ADVERTISEMENT

ಜಾಗೃತಿ ಇಲ್ಲದಿದ್ದರೆ ದಬ್ಬಾಳಿಕೆ: ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಕಳವಳ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2018, 19:05 IST
Last Updated 2 ಡಿಸೆಂಬರ್ 2018, 19:05 IST
ವಿಚಾರ ಸಂಕಿರಣದಲ್ಲಿ (ಎಡದಿಂದ) ಎಂ.ಜಿ.ಪಂಪಾಪತಿ, ಟಿ.ಟಿ.ಬಸವನಗೌಡ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಕೆಂಪರಾಮಯ್ಯ, ಟಿ.ರಾಘವೇಂದ್ರ ಇದ್ದರು –ಪ್ರಜಾವಾಣಿ ಚಿತ್ರ
ವಿಚಾರ ಸಂಕಿರಣದಲ್ಲಿ (ಎಡದಿಂದ) ಎಂ.ಜಿ.ಪಂಪಾಪತಿ, ಟಿ.ಟಿ.ಬಸವನಗೌಡ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಕೆಂಪರಾಮಯ್ಯ, ಟಿ.ರಾಘವೇಂದ್ರ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಪರಿಶಿಷ್ಟ ಪಂಗಡಗಳ ಜನರಲ್ಲಿ ಜಾಗೃತಿ ಬೇಕು. ಇಲ್ಲವಾದರೆ ಬೇರೆಯವರು ನಮ್ಮನ್ನು ಕಡೆಗಣಿಸಿಬಿಡುತ್ತಾರೆ. ನಾವು ದಬ್ಬಾಳಿಕೆಗೆ ಒಳಪಡಬೇಕಾಗುತ್ತದೆ.

– ಇದು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘ ಹಾಗೂಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಭಾನುವಾರ ನಗರದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಕೇಳಿ ಬಂದ ಆತಂಕ.

‘ಸಮುದಾಯದಲ್ಲಿ ಕೆನೆಪದರದಲ್ಲಿ ಇರುವವರೆಂದರೆ ಅಧಿಕಾರಿಗಳು, ಸರ್ಕಾರಿ ನೌಕರರು. ಆದರೆ, ಇದರಾಚೆಗಿನ ಬಹುಮಂದಿ ಮುಖ್ಯವಾಹಿನಿಯಿಂದ ದೂರ ಇದ್ದಾರೆ. ಇವರೆಲ್ಲರನ್ನೂ ಒಂದು ವೇದಿಕೆ ಅಡಿ ತರಬೇಕು. ಸಮುದಾಯದ ಜನರಲ್ಲಿ ವಿಚಾರವಂತಿಕೆ ಕಡಿಮೆಯಿದೆ. ನಾಯಕತ್ವ ವಹಿಸಿಕೊಳ್ಳುವವರು ಬೇಕಾಗಿದ್ದಾರೆ’ ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ರಾಘವೇಂದ್ರ ವಿಶ್ಲೇಷಿಸಿದರು.

ADVERTISEMENT

ನಿಗಮದ ಸಮಸ್ಯೆಗಳು: ‘ರಾಜ್ಯದ 15 ಜಿಲ್ಲೆಗಳಲ್ಲಿ ನಿಗಮಕ್ಕೆ ಉಸ್ತುವಾರಿಗಳು ಇಲ್ಲ. ಕೆಲವೆಡೆ ಕಚೇರಿಗಳ ನಡುವೆ ಸಮನ್ವಯತೆ ಇಲ್ಲ. ಅಂಥ ಕಡೆ ನಿಗಮವನ್ನು ಪರಿಶಿಷ್ಟ ಜಾತಿ– ಪಂಗಡದ ಅಭಿವೃದ್ಧಿ ಇಲಾಖೆ ಜತೆಗೋ ಅಥವಾ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜತೆಗೋ ಸೇರಿಸಿ ಅಲ್ಲಿಯೇ ನಿಗಮದ ಯೋಜನೆಗಳ ಬಗ್ಗೆ ಮಾಹಿತಿ ಕೊಡುವಂತಾಗಬೇಕು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಅದು ಅನುಷ್ಠಾನಕ್ಕೆ ಬರಲಿದೆ’ ಎಂದರು.

ವಾಲ್ಮೀಕಿ ಮ್ಯೂಸಿಯಂ: ‘ವಾಲ್ಮೀಕಿ ಮ್ಯೂಸಿಯಂ ಸ್ಥಾಪನೆಗೆ ಅಕ್ಕಯ್ಯಮ್ಮನ ಬೆಟ್ಟದ ಬಳಿ 25 ಎಕರೆ ಜಾಗ ಗುರುತಿಸಲಾಗಿದೆ. ಹೊಸಳ್ಳಿ ಹಾಗೂ ನೆಲಮಂಗಲದ ಬಳಿಯೂ ಜಾಗ ಗುರುತಿಸಲಾಗಿದೆ. ಅನುಕೂಲಕರವಾದ ಸ್ಥಳದಲ್ಲಿ ಮ್ಯೂಸಿಯಂ ಸ್ಥಾಪಿಸಲು ಸರ್ಕಾರ ಅನುಮತಿ ನೀಡಿದೆ’ ಎಂದರು, ಜಲಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ಮಾತನಾಡಿ, ‘ವಾಲ್ಮೀಕಿ ಸಮುದಾಯಕ್ಕೆ ನಗರದಲ್ಲಿ ವಾಲ್ಮೀಕಿ ಶಾಖಾಮಠ ಅಥವಾ ಸಮುದಾಯದ ಚಟುವಟಿಕೆಗಳಿಗೆ ಒಂದು ಕಚೇರಿ ಸ್ಥಾಪಿಸುವುದು ಸೂಕ್ತ’ ಎಂದರು.

ದೊರೆಯದ ಬೆಂಬಲ

‘ಮೀಸಲಾತಿ ಪರವಾಗಿ ನ್ಯಾಯಾಲಯಗಳು ನೀಡುತ್ತಿರುವ ತೀರ್ಪುಗಳ ಅನುಷ್ಠಾನದಲ್ಲಿ ವಿಳಂಬವಾಗಬಾರದು. ಹಾಗಾದಾಗ ಅದರ ಸೌಲಭ್ಯ ಪಡೆಯಲು ಅಡಚಣೆ ಉಂಟಾಗುತ್ತದೆ’ ಎಂದು ಸಹಾಯಕ ಪೊಲೀಸ್‌ ಆಯುಕ್ತ ಎಂ.ಜಿ. ಪಂಪಾಪತಿ ಹೇಳಿದರು.

ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಏರಿಕೆ ಕುರಿತು ಅಶೋಕ್ ಕುರಿಯಾರ್‌ ಮಾತನಾಡಿ, ‘ಈ ಹಿಂದೆ ಸಂಸದರು, ಶಾಸಕರು, ಸಹಾಯಕ ಶಿಕ್ಷಣ ಅಧಿಕಾರಿಗಳಿಗೆ ಜಾತಿ ಪ್ರಮಾಣ ಪತ್ರ ವಿತರಿಸುವ ಅಧಿಕಾರ ನೀಡಿರುವ ಕಾರಣ ನಕಲಿ ಜಾತಿ ಪ್ರಮಾಣ ಪತ್ರಗಳು ಹೆಚ್ಚಾಯಿತು. ಇದರಿಂದ ನಿಜವಾದ ಪರಿಶಿಷ್ಟರಿಗೆ ವಂಚನೆಯಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.