ADVERTISEMENT

ಮದ್ಯ ಕುಡಿಸಿ ಯುವತಿಗೆ ಲೈಂಗಿಕ ಕಿರುಕುಳ: ವ್ಯವಸ್ಥಾಪಕ ಸೇರಿ ಮೂವರ ವಿರುದ್ಧ FIR

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 15:31 IST
Last Updated 4 ಜನವರಿ 2025, 15:31 IST
FIR.
FIR.   

ಬೆಂಗಳೂರು: ನಗರದ ಬ್ರಿಗೇಡ್‌ ರಸ್ತೆಯ ಪಬ್‌ವೊಂದರಲ್ಲಿ ಡಿ.31ರಂದು ಕಂಪನಿಯೊಂದು ಆಯೋಜಿಸಿದ್ದ ‘ಈವೆಂಟ್‌ ಪ್ರಮೋಟ್’ ಕಾರ್ಯಕ್ರಮದಲ್ಲಿ ಕರ್ತವ್ಯನಿರತ‌ ಯುವತಿಗೆ ಬಲವಂತದಿಂದ ಮದ್ಯ ಕುಡಿಸಿ ಲೈಂಗಿಕ‌ ಕಿರುಕುಳ ನೀಡಿದ್ದ ಆರೋಪದಡಿ ಮೂವರು ಆರೋಪಿಗಳ ವಿರುದ್ಧ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 ವರ್ಷದ ಸಂತ್ರಸ್ತೆ ನೀಡಿದ ದೂರಿನ ಅನ್ವಯ ಕಂಪನಿಯ ವ್ಯವಸ್ಥಾಪಕ ಹೇಮಂತ್, ಸಹದ್ಯೋಗಿಗಳಾದ ಪುನೀತ್ ಹಾಗೂ ಅಜಿತ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಕಂಪನಿಯ ಪರವಾಗಿ ಬ್ರಿಗೇಡ್​ ರಸ್ತೆಯ ಪಬ್‌ವೊಂದರಲ್ಲಿ ಸಿಗರೇಟ್​ ಪ್ರಮೋಷನ್‌ ಕೆಲಸ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಜತೆಗಿದ್ದ ಕಂಪನಿಯ ವ್ಯವಸ್ಥಾಪಕ ಹೇಮಂತ್ ‘ತನ್ನನ್ನು ಏಕಾಂಗಿಯಾಗಿ ಭೇಟಿ ಆಗುವಂತೆ’ ಸೂಚಿಸಿದ್ದ. ರಾತ್ರಿ 10.30ರ ಸುಮಾರಿಗೆ ಹೇಮಂತ್‌ನನ್ನು ಭೇಟಿ ಮಾಡಿದ್ದೆ. ಆಗ ಹೇಮಂತ್‌ ಮದ್ಯ ಸೇವಿಸುವಂತೆ ಒತ್ತಾಯಿಸಿದ್ದ. ಕೆಲಸದ ಸಮಯವಾದ ಕಾರಣ ನಿರಾಕರಿಸಿದ್ದೆ. ತಾನೂ ವ್ಯವಸ್ಥಾಪಕ ಆಗಿರುವುದರಿಂದ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತೇನೆಂದು ಹೇಳಿ, ಬಲವಂತದಿಂದ ಮದ್ಯಪಾನ ಮಾಡಿಸಿದ್ದ. ಮದ್ಯದ ನಶೆಯಲ್ಲಿ ಹೇಮಂತ್‌ ನನ್ನ ಜತೆಗೆ ಅಸಭ್ಯವಾಗಿ ವರ್ತಿಸಿದ್ದ. ನಂತರ, ಪುನೀತ್‌ ಹಾಗೂ ಅಜಿತ್ ಜತೆಗೆ ಸೇರಿಕೊಂಡು, ಕಾರಿನಲ್ಲಿ ಸುತ್ತಾಡಿಸಿ ರಸ್ತೆಯಲ್ಲೇ ಬಿಟ್ಟು ಹೋಗಿದ್ದರು. ತಾಯಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಮನೆಗೆ ತೆರಳಿದ್ದೆ’ ಎಂಬುದಾಗಿ ಸಂತ್ರಸ್ತೆ ನೀಡಿರುವ ದೂರು ಆಧರಿಸಿ, ಎಫ್‌ಐಆರ್‌ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಮದ್ಯೆ ನಶೆಯಲ್ಲಿ ಇರುವಾಗ ನನ್ನನ್ನು ತಬ್ಬಿಕೊಂಡು ಅಸಭ್ಯ ವರ್ತನೆ ತೋರಿದ ಹೇಮಂತ್ ಹಾಗೂ ರಸ್ತೆಗಳಲ್ಲಿ ಸುತ್ತಾಡಿಸಿ ಜವಾಬ್ದಾರಿಯಿಲ್ಲದೇ ಬಿಟ್ಟು ಹೋದ ಹೇಮಂತ್‌ ಹಾಗೂ ಅಜಿತ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.