ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿರುವ ಪ್ರಬಲ ಸಮುದಾಯಗಳು ಸೌಲಭ್ಯ ಪಡೆಯಲು ಬಡಿದಾಡಬೇಕಿದೆ. ಇನ್ನು ಅಲೆಮಾರಿಗಳು ಸೌಲಭ್ಯ ಪಡೆಯುವುದಾದರೂ ಹೇಗೆ? ಹಾಗಾಗಿ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ಅಗತ್ಯ ಎಂದು ಮಾಜಿ ಸಚಿವ ಎಚ್. ಆಂಜನೇಯ ಪ್ರತಿಪಾದಿಸಿದರು.
ಕರ್ನಾಟಕ ಪರಿಶಿಷ್ಟ ಜಾತಿ ಅಲೆಮಾರಿ ಅಭಿವೃದ್ಧಿ ವೇದಿಕೆ ಶನಿವಾರ ಹಮ್ಮಿಕೊಂಡಿದ್ದ ಅಲೆಮಾರಿ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿಯಲ್ಲಿ ಮಾದಿಗ, ಹೊಲೆಯ, ಭೋವಿ, ಲಂಬಾಣಿ ಸೇರಿದಂತೆ ಕೆಲವು ಸಮುದಾಯಗಳು ಪ್ರಬಲವಾಗಿವೆ. ಈ ಸಮುದಾಯಕ್ಕೆ ಒಂದಷ್ಟು ವಿದ್ಯಾಭ್ಯಾಸ, ಅರಿವು ಬಂದಿದೆ. ಆದರೆ, ಅಲೆಮಾರಿ ಸಮುದಾಯಗಳ ಅಭಿವೃದ್ಧಿಯೇ ಆಗಿಲ್ಲ. ಇಂದಿಗೂ ಪ್ರಾಣಿಗಳೂ ವಾಸಿಸಲು ಸಾಧ್ಯವಿಲ್ಲದ ಜಾಗಗಳಲ್ಲಿ, ಪೈಪ್‌ಲೈನ್‌ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ವಾಸ ಮಾಡುತ್ತಿದ್ದಾರೆ. ಅಲೆಮಾರಿಗಳನ್ನು ಪ್ರತ್ಯೇಕ ಗುಂಪು ಮಾಡಿ ಮೀಸಲಾತಿ ಕಲ್ಪಿಸದೇ ಇದ್ದರೆ ಅವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಪರಿಶಿಷ್ಟ ಜಾತಿಯಲ್ಲಿ ಬೇಡ ಜಂಗಮ, ಬುಡ್ಗ ಜಂಗಮ ಮುಂತಾದ ಹೆಸರುಗಳಿವೆ. ಜಂಗಮ ಎನ್ನುವ ಪದವನ್ನೇ ಬಳಸಿಕೊಂಡು ಬೇಡ ಜಂಗಮ, ಬೇಡುವ ಜಂಗಮ ಹೆಸರಲ್ಲಿ ವೀರಶೈವ ಲಿಂಗಾಯತರ ಜಂಗಮರು ಎಸ್‌ಸಿ ಪ್ರಮಾಣಪತ್ರ ಪಡೆದು ಉದ್ಯೋಗ ಗಳಿಸಿದ್ದಾರೆ. ಈಗ ಒಳಮೀಸಲಾತಿ ಪಡೆಯಲು ಮುಂದಾಗಿದ್ದಾರೆ. ಇದು ಲಿಂಗಾಯತರ ಮನೆಯಲ್ಲಿ ಮಾತ್ರ ಬೇಡುವ, ಪುರೋಹಿತರಾಗಿರುವ, ಮಠಾಧೀಶರಾಗಿರುವ ಸಮುದಾಯ. ಇಂಥವರು ಹೇಗೆ ಎಸ್‌ಸಿ ಆಗುತ್ತಾರೆ? ಅಲ್ಲದೇ ಕರ್ನಾಟಕದಲ್ಲಿ ಬೇಡ ಜಂಗಮರು ಇಲ್ಲ. ಬುಡುಗ ಜಂಗಮರಷ್ಟೇ ಇರುವುದು. ಇದರ ವಿರುದ್ಧ ಎಲ್ಲರೂ ಎಚ್ಚೆತ್ತುಕೊಂಡು ಹೋರಾಟ ಮಾಡಬೇಕು ಎಂದರು.
‘ಅಲೆಮಾರಿ ಸಮುದಾಯಗಳಿಗೆ ನಿವೇಶನ, ಮನೆಯನ್ನು ಸರ್ಕಾರ ಕಲ್ಪಿಸಬೇಕು. ಈ ಬೇಡಿಕೆಯೂ ಸೇರಿದಂತೆ ನಿಮ್ಮ ಸಮಸ್ಯೆಗಳನ್ನು ಪಟ್ಟಿ ಮಾಡಿ ನನಗೆ ಕೊಡಿ. ಈ ತಿಂಗಳಲ್ಲೇ ಜಾಗೃತ ಸಮಾವೇಶ ಮಾಡಿ ಮುಖ್ಯಮಂತ್ರಿ, ಸಿದ್ದರಾಮಯ್ಯ, ಸಚಿವರಾದ ಎಚ್.ಸಿ. ಮಹದೇವಪ್ಪ, ಸತೀಶ ಜಾರಕಿಹೊಳಿ ಅವರನ್ನು ಕರೆಸಿ ಮನವಿ ಸಲ್ಲಿಸೋಣ’ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಸಾಮಾಜಿಕ ಹೋರಾಟಗಾರ ವಡ್ಡಗೆರೆ ನಾಗರಾಜಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಾಲಗುರುಮೂರ್ತಿ, ಅಲೆಮಾರಿ ಅಭಿವೃದ್ಧಿ ವೇದಿಕೆಯ ಶಾಂತಕುಮಾರ್, ಸಣ್ಣಮಾರಪ್ಪ, ವಿವಿಧ ಅಲೆಮಾರಿ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.
ಪರಿಶಿಷ್ಟ ಜಾತಿಯಲ್ಲಿ 51 ಅಲೆಮಾರಿ ಸಮುದಾಯಗಳಿವೆ. ಅದರಲ್ಲಿ ಕೊರಚ ಮತ್ತು ಕೊರಮ ಸಮುದಾಯಗಳನ್ನು ಈ ಸಭೆಗೆ ಕರೆದಿಲ್ಲ ಎಂಬ ವಿಚಾರ ಸಭೆಯಲ್ಲಿ ಗೊಂದಲವನ್ನು ಉಂಟು ಮಾಡಿತು. ಸಭೆಯ ಆರಂಭದಲ್ಲಿ ಸಮುದಾಯಗಳ ಮುಖಂಡರನ್ನು ವೇದಿಕೆಗೆ ಕರೆಯುತ್ತಿರುವಾಗ ಕೊರಚ ಮತ್ತು ಕೊರಮ ಸಮುದಾಯದ ಮುಖಂಡರನ್ನು ಕರೆಯಿರಿ ಎಂದು ಈ ಎರಡು ಸಮುದಾಯದವರು ಪಟ್ಟು ಹಿಡಿದರು. ಆದರೆ ಉಳಿದ 49 ಸಮುದಾಯದ ಮುಖಂಡರು ಆಕ್ಷೇಪಿಸಿದರು. ಆಗ ಮಾತಿನ ಚಕಮಕಿ ನಡೆಯಿತು.
ಕೊನೆಗೆ ಆ ಎರಡು ಸಮುದಾಯದವರನ್ನೂ ವೇದಿಕೆಗೆ ಕರೆಯಲಾಯಿತು. ಎಚ್. ಆಂಜನೇಯ ಮಾತನಾಡಿದ ಬಳಿಕ ಸಮುದಾಯಗಳ ಮುಖಂಡರು ಮಾತನಾಡಲು ಅವಕಾಶ ನೀಡಲಾಯಿತು. ಈ ಸಮಯದಲ್ಲಿ ಮತ್ತೆ ಗೊಂದಲ ಮಾತಿನ ಚಕಮಕಿಗಳು ನಡೆದವು. ‘ಕೊರಚ–ಕೊರಮ ಜಾತಿಗಳು ಸೂಕ್ಷ್ಮ ಸಮುದಾಯಗಳು ಅಲೆಮಾರಿಗಳು. ಅವರನ್ನು ಹೊರಗಿಡುವುದು ಸರಿಯಲ್ಲ ಎಂದು ಈ ಸಮುದಾಯದ ಮುಖಂಡರು ವಾದಿಸಿದರೆ ನೀವು 6 ವರ್ಷದ ಹಿಂದಿನವರೆಗೆ ಅಲೆಮಾರಿಗಳಾಗಿರಲಿಲ್ಲ. ಆನಂತರ ಅಲೆಮಾರಿ ಕೋಶದ ಪಟ್ಟಿಯಲ್ಲಿ ಸೇರಿದವರು. ಅಲ್ಲದೇ ಒಳ ಮೀಸಲಾತಿ ಪರವಾಗಿ ನಮ್ಮೊಂದಿಗೆ ಬಂದೂ ಇರಲಿಲ್ಲ ಎಂದು ಉಳಿದ ಸಮುದಾಯದವರು ವಿರೋಧಿಸಿದರು. ಆನಂತರ ಯಾರೂ ಏನು ಮಾತನಾಡುತ್ತಾರೆ ಎಂಬುದು ಗೊತ್ತಾಗದಷ್ಟು ಮಾತಿನ ವಿನಿಮಯಗಳಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.