ADVERTISEMENT

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ

ಸಂತ್ರಸ್ತೆಯ ತಾಯಿಯಿಂದ ದೂರು * ಠಾಣೆ ಮುತ್ತಿಗೆಗೆ ಯತ್ನ; ಲಘು ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 19:53 IST
Last Updated 30 ಏಪ್ರಿಲ್ 2019, 19:53 IST
ಮೊಹಮ್ಮದ್ ಅನ್ವರ್
ಮೊಹಮ್ಮದ್ ಅನ್ವರ್   

ಬೆಂಗಳೂರು: ಒಂಬತ್ತು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮೊಹಮ್ಮದ್ ಅನ್ವರ್‌ (50) ಎಂಬಾತನನ್ನು ನಗರದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಯಾದ ಅನ್ವರ್, ಕೆಲ ವರ್ಷ ಪೇಂಟರ್ ಆಗಿ ಕೆಲಸ ಮಾಡಿದ್ದ. ಬಾಲಕಿಯ ತಾಯಿ ನೀಡಿದ್ದ ದೂರಿನಡಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಲಕಿಯನ್ನು ‘ಮಗಳೇ... ಮಗಳೇ...’ ಎನ್ನುತ್ತಿದ್ದ ಆರೋಪಿ, ಆಕೆಯಿಂದ ತನ್ನ ಮನೆಯ ಕೆಲಸವನ್ನೂ ಮಾಡಿಸಿಕೊಳ್ಳುತ್ತಿದ್ದ. ಆ ವಿಷಯ ತಾಯಿಗೂ ಗೊತ್ತಿತ್ತು. ಹಿರಿಯ ಎಂಬ ಕಾರಣಕ್ಕೆ ಅವರು ಸುಮ್ಮನಾಗಿದ್ದರು. ಕೆಲ ದಿನಗಳ ಹಿಂದೆ ಆತ, ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.’

ADVERTISEMENT

‘ಬಾಲಕಿಗೆಸೋಮವಾರ ವಿಪರೀತ ಹೊಟ್ಟೆನೋವು ಶುರುವಾಗಿತ್ತು. ಆಗ ತಾಯಿ ಬಳಿ ಲೈಂಗಿಕ ದೌರ್ಜನ್ಯದ ವಿಷಯ ತಿಳಿಸಿದ್ದಳು. ನಂತರ ಅವರು ಠಾಣೆಗೆ ಬಂದು ದೂರು ನೀಡಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಸೋಮವಾರ ತಡರಾತ್ರಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದು ಅಧಿಕಾರಿ ತಿಳಿಸಿದರು.

ಲಘು ಲಾಠಿ ಪ್ರಹಾರ: ಘಟನೆ ಬಗ್ಗೆ ಮಾಹಿತಿ ತಿಳಿದು ಪೊಲೀಸ್ ಠಾಣೆ ಎದುರು ಸೇರಿದ್ದ ಸ್ಥಳೀಯರು, ಆರೋಪಿಯನ್ನು ತಮಗೆ ಒಪ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

‘ಧರ್ಮ ಒಪ್ಪದ ನೀಚ ಕೆಲಸವನ್ನು ಮೊಹಮ್ಮದ್ ಅನ್ವರ್ ಮಾಡಿದ್ದಾನೆ. ಆತನಿಗೆ ನಾವೇ ಶಿಕ್ಷೆ ಕೊಡುತ್ತೇವೆ. ನಮ್ಮ ವಶಕ್ಕೆ ಒಪ್ಪಿಸಿ. ಇಲ್ಲದಿದ್ದರೆ, ಠಾಣೆಯೊಳಗೆ ನುಗ್ಗಿ ನಾವೇ ಆತನಿಗೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಆರೋಪಿಯನ್ನು ತಮ್ಮ ವಶಕ್ಕೆ ಒಪ್ಪಿಸುವವರೆಗೂ ಸ್ಥಳದಿಂದ ಹೋಗುವುದಿಲ್ಲವೆಂದು ಸ್ಥಳೀಯರು ಪಟ್ಟು ಹಿಡಿದಿದ್ದರು. ಠಾಣೆಗೂ ಮುತ್ತಿಗೆ ಹಾಕಲು ಯತ್ನಿಸಿದ್ದರು.ಅದೇ ವೇಳೆ ಪೊಲೀಸರು, ಲಘು ಲಾಠಿಪ್ರಹಾರ ನಡೆಸಿ ಸ್ಥಳೀಯರನ್ನು ಚದುರಿಸಿದರು. ವೃದ್ಧೆಯೊಬ್ಬರು ಅಸ್ವಸ್ಥಗೊಂಡು ಕುಸಿದು ಬಿದ್ದರು.

‘ಪ್ರತಿಭಟನಾಕಾರರ ವಿರುದ್ಧ ಎಫ್‌ಐಆರ್’

‘ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಷ್ಟಾದರೂ ಕೆಲವರು, ಅಕ್ರಮ ಕೂಟ ರಚಿಸಿಕೊಂಡು ಬಂದು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಅವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಕೇಂದ್ರ ವಿಭಾಗದ ಡಿಸಿಪಿ ಡಿ. ದೇವರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.