ADVERTISEMENT

ವಾಜಪೇಯಿ ಕಾಲೇಜಿಗೆ ಪ್ರಾಧ್ಯಾಪಕರ ಕೊರತೆ: 214ರಲ್ಲಿ 59 ಹುದ್ದೆ ಮಾತ್ರ ನೇಮಕಾತಿ

*ವೈದ್ಯಾಧಿಕಾರಿ ಸೇರಿ ವಿವಿಧ ಹುದ್ದೆಗಳು ಖಾಲಿ

ವರುಣ ಹೆಗಡೆ
Published 12 ಏಪ್ರಿಲ್ 2024, 0:30 IST
Last Updated 12 ಏಪ್ರಿಲ್ 2024, 0:30 IST
ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ
ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ   

ಬೆಂಗಳೂರು: ವೈದ್ಯಕೀಯ ಶಿಕ್ಷಣದ ಜತೆಗೆ ಆರೋಗ್ಯ ಸೇವೆಗಳನ್ನೂ ಒದಗಿಸುತ್ತಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು (ಎಬಿವಿಎಂಸಿಆರ್‌ಐ) ಪ್ರಾಧ್ಯಾಪಕರು ಹಾಗೂ ವೈದ್ಯಾಧಿಕಾರಿಗಳ ಕೊರತೆ ಎದುರಿಸುತ್ತಿದೆ. ಇದರಿಂದಾಗಿ ಶಿಕ್ಷಣದ ಜತೆಗೆ ಚಿಕಿತ್ಸೆಯಲ್ಲಿಯೂ ವ್ಯತ್ಯಯವಾಗುತ್ತಿದೆ. 

ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಹೆಸರನ್ನು ಎಬಿವಿಎಂಸಿಆರ್‌ಐ ಎಂದು 2020ರಲ್ಲಿ ಮರುನಾಮಕರಣ ಮಾಡಲಾಗಿದೆ. ಸಂಸ್ಥೆಯಡಿ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಎಚ್.ಎಸ್.ಐ.ಎಸ್. ಘೋಷಾ ಆಸ್ಪತ್ರೆ ಹಾಗೂ ಚರಕ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಬೌರಿಂಗ್ ಮತ್ತು ಘೋಷಾ ಆಸ್ಪತ್ರೆಗೆ ನಗರದ ಜತೆಗೆ ವಿವಿಧ ಜಿಲ್ಲೆಗಳಿಂದಲೂ ರೋಗಿಗಳು ಬರುತ್ತಾರೆ. ಎಬಿವಿಎಂಸಿಆರ್‌ಐ ಪ್ರಾಧ್ಯಾಪಕರು ಶಿಕ್ಷಣದ ಜತೆಗೆ ರೋಗಿಗಳಿಗೆ ಚಿಕಿತ್ಸೆಯನ್ನು ಒದಗಿಸುತ್ತಿದ್ದಾರೆ. ಸಂಸ್ಥೆಯಡಿ ಮಂಜೂರಾಗಿದ್ದ 214 ಹುದ್ದೆಗಳಲ್ಲಿ 155 ಹುದ್ದೆಗಳು ಖಾಲಿಯಿವೆ. 59 ಹುದ್ದೆಗಳಿಗೆ ಮಾತ್ರ ಪ್ರಾಧ್ಯಾಪಕರು, ವೈದ್ಯಾಧಿಕಾರಿಗಳ ನೇಮಕಾತಿ ನಡೆದಿದೆ. 

ಸಂಸ್ಥಯು ವಿಕಿರಣ ವಿಜ್ಞಾನ, ಅರವಳಿಕೆ ವಿಜ್ಞಾನ ಸೇರಿ 21 ವಿಭಾಗಗಳನ್ನು ಹೊಂದಿದೆ. ಅಂಗರಚನಾ ವಿಜ್ಞಾನದಲ್ಲಿ ಮಂಜೂರಾದ ಮೂರು ಸಹಾಯಕ ಪ್ರಾಧ್ಯಾಪಕ ಹುದ್ದೆಯಲ್ಲಿ ಎರಡು ಹುದ್ದೆಗಳು ಖಾಲಿ ಉಳಿದಿವೆ. ಜನರಲ್ ಮೆಡಿಸಿನ್ ವಿಭಾಗದಲ್ಲಿ ನಾಲ್ಕು ಸಹ ಪ್ರಾಧ್ಯಾಪಕ ಹುದ್ದೆಯಲ್ಲಿ ಎರಡು, ಐದು ಸಹಾಯಕ ಪ್ರಾಧ್ಯಾಪಕ ಹುದ್ದೆಯಲ್ಲಿ ಎರಡು ಹುದ್ದೆಗಳಿಗೆ ಪೂರ್ಣಾವಧಿ ಪ್ರಾಧ್ಯಾಪಕರಿಲ್ಲ. ಮಕ್ಕಳ ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ 11 ಹುದ್ದೆಗಳಲ್ಲಿ 10 ಹುದ್ದೆಗಳು ಖಾಲಿ ಉಳಿದಿವೆ. 

ADVERTISEMENT

ಸ್ತ್ರೀರೋಗ ತಜ್ಞರ ಕೊರತೆ: ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಘೋಷಾ ಆಸ್ಪತ್ರೆಯು 120 ಹಾಸಿಗೆಗಳನ್ನು ಹೊಂದಿದ್ದು, ಇದು ತಾಯಿ–ಮಕ್ಕಳ ಆಸ್ಪತ್ರೆಯಾಗಿದೆ. ಸಂಸ್ಥೆಯ ಮಾಹಿತಿ ಪ್ರಕಾರ ಪ್ರಸೂತಿ ಮತ್ತು ಸ್ತ್ರೀರೋಗ ವಿಜ್ಞಾನ ವಿಭಾಗ ತಜ್ಞ ವೈದ್ಯರ ಕೊರತೆ ಎದುರಿಸುತ್ತಿದೆ. ಈ ವಿಭಾಗಕ್ಕೆ ಮಂಜೂರಾಗಿದ್ದ 16 ಹುದ್ದೆಗಳಲ್ಲಿ 13 ಹುದ್ದೆಗಳು ಖಾಲಿ ಉಳಿದಿವೆ. ಅದೇ ರೀತಿ, ಅರವಳಿಕೆ ವಿಭಾಗವೂ ವೈದ್ಯರ ಕೊರತೆ ಎದುರಿಸುತ್ತಿದ್ದು, ಮಂಜೂರಾಗಿರುವ 17 ಹುದ್ದೆಗಳಲ್ಲಿ 5 ಹುದ್ದೆಗಳಿಗೆ ಮಾತ್ರ ನೇಮಕಾತಿ ನಡೆದಿದೆ.

ನಗರದ ಕೇಂದ್ರ ಭಾಗವಾದ ಶಿವಾಜಿನಗರದಲ್ಲಿ ಚರಕ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ತಲೆಯೆತ್ತಿ ನಾಲ್ಕು ವರ್ಷವಾದರೂ ಅಗತ್ಯವಿರುವ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಯ ನೇಮಕಾತಿ ನಡೆದಿಲ್ಲ. ಈ ಆಸ್ಪತ್ರೆ, ಎರಡು ವರ್ಷಗಳಿಂದ ನಿರುಪಯುಕ್ತವಾಗಿದೆ. ಸದ್ಯ ಈ ಆಸ್ಪತ್ರೆಯಲ್ಲಿ ತಲಾ ಇಬ್ಬರು ಶುಶ್ರೂಷಕರು, ಗ್ರೂ‍ಪ್ ಡಿ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ವರದಿಯಾದಾಗ ಸೋಂಕಿತರ ಚಿಕಿತ್ಸೆಗೆ ಈ ಆಸ್ಪತ್ರೆಯನ್ನು ಬಳಸಿಕೊಳ್ಳಲಾಗಿತ್ತು. 

‘ಪ್ರಾಧ್ಯಾಪಕರ ಕೊರತೆಯಿಂದ ತಜ್ಞ ವೈದ್ಯರ ಸೇವೆ ರೋಗಿಗಳಿಗೆ ಲಭ್ಯವಾಗುತ್ತಿಲ್ಲ. ಕಿರಿಯ ವೈದ್ಯರನ್ನೇ ವಿವಿಧ ವಿಭಾಗಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಸಂಸ್ಥೆಯ ವೈದ್ಯರೊಬ್ಬರು ತಿಳಿಸಿದರು.

‘ಕಡ್ಡಾಯ ಸೇವೆಯಡಿ ಭರ್ತಿ’

‘ಬೋಧಕ ನಿವಾಸಿ ವೈದ್ಯಾಧಿಕಾರಿ ಹುದ್ದೆಗಳಿಗೆ ಆರೋಗ್ಯ ಇಲಾಖೆಯ ಒಂದು ವರ್ಷ ಕಡ್ಡಾಯ ಸೇವೆ ನಿಯಮದಡಿ ಎಂಬಿಬಿಎಸ್ ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಸುಗಮ ನಿರ್ವಹಣೆಯ ದೃಷ್ಟಿಯಿಂದ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗುತ್ತದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ಮನೋಜ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.