ADVERTISEMENT

900 ಹೆಣ್ಣು ಭ್ರೂಣ ಹತ್ಯೆ: ವೈದ್ಯನ ಬಂಧನ!

* ಬೈಯಪ್ಪನಹಳ್ಳಿ ಠಾಣೆ ಪೊಲೀಸರ ಕಾರ್ಯಾಚರಣೆ * ಕೃತ್ಯಕ್ಕೆ ಸಹಕರಿಸಿದ್ದ ಲ್ಯಾಬ್ ಟೆಕ್ನಿಷಿಯನ್

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2023, 23:30 IST
Last Updated 25 ನವೆಂಬರ್ 2023, 23:30 IST
ಡಾ. ಚಂದನ್ ಬಲ್ಲಾಳ್
ಡಾ. ಚಂದನ್ ಬಲ್ಲಾಳ್   

ಬೆಂಗಳೂರು: ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತ ಪ್ರಕರಣದ ತನಿಖೆ ಮುಂದುವರಿಸಿರುವ ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ಮೈಸೂರಿನ ವೈದ್ಯ ಡಾ. ಚಂದನ್ ಬಲ್ಲಾಳ್ ಹಾಗೂ ಲ್ಯಾಬ್ ಟೆಕ್ನಿಷಿಯನ್ ನಿಸಾರ್ ಅವರನ್ನು ಬಂಧಿಸಿದ್ದಾರೆ.

‘ಮೈಸೂರಿನ‌ ಮಾತಾ ಆಸ್ಪತ್ರೆ ಹಾಗೂ ಅಲ್ಲಿನ ರಾಜ್‌ಕುಮಾರ್ ರಸ್ತೆಯಲ್ಲಿರುವ ಆಯುರ್ವೇದಿಕ್ ಪೈಲ್ ಡೇ ಕೇರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಡಾ. ಚಂದನ್, ಇದುವರೆಗೂ 900 ಗರ್ಭಪಾತ ಮಾಡಿಸಿ, ಹೆಣ್ಣು ಭ್ರೂಣ ಹತ್ಯೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅ. 15ರಂದು ಭ್ರೂಣ ಲಿಂಗ ಪತ್ತೆಗಾಗಿ ಬೆಂಗಳೂರಿನಿಂದ ಮಂಡ್ಯಕ್ಕೆ ಗರ್ಭಿಣಿಯೊಬ್ಬರನ್ನು ಕಾರಿನಲ್ಲಿ ಕರೆದೊಯ್ಯಲಾಗುತ್ತಿತ್ತು. ಕಾರು ನೋಡಿ ಅನುಮಾನಗೊಂಡಿದ್ದ ಪೊಲೀಸರು, ಬೆನ್ನಟ್ಟಿ ಕಾರು ನಿಲ್ಲಿಸಿದ್ದರು. ಕಾರಿನಲ್ಲಿದ್ದವರನ್ನು ವಿಚಾರಣೆ ನಡೆಸಿದಾಗ, ಭ್ರೂಣ ಲಿಂಗ ಪತ್ತೆ ಜಾಲದ ಮಾಹಿತಿ ಸಿಕ್ಕಿತ್ತು.’

ADVERTISEMENT

‘ವೈದ್ಯನ ಸಂಬಂಧಿ ಆಗಿದ್ದ ವೀರೇಶ್, ನವೀನ್‌ಕುಮಾರ್, ಶಿವಲಿಂಗೇಗೌಡ ಹಾಗೂ ನಯನ್‌ಕುಮಾರ್‌ನನ್ನು ಆರಂಭದಲ್ಲಿ ಬಂಧಿಸಲಾಗಿತ್ತು. ಅವರು ನೀಡಿದ್ದ ಮಾಹಿತಿ ಆಧರಿಸಿ ಚೆನ್ನೈನ ವೈದ್ಯ ಡಾ. ತುಳಸಿರಾಮ್ (41), ಮೈಸೂರು ಉದಯಗಿರಿಯಲ್ಲಿರುವ ಮಾತಾ ಆಸ್ಪತ್ರೆ ವ್ಯವಸ್ಥಾಪಕರಾದ ಸಿ.ಎಂ. ಮೀನಾ (38) ಹಾಗೂ ಆಸ್ಪತ್ರೆಯ ಸ್ವಾಗತಗಾರ್ತಿ ರಿಜ್ಮಾ ಖಾನಂ (38) ಅವರನ್ನು ಸೆರೆ ಹಿಡಿಯಲಾಗಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ತಮ್ಮ ಆಸ್ಪತ್ರೆಯ ಕಿರಿಯ ವೈದ್ಯ ಹಾಗೂ ಇತರರ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ಡಾ. ಚಂದನ್ ಬಲ್ಲಾಳ್ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿತ್ತು. ಊರೂರು ಸುತ್ತಾಡುತ್ತಿದ್ದ ಚಂದನ್‌ನನ್ನು ಇದೀಗ ಬಂಧಿಸಲಾಗಿದೆ’ ಎಂದು ಹೇಳಿವೆ.

ತಿಂಗಳಿಗೆ 25 ಗರ್ಭಪಾತ: ‘ವೈದ್ಯ ಚಂದನ್, ಪ್ರತಿ ತಿಂಗಳು 25 ಗರ್ಭಪಾತ ಮಾಡುತ್ತಿದ್ದ. ಮೂರು ವರ್ಷಗಳಿಂದ ಈತ ಕೃತ್ಯ ಎಸಗುತ್ತಿದ್ದ. ಆರೋಪಿ ವಿರೇಶ್ ನೀಡಿರುವ ಪಟ್ಟಿ ಪ್ರಕಾರ ಚಂದನ್ ಇದುವರೆಗೂ 900 ಗರ್ಭಪಾತ ಮಾಡಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆರೋಪಿ ವೀರೇಶ್ ತಂಡವಲ್ಲದೇ ಬೇರೆ ತಂಡಗಳೂ ವೈದ್ಯ ಚಂದನ್ ಬಳಿ ಗರ್ಭಪಾತ ಮಾಡಿಸಿರುವ ಮಾಹಿತಿ ಇದೆ. ಆದರೆ, ಸದ್ಯಕ್ಕೆ ಪುರಾವೆಗಳು ಸಿಕ್ಕಿಲ್ಲ’ ಎಂದು ಹೇಳಿವೆ.

ರಾಜ್ಯವ್ಯಾಪಿ ಹರಡಿರುವ ಜಾಲ ‘ಬೆಂಗಳೂರು ಮಂಡ್ಯ ಮೈಸೂರು ಹಾಗೂ ರಾಮನಗರದಲ್ಲಿ ಭ್ರೂಣ ಲಿಂಗ ಪತ್ತೆ ಜಾಲ ಹಬ್ಬಿದೆ. ಆರೋಪಿ ವೀರೇಶ್ ಪರಿಚಯಸ್ಥರ ಮೂಲಕ ಗರ್ಭಿಣಿ ಹಾಗೂ ಅವರ ಕುಟುಂಬದವರನ್ನು ಸಂಪರ್ಕಿಸುತ್ತಿದ್ದ. ಹೆಣ್ಣು ಭ್ರೂಣ ಮಾಡುವುದಾಗಿ ಹೇಳಿ ಮಂಡ್ಯ ಜಿಲ್ಲೆಯ ಆಲೆಮನೆಯೊಂದರಲ್ಲಿ ನಿರ್ಮಿಸಿದ್ದ ಸ್ಕ್ಯಾನಿಂಗ್ ಕೇಂದ್ರಕ್ಕೆ ಕರೆಸುತ್ತಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಹೆಣ್ಣು ಭ್ರೂಣ ಎಂಬುದು ಗೊತ್ತಾಗುತ್ತಿದ್ದಂತೆ ಹಲವರು ಗರ್ಭಪಾತ ಮಾಡುವಂತೆ ಕೋರುತ್ತಿದ್ದರು. ಅಂಥ ಗರ್ಭಿಣಿಯರನ್ನು ಡಾ. ಚಂದನ್‌ ಬಲ್ಲಾಳ್ ಬಳಿ ಕಳುಹಿಸಲಾಗುತ್ತಿತ್ತು. ₹ 20 ಸಾವಿರದಿಂದ ₹ 25 ಸಾವಿರ ಪಡೆಯುತ್ತಿದ್ದ ಚಂದನ್ ಗರ್ಭಪಾತ ಮಾಡುತ್ತಿದ್ದ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.