ಬೆಂಗಳೂರು: ವಸಂತನಗರದಲ್ಲಿರುವ ಶಾಂಗ್ರಿಲಾ ಪಂಚತಾರಾ ಹೋಟೆಲ್‌ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಹೋಟೆಲ್‌ನ ಇ– ಮೇಲ್‌ಗೆ ಆಗಸ್ಟ್ 8ರಂದು ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಆಡಳಿತ ಮಂಡಳಿ ಜೊತೆ ಚರ್ಚೆ ನಡೆಸಿದ ಬಳಿಕವೇ ಹೋಟೆಲ್‌ನ ಪ್ರತಿನಿಧಿ ಶುಕ್ರವಾರ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ. ಹೋಟೆಲ್‌ನಲ್ಲಿ ತಪಾಸಣೆ ಸಹ ನಡೆಸಲಾಗಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಕ್ಕಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಬೆಂಗಳೂರು ಮಾತ್ರವಲ್ಲದೇ ದೇಶದ ಹಲವೆಡೆ ಇರುವ ಶಾಂಗ್ರಿಲಾ ಹೋಟೆಲ್‌ಗಳ ಇ–ಮೇಲ್‌ಗೆ ಬೆದರಿಕೆ ಸಂದೇಶ ಬಂದಿರುವುದಾಗಿ ದೂರುದಾರ ತಿಳಿಸಿದ್ದಾರೆ. ಸಾಮೂಹಿಕವಾಗಿ ಸಂದೇಶ ಕಳುಹಿಸಿ ಹೋಟೆಲ್‌ನವರಿಗೆ ಬೆದರಿಕೆಯೊಡ್ಡಿರುವುದು ಗೊತ್ತಾಗಿದೆ’ ಎಂದು ಮೂಲಗಳು ತಿಳಿಸಿವೆ.
ಹಣಕ್ಕೆ ಬೇಡಿಕೆ: ‘ನಿಮ್ಮ ಹೋಟೆಲ್‌ನಲ್ಲಿ ಬಾಂಬ್ ಇರಿಸಿ ಸ್ಫೋಟಿಸಲಾಗುವುದು. ಹೀಗೆ ಮಾಡಬಾರದೆಂದರೆ, 10 ಸಾವಿರ ಡಾಲರ್ (₹ 8.29 ಲಕ್ಷ) ಹಣ ನೀಡಿ’ ಎಂಬುದಾಗಿ ಆರೋಪಿಗಳು ಸಂದೇಶದಲ್ಲಿ ಬರೆದಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
'ಯಾರೋ ಕಿಡಿಗೇಡಿಗಳು, ನಕಲಿ ಇ–ಮೇಲ್ ಸೃಷ್ಟಿಸಿದ್ದಾರೆ. ಅದರ ಮೂಲಕ ಸಾಮೂಹಿಕವಾಗಿ ಎಲ್ಲ ಹೋಟೆಲ್‌ಗಳಿಗೂ ಇ–ಮೇಲ್ ಕಳುಹಿಸಿ ಬೆದರಿಕೆಯೊಡ್ಡಿದ್ದಾರೆ. ತಾಂತ್ರಿಕ ಪುರಾವೆಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.