ಬೆಂಗಳೂರು: ‘ವಿದ್ಯಾರ್ಥಿಗಳು ಹಾಗೂ ಯುವ ಸಮೂಹದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಹೆಚ್ಚಿನ ಒತ್ತು ನೀಡಬೇಕು’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಸಲಹೆ ನೀಡಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ನೀಡುವ 'ಜೀವಮಾನ ಸಾಧನೆ ಪ್ರಶಸ್ತಿ'ಗಳನ್ನು ಇಬ್ಬರು ಹಿರಿಯ ವಿಜ್ಞಾನಿಗಳಿಗೆ ಮಂಗಳವಾರ ನಗರದಲ್ಲಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ಸಂಶೋಧನೆ ಮತ್ತು ಆವಿಷ್ಕಾರಗಳು ಕೇವಲ ಪ್ರಯೋಗಾಲಯಗಳಿಗೆ ಸೀಮಿತವಾಗದೆ, ಅವುಗಳ ಲಾಭ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ವಿಜ್ಞಾನ ಮತ್ತು ಸಮಾಜದ ನಡುವಿನ ಅಂತರವನ್ನು ಕಡಿಮೆ ಮಾಡಲು ಇಂತಹ ಕಾರ್ಯಕ್ರಮಗಳು ಸ್ಫೂರ್ತಿದಾಯಕವಾಗಿವೆ’ ಎಂದು ಹೇಳಿದರು.
‘ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಅಕಾಡೆಮಿಯನ್ನು ದೇಶದ ಮಾದರಿ ಸಂಸ್ಥೆಯನ್ನಾಗಿ ರೂಪಿಸಲು ಎಲ್ಲ ರೀತಿಯ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಸದಾಶಿವ ಪ್ರಭು, ಅಕಾಡೆಮಿ ಅಧ್ಯಕ್ಷ ಎ.ಎಚ್.ರಾಜಾಸಾಬ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಆನಂದ್ ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರು:
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಭಾರತೀಯ ಪ್ರಾಣಿಶಾಸ್ತ್ರ ಸರ್ವೇಕ್ಷಣಾ ಇಲಾಖೆಯ ಮಾಜಿ ನಿರ್ದೇಶಕ ರಾಮಕೃಷ್ಣ ಅವರಿಗೆ ಸಿ.ಎನ್.ಆರ್. ರಾವ್ ಕೆಎಸ್‌ಟಿಎ ಜೀವಮಾನ ಸಾಧನೆ ಪ್ರಶಸ್ತಿ, ಕನ್ನಡ ಭಾಷೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಸೇವೆ ಸಲ್ಲಿಸಿದ ಮೈಸೂರಿನ ಸಿಎಫ್‌ಟಿಆರ್‌ಐ ಮಾಜಿ ವಿಜ್ಞಾನಿ ಶ್ರೀಮತಿ ಹರಿಪ್ರಸಾದ್ ಅವರಿಗೆ ಕನ್ನಡದಲ್ಲಿ ವಿಜ್ಞಾನ ಸಂವಹನಕ್ಕಾಗಿ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು ಹಾಗೂ ಶಿಕ್ಷಣ ತಜ್ಞರು, ಸಂಶೋಧಕರು, ಎಂಜಿನಿಯರ್‌ಗಳು ಮತ್ತು ತಂತ್ರಜ್ಞರು ನೀಡಿದ ಕೊಡುಗೆಗಳನ್ನು ಗುರುತಿಸಲು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಫೆಲೋ ಆಫ್ ಕೆಎಸ್‌ಟಿಎ ಗೌರವ ನೀಡುತ್ತದೆ. ಫೆಲೋಶಿಪ್‌ಗೆ ಆಯ್ಕೆಯಾದ 33 ಸಾಧಕರನ್ನು ಸನ್ಮಾನಿಸಲಾಯಿತು.