
ಪೀಣ್ಯ ದಾಸರಹಳ್ಳಿ: ದಾಸರಹಳ್ಳಿಯ ಭುವನೇಶ್ವರಿ ನಗರದ 5ನೇ ಮುಖ್ಯ ರಸ್ತೆಯ ಎಸ್‌ವಿ ಕೇಕ್ ಪ್ಯಾಲೇಸ್ ಬೇಕರಿ ಶಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿಗಾಹುತಿಯಾಗಿದೆ.
ಆರು ವರ್ಷದಿಂದ ಕೃಷ್ಣ ಎಂಬುವರು ಬೇಕರಿ ನಡೆಸುತ್ತಿದ್ದರು. ಏಕಾಏಕಿ ಶಬ್ದ ಬಂದು ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಗಾಬರಿಯಿಂದ ಮಾಲೀಕ ಕೃಷ್ಣ ಅವರು ಹೊರಗೆ ಬಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಬೇಕರಿ ಆವರಿಸಿದೆ. ಸಾರ್ವಜನಿಕರು ಅಗ್ನಿಶಾಮಕ ದಳ, ಪೊಲೀಸ್ ಮತ್ತು ವಿದ್ಯುತ್ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ ಬೇಕರಿಯ ತಿನಿಸು, ಪಾನೀಯಗಳು ಹಾಗೂ ಪೀಠೋಪಕರಣ ಸುಟ್ಟು ಹೋಗಿದ್ದವು.
ಅಕ್ಕ ಪಕ್ಕದ ಮನೆಗಳ ಕಿಟಕಿಯ ಗಾಜುಗಳು ಪುಡಿಯಾಗಿವೆ. ದಟ್ಟವಾದ ಹೊಗೆ ಆವರಿಸಿಕೊಂಡ ಕಾರಣ ಬೇಕರಿ ಮೇಲಿರುವ ಕಚೇರಿ ಹಾಗೂ ಮನೆಯ ಸದಸ್ಯರು ಹೊರಗೆ ಓಡಿ ಬಂದಿದ್ದಾರೆ.
‘ಅವಘಡದಲ್ಲಿ ಸುಮಾರು ₹15 ಲಕ್ಷ ಬೆಲೆ ಬಾಳುವ ಬೇಕರಿ ವಸ್ತುಗಳು ಭಸ್ಮವಾಗಿದೆ. ₹25 ಸಾವಿರ ನಗದು ಮತ್ತು ಮೊಬೈಲ್ ಸಹ ಸುಟ್ಟು ಹೋಗಿದೆ’ ಎಂದು ಮಾಲೀಕ ಕೃಷ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.