
ಬೆಂಗಳೂರು: ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಬಸ್ ಬ್ರೇಕ್ ವಿಫಲಗೊಂಡು ಅಪಘಾತಕ್ಕೀಡಾಗಿದ್ದು, ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಬಳಿ ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದೆ.
ಬಸ್‌ನಲ್ಲಿ 10 ವಿದ್ಯಾರ್ಥಿಗಳಿದ್ದರು. ರಸ್ತೆಯಲ್ಲಿ ಸಾಗುವಾಗ ಬಸ್‌ನ ಬ್ರೇಕ್ ವಿಫಲಗೊಂಡು ಹಿಮ್ಮುಖವಾಗಿ ಚಲಿಸಿದೆ. ಚಾಲಕ ಎಷ್ಟೇ ಪ್ರಯತ್ನಪಟ್ಟರೂ ಬಸ್ ನಿಲ್ಲಿಸಲು ಸಾಧ್ಯವಾಗಿಲ್ಲ. ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಹೊಡೆದು ಜಖಂಗೊಂಡಿದೆ.
ಮಲ್ಲೇಶ್ವರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ಗೋಪಾಲಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ದೊಡ್ಡ ಅನಾಹುತವೊಂದು ತಪ್ಪಿದೆ. ಈ ರೀತಿಯ ಘಟನೆ ಎಲ್ಲ ಶಾಲೆಗಳಿಗೂ ಎಚ್ಚರಿಕೆಯಾಗಿದ್ದು, ಆಡಳಿತ ಮಂಡಳಿಗಳು ಶಾಲಾ ಬಸ್‌ಗಳು ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಲು ಸೂಚನೆ ನೀಡಲಾಗುವುದು’ ಎಂದು ಗೋಪಾಲಯ್ಯ ಹೇಳಿದರು.
ಘಟನೆಯಿಂದ ಸ್ಥಳದಲ್ಲಿ ಸ್ವಲ್ಪ ಹೊತ್ತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ನಂತರ ಪೊಲೀಸರು ಕ್ರೇನ್ ಸಹಾಯದಿಂದ ಶಾಲಾ ಬಸ್ ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದರು. ಬೆಸ್ಕಾಂ ಸಿಬ್ಬಂದಿ, ಹಾನಿಗೊಳಗಾದ ವಿದ್ಯುತ್ ಕಂಬವನ್ನು ಬದಲಿಸಿ ಹೊಸ ಕಂಬ ಅಳವಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.