿಷೇಧಿತ ಬಳಸಿ ಕರೆದವರಿಗೆ ಶಿಕ್ಷೆ ವಿಧಿಸಲು ಅವಕಾಶವಾಗುವಂತೆ ಕಾನೂನು ತರುವ ಕುರಿತು ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು’ ಎಂದು ಹೇಳಿದರು.
‘ಈ ವರ್ಷ ಸವಿತಾ ಸಮಾಜದ ಅಭಿವೃದ್ಧಿಗೆ ₹23.70 ಕೋಟಿ ಅನುದಾನ ಮೀಸಲಿರಿಸಿದ್ದೇವೆ. ಈ ಮೂಲಕ ಆಯಾ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪಿಸಲಾಗುವುದು’ ಎಂದು ತಿಳಿಸಿದರು.
‘ಸಣ್ಣ-ಸಣ್ಣ ಸಮುದಾಯದ ಮುಖಂಡರು ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಒಗ್ಗಟ್ಟು ಪ್ರದರ್ಶಿಸಿದಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ. ಯಾರಾದರೂ ಬೆಳೆಯುತ್ತಿದ್ದರೆ, ಅವರ ಕಾಲೆಳೆಯುವ ಕೆಲಸವಾಗುತ್ತಿದೆ. ಇರುವುದೇ ಸಣ್ಣ ಸಮಾಜ, ಅದರಲ್ಲೇ ಎರಡು ಗುಂಪುಗಳಿದ್ದರೆ ಆ ಸಮುದಾಯದ ಅಭಿವೃದ್ಧಿ ಹೇಗೆ ಸಾಧ್ಯ? ರಾಜಕೀಯ ಮತ್ತು ಸಾಮಾಜಿಕ ಪ್ರಾತಿನಿಧ್ಯ ಸಿಗಬೇಕೆಂದರೆ ಒಗ್ಗಟ್ಟಿನ ಪ್ರದರ್ಶನ ಆಗಬೇಕು. ಸಣ್ಣ- ಸಣ್ಣ ಸಮುದಾಯಗಳು ಬಲಿಷ್ಠ ಸಮುದಾಯದವರನ್ನು ನೋಡಿ ಕಲಿಯಬೇಕಿದೆ’ ಎಂದು ಕಿವಿ ಮಾತು ಹೇಳಿದರು
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಈ ಬಾರಿ ಸಣ್ಣ ಸಮುದಾಯದವರಿಗೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗುವುದು’ ಎಂದರು.
ಸವಿತಾ ಕ್ಷೇಮಾಭಿವೃದ್ಧಿ ಮತ್ತು ಜಾಗೃತ ವೇದಿಕೆ ಕಾರ್ಯಾಧ್ಯಕ್ಷ ಭೈರಪ್ಫ ನಾರಾಯಣ ಸ್ವಾಮಿ ಮಾತನಾಡಿ, ‘ಸಮುದಾಯದವರಿಗೆ ನಿಗಮ, ಮಂಡಳಿಯಲ್ಲಿ ಸ್ಥಾನ ನೀಡಬೇಕು, ಪ್ರವರ್ಗ 1ಕ್ಕೆ ಸೇರಿಸಬೇಕು, ನಾದಸ್ವರ ಕಲಾವಿದರಿಗೆ ಉಚಿತ ಬಸ್ ಪಾಸ್ ನೀಡಬೇಕು ಮತ್ತು 10 ಎಕರೆ ಜಾಗ ನೀಡಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಸಿ.ವೇಣುಗೋಪಾಲ್, ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ನಿರ್ದೇಶಕಿ ಧರಣಿದೇವಿ ಮಾಲಗತ್ತಿ, ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ್, ಬನಶಂಕರಿ ವಿ.ಅಂಗಡಿ, ಸವಿತಾ ಸಮಾಜದ ಮುಖಂಡರಾದ ಮುತ್ತುರಾಜ್, ಕೃಷ್ಣ, ಶಿವಶಂಕರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.