ADVERTISEMENT

ನೇಪಾಳದ ಕಳ್ಳನ ಕಾಲಿಗೆ ಪೊಲೀಸ್ ಗುಂಡೇಟು

ಪೊಲೀಸರು ಬಂದೋಬಸ್ತ್‌ಗೆ ಹೋಗಿರುತ್ತಾರೆಂದು ಭಾವಿಸಿ ಕಳ್ಳತನಕ್ಕಿಳದಿದ್ದ!

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 18:12 IST
Last Updated 14 ನವೆಂಬರ್ 2018, 18:12 IST
ದಿನೇಶ್ ಬೋರಾ
ದಿನೇಶ್ ಬೋರಾ   

ಬೆಂಗಳೂರು: ‘ಕೇಂದ್ರ ಸಚಿವರಾಗಿದ್ದ ಅನಂತ್‌ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬಂದೋಬಸ್ತ್ ಒದಗಿಸಿ ಪೊಲೀಸರು ಸುಸ್ತಾಗಿರುತ್ತಾರೆ. ಹೀಗಾಗಿ, ಅವರು ರಾತ್ರಿ ಗಸ್ತು ಬರುವುದಿಲ್ಲ’ ಎಂದುಕೊಂಡು ಕಳ್ಳತನ ಕಾರ್ಯಾಚರಣೆಗೆ ಇಳಿದಿದ್ದ ನೇಪಾಳದ ದಿನೇಶ್ ಬೋರಾ (28) ಎಂಬಾತನ ಕಾಲಿಗೆ ಬಾಣಸವಾಡಿ ಇನ್‌ಸ್ಪೆಕ್ಟರ್ ಗುಂಡು ಹೊಡೆದಿದ್ದಾರೆ.

‘ಮಂಗಳವಾರ ರಾತ್ರಿ ಕಾಚರಕನಹಳ್ಳಿಯ ರಾಮ್‌ದೇವ್‌ ಗಾರ್ಡನ್‌ಗೆ ಬಂದಿದ್ದ ಬೋರಾನನ್ನು ಸಿಬ್ಬಂದಿ ಬೆನ್ನಟ್ಟಿದ್ದರು. ಆಗ ಚಾಕುವಿನಿಂದ ಕಾನ್‌ಸ್ಟೆಬಲ್ ಮೂರ್ತಿ ಅವರ ಕೈಗೆ ಹಲ್ಲೆ ನಡೆಸಿದ ಆತ, ಇತರ ಸಿಬ್ಬಂದಿಗೂ ಚುಚ್ಚಲು ಮುಂದಾದ. ಈ ಹಂತದಲ್ಲಿ ಇನ್‌ಸ್ಪೆಕ್ಟರ್ ಆರ್‌.ವಿರೂಪಾಕ್ಷ ಸ್ವಾಮಿ ಆರೋಪಿಯ ಬಲಗಾಲಿಗೆ ಗುಂಡು ಹೊಡೆದರು’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂರ್ತಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಕೈಗೆ 12 ಹೊಲಿಗೆ ಹಾಕಲಾಗಿದೆ. ಆರೋಪಿ ಸಹ ಅದೇ ಆಸ್ಪತ್ರೆಯಲ್ಲಿದ್ದಾನೆ. ಬಾಣಸವಾಡಿ, ಜೆ.ಸಿ.ನಗರ, ಇಂದಿರಾ ನಗರ, ಹೆಣ್ಣೂರು, ಕುಮಾರಸ್ವಾಮಿ ಲೇಔಟ್ ಹಾಗೂ ಬಸವೇಶ್ವರ ನಗರ ಠಾಣೆಗಳ ವ್ಯಾಪ್ತಿಯ ಹತ್ತು ಮನೆಗಳಲ್ಲಿ ಕಳ್ಳತನ ಮಾಡಿದ್ದ ಬೋರಾನನ್ನು ಆರು ತಿಂಗಳ ಹಿಂದೆ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ತನ್ನ ಚಾಳಿ ಮುಂದುವರಿಸಿದ್ದ’ ಎಂದು ಮಾಹಿತಿ ನೀಡಿದರು.

ADVERTISEMENT

ಕೂಲಿಗೆ ಬಂದವನು ಕಳ್ಳನಾದ: ಕೂಲಿ ಅರಸಿ ಐದು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಬೋರಾ, ಹೊರಮಾವು ಬಳಿ ಶೆಡ್ ಹಾಕಿಕೊಂಡು ವಾಸವಿದ್ದ. ಆರಂಭದಲ್ಲಿ ಗ್ಯಾಂಗ್ ಕಟ್ಟಿಕೊಂಡು ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಈತ, ಸಹಚರರು ನೇಪಾಳಕ್ಕೆ ಮರಳಿದ ನಂತರ ಒಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮಧ್ಯಾಹ್ನದ ವೇಳೆ ಪ್ರತಿಷ್ಠಿತ ರಸ್ತೆಗಳನ್ನು ಸುತ್ತಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದ ಈತ, ರಾತ್ರಿ ಆ ಮನೆಗಳ ಬೀಗ ಮುರಿದು ನಗ–ನಾಣ್ಯ ದೋಚುತ್ತಿದ್ದ. ಬಳಿಕ ಆ ಆಭರಣಗಳನ್ನು ನೇಪಾಳದಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದ.

ಕಾಂಪೌಂಡ್ ಜಿಗಿದ: ‘ರಾತ್ರಿ 10.30ರ ಸುಮಾರಿಗೆ ರಾಮ್‌ದೇವ್ ಗಾರ್ಡನ್ ರಸ್ತೆಗೆ ಗಸ್ತು ಹೋಗಿದ್ದ ಸಿಬ್ಬಂದಿ, ಆರೋಪಿ ಮನೆಯ ಕಾಂಪೌಂಡ್ ಜಿಗಿದಿದ್ದನ್ನು ನೋಡಿದ್ದರು. ಆತನ ಕೈಲಿ ರಾಡ್ ಇದ್ದುದರಿಂದ, ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಇನ್‌ಸ್ಪೆಕ್ಟರ್ ಹಾಗೂ ಆರು ಸಿಬ್ಬಂದಿಯ ತಂಡ ಸ್ಥಳಕ್ಕೆ ತೆರಳಿತ್ತು’ ಎಂದು ಅಧಿಕಾರಿಗಳು ಕಾರ್ಯಾಚರಣೆಯನ್ನು ವಿವರಿಸಿದರು.

‘ಮಫ್ತಿಯಲ್ಲಿದ್ದ ಸಿಬ್ಬಂದಿಯನ್ನು ನೋಡುತ್ತಿದ್ದಂತೆಯೇ ಆರೋಪಿ ರಾಡ್ ಎಸೆದು ಓಡಲಾರಂಭಿಸಿದ. ಈ ಹಂತದಲ್ಲಿ ಮೂರ್ತಿ ಆತನನ್ನು ಬೆನ್ನಟ್ಟಿ ಕೊರಳಪಟ್ಟಿಗೆ ಕೈ ಹಾಕಿದಾಗ, ಅವರ ಕೈಗೆ ಚಾಕುವಿನಿಂದ ಹಲ್ಲೆ ನಡೆಸಿದ. ಆಗ ಇನ್‌ಸ್ಪೆಕ್ಟರ್ ಪಿಸ್ತೂಲ್ ಸದ್ದು ಮಾಡಿತು’ ಎಂದು ಹೇಳಿದರು.

ಸಚಿವರ ಹೆಸರು ಹೇಳಿದ!

‘ಅನಂತ್‌ ಕುಮಾರ್ ನಿಧನದ ಸುದ್ದಿಯನ್ನು ವಾಹಿನಿಗಳಲ್ಲಿ ನೋಡುತ್ತಿದ್ದೆ. ಪಾರ್ಥಿವ ಶರೀರದ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ಇದ್ದುದರಿಂದ ಪೊಲೀಸರೆಲ್ಲ ಅಲ್ಲಿಗೆ ಹೋಗಿರುತ್ತಾರೆಂದು ಭಾವಿಸಿದೆ. ಇಡೀ ದಿನ ಬಂದೋಬಸ್ತ್ ಒದಗಿಸಿ ಸುಸ್ತಾಗುವ ಅವರು, ರಾತ್ರಿ ಖಂಡಿತ ಗಸ್ತು ಬರುವುದಿಲ್ಲ ಎಂದುಕೊಂಡೆ. ಅದೇ ಲೆಕ್ಕಾಚಾರದಲ್ಲಿ ಸಂಜೆಯೇ ಸುತ್ತಾಡಿ ಬೀಗ ಹಾಕಿರುವ ಎರಡು ಮನೆಗಳನ್ನು ಗುರುತಿಸಿಕೊಂಡಿದ್ದೆ’ ಎಂದು ಬೋರಾ ಹೇಳಿಕೆ ಕೊಟ್ಟಿದ್ದಾಗಿ ಬಾಣಸವಾಡಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.