ಬೆಂಗಳೂರು: ‘ನೆಲಮೂಲದ ಕವಿಯಾಗಿರುವ ಎಸ್.ಜಿ. ಸಿದ್ಧರಾಮಯ್ಯ, ಅಧಿಕಾರ ಮತ್ತು ಹಣವನ್ನು ಬಯಸಿದವರಲ್ಲ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ಭಾಗವತರು ಸಾಂಸ್ಕೃತಿಕ ಸಂಘಟನೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಪ್ರೊ.ಎಸ್.ಜಿ.ಎಸ್.–78’ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
‘ಎಸ್.ಜಿ. ಸಿದ್ಧರಾಮಯ್ಯ ಅವರು ಯಾವುದೇ ವಿಷಯ, ವಿಚಾರಕ್ಕೆ ರಾಜಿ ಮಾಡಿಕೊಂಡವರಲ್ಲ. ಸಮತ್ವ, ಸಿಂಧುತ್ವ ಇರುವ ಕಡೆಗೆ ಸಾಗುತ್ತಾರೆ. ಸಾಹಿತ್ಯದ ಪ್ರಪಂಚಕ್ಕೆ ನನ್ನ ಪ್ರವೇಶ ಅನಿರೀಕ್ಷಿತ. ಈ ಕ್ಷೇತ್ರದಲ್ಲಿ ನನ್ನದು ಬರೀ ಹುಡುಕಾಟ, ದುಡುಕಾಟವಾಗಿದೆ. ನನ್ನಂತಹವರು ಎಡುವುತ್ತಾ ಬೀಳುವುದು ಇವತ್ತಿನ ಸಮಾಜದಲ್ಲಿ ಸಹಜ. ನಾವು ಮಾಡುವ ತಪ್ಪುಗಳು ಅರ್ಥವಾಗುವ ಹೊತ್ತಿಗೆ ಅದೆಷ್ಟೋ ಅನರ್ಥಗಳಾಗಿರುತ್ತವೆ. ಈ ತಪ್ಪುಗಳನ್ನು ಸಮರ್ಥಿಸಿಕೊಳ್ಳಲು ಬರುವವರು ಎಸ್.ಜಿ. ಸಿದ್ಧರಾಮಯ್ಯ. ಹಲವು ಬಾರಿ ಅವರು ನಮ್ಮನ್ನು ಸಮರ್ಥಿಸಿಕೊಂಡಿದ್ದಾರೆ’ ಎಂದರು.
‘ಅವರು ತಮಗೆ ಹೊಳೆದದ್ದನ್ನ ಕವಿತೆಯ ಹೊಳೆಯಾಗಿಸಿ, ಮುಂಜಾನೆಯೇ ನಮಗೆ ಕಳಿಸುತ್ತಾರೆ. ಅವರ ಶಬ್ದ ಸಂಪತ್ತು, ಸಾಹಿತ್ಯ ಸಂಪತ್ತು ಬೇರೆ ಪ್ರಾದೇಶಿಕ ಭಾಷೆಗೆ ಹೊಳೆಯದಷ್ಟು ದೊಡ್ಡದಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕವಿ ಎಲ್.ಹನುಮಂತಯ್ಯ, ‘ಸಿದ್ಧರಾಮಯ್ಯನಂತವರು ಹೊಸ ತಲೆಮಾರಿನವರಿಗೆ ಮಾದರಿಯಾಗಿದ್ದಾರೆ. ಅಂತಹವರನ್ನು ಹೊಸ ತಲೆಮಾರಿನವರು ಅರಿತು ನಡೆಯಬೇಕು. ಸಿದ್ಧರಾಮಯ್ಯ ಅವರ ಕಾವ್ಯದ ಮೂಲ ದ್ರವ್ಯ ದಟ್ಟವಾದ ಗ್ರಾಮೀಣ ಬದುಕು, ಜಾನಪದ ಕಾವ್ಯದ ಹರವು ಮತ್ತು ವೈಯಕ್ತಿಕ ಬದುಕಿನ ಶೋಧ. 78ನೇ ವಯಸ್ಸಿನಲ್ಲಿಯೂ ಅವರು ಬರವಣಿಗೆ ನಿಲ್ಲಿಸಲಿಲ್ಲ. ಜೀವನದ ಕೊನೆಯ ಕ್ಷಣದವರೆಗೆ ಕಾವ್ಯ ರಚಿಸುತ್ತೇನೆ ಎಂಬ ಅಚಲ ನಂಬಿಕೆ ಕವಿಯ ಬಹುಮುಖ್ಯ ಲಕ್ಷಣ’ ಎಂದು ಹೇಳಿದರು.
ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ‘ಸಿದ್ಧರಾಮಯ್ಯ ಅವರು ತುಮಕೂರಿನ ಪ್ರಾದೇಶಿಕ ನೆಲಗಟ್ಟನ್ನು ಹುಡುಕಿ, ಸಾಹಿತ್ಯ ಸೃಷ್ಟಿಸಿದರು. ನೆಲಮೂಲದ ಭಾಷೆಯನ್ನು ಶಿಷ್ಠ ಕನ್ನಡಕ್ಕೆ ತಂದು, ಭಾಷೆಯ ಶಬ್ದ ಸಂಪತ್ತನ್ನು ಸೂರೆ ಹೊಡೆದಿದ್ದಾರೆ. ಹೊಸ ತಲೆಮಾರಿಗೆ ಅವರ ಕಾವ್ಯ ತಳಹದಿಯಾಗಿದೆ. ಕಾವ್ಯಕ್ಕೆ ಹೊಸ ಬೆಳಕು ತಂದುಕೊಟ್ಟ ಅವರು, ಬಹುತ್ವ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಸದಾ ಯೋಚಿಸುತ್ತಾ ಇರುತ್ತಾರೆ’ ಎಂದರು.
ಇದೇ ವೇಳೆ ‘ಎಸ್.ಜಿ.ಎಸ್. ಸಮಗ್ರ ನಾಟಕಗಳು’ ಹಾಗೂ ‘ಅನಾದಿಯ ಗೆಜ್ಜೆಧ್ವನಿ’ ಕವನ ಸಂಕಲನ ಬಿಡುಗಡೆಯಾದವು. ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಹಾಗೂ ಭಾಗವತರು ಸಂಘಟನೆಯ ಅಧ್ಯಕ್ಷ ಕೆ. ರೇವಣ್ಣ ಉಪಸ್ಥಿತರಿದ್ದರು.
ಬಳಿಕ ಎಸ್.ಜಿ. ಸಿದ್ಧರಾಮಯ್ಯ ಅವರ ಬದುಕು, ಬರಹ, ವಿಚಾರ ಮತ್ತು ಆಡಳಿತದ ಬಗ್ಗೆ ಗೋಷ್ಠಿಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.