ADVERTISEMENT

ವಿದ್ಯಾರ್ಥಿಗೆ ದೈಹಿಕ ಶಿಕ್ಷೆ: ಆರೋಪ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 19:40 IST
Last Updated 4 ಜುಲೈ 2022, 19:40 IST

ಬೆಂಗಳೂರು: ಮಾಗಡಿ ರಸ್ತೆಯಲ್ಲಿರುವ ಖಾಸಗಿ ಅನುದಾನರಹಿತ ಶಾಲೆಯಲ್ಲಿ ವಿದ್ಯಾರ್ಥಿಗೆ ದೈಹಿಕ ಶಿಕ್ಷೆ ನೀಡಿದ ಆರೋಪ ಕೇಳಿಬಂದಿದೆ.

ನೋಟ್‌ಬುಕ್‌ ತೆಗೆದುಕೊಂಡು ಬಂದಿಲ್ಲವೆಂಬ ಕಾರಣಕ್ಕೆ ಗಣಿತ ಶಿಕ್ಷಕಿ ಆರನೇ ತಗರತಿಯಲ್ಲಿ ಕಲಿಯುತ್ತಿದ್ದ 12 ವರ್ಷದ ಬಾಲಕನಿಗೆ ಹೊಡೆದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಿವಿ ಮತ್ತು ಕಣ್ಣಿನ ಭಾಗಕ್ಕೆ ಗಾಯವಾಗಿರುವ ಬಗ್ಗೆ ವೈದ್ಯರು ಖಚಿತ
ಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಾಲಕನ ತಂದೆ, ‘ನಾನು ಮನೆಗೆ ಬಂದಾಗ ಮಗನ ಕೆನ್ನೆಯ ಭಾಗದಲ್ಲಿ ಕೈ ಬೆರಳಿನಿಂದ ಹೊಡೆದ ಗುರುತುಗಳು ಕಾಣಿಸಿದ್ದವು. ತಕ್ಷಣ ಶಾಲೆಯ ಪ್ರಾಂಶುಪಾಲರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಅವರೂ ಆಸ್ಪತ್ರಗೆ ಬಂದರು. ಈ ಬಗ್ಗೆ ವೈದ್ಯಕೀಯ– ಕಾನೂನು ಪ್ರಕರಣ ದಾಖಲಿಸುವುದಾಗಿ ತಿಳಿಸಿದಾಗ ಪ್ರಾಂಶುಪಾಲರು ನಮ್ಮನ್ನು ನಿಂದಿಸಿದರು. ಬಳಿಕ ಮಗನನ್ನು ವಾಣಿ ವಿಲಾಸ ಆಸ್ಪತ್ರೆಗೆ ಕರೆದುಕೊಂಡು ಹೋದೆವು’ ಎಂದರು.

ADVERTISEMENT

ಶಿಕ್ಷಣ ಇಲಾಖೆಯ ಸ್ಥಳೀಯ ಅಧಿಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಬಗ್ಗೆ ಶಾಲೆಗೆ ನೋಟಿಸ್‌ ನೀಡಲಾಗುವುದು ಎಂದೂ ಅಧಿಕಾರಿ ತಿಳಿಸಿದರು.

‘ಇದು ದೈಹಿಕ ಶಿಕ್ಷೆಯಲ್ಲ. ಆಕಸ್ಮಿಕವಾಗಿ ಸಂಭವಿಸಿದೆ. ಈ ವಿದ್ಯಾರ್ಥಿ ಪ್ರಿ ಪ್ರೈಮರಿಯಿಂದ ನಮ್ಮ ಶಾಲೆಯಲ್ಲಿದ್ದು, ಶಿಕ್ಷಕಿ ಕೂಡ ನಾಲ್ಕು ವರ್ಷದಿಂದ ಶಾಲೆಯಲ್ಲಿ ಇದ್ದಾರೆ. ಬಾಲಕನ ಚಿಕಿತ್ಸೆಗೆ ಮತ್ತು ಪ್ರಕರಣದ ವಿಚಾರಣೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಶಾಲೆಯ ಪ್ರಾಂಶುಪಾಲ ರಾಜೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.