ADVERTISEMENT

ಡ್ರಗ್ಸ್; ‘ಸಿಂಗಂ’ ಸಿನಿಮಾ ಸಹ ನಟ ಬಂಧನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 19:11 IST
Last Updated 29 ಸೆಪ್ಟೆಂಬರ್ 2021, 19:11 IST
ಚೆಕ್ವುಮೆ ಮಾಳ್ವಿನ್
ಚೆಕ್ವುಮೆ ಮಾಳ್ವಿನ್   

ಬೆಂಗಳೂರು: ಡ್ರಗ್ಸ್ ಮಾರುತ್ತಿದ್ದ ಆರೋಪದಡಿ ಸಿನಿಮಾ ಸಹ ನಟ ಚೆಕ್ವುಮೆ ಮಾಳ್ವಿನ್ (45) ಎಂಬಾತನನ್ನು ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಪೊಲೀಸರು ಬಂಧಿಸಿದ್ದಾರೆ.

‘ನೈಜೀರಿಯಾ ಪ್ರಜೆಯಾದ ಚೆಕ್ವುಮೆ, ನಗರದಲ್ಲಿ ನೆಲೆಸಿ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ. ಅಕ್ರಮವಾಗಿ ಹಣ ಸಂಪಾದಿಸಲು ಡ್ರಗ್ಸ್ ಮಾರಾಟಕ್ಕೆ ಇಳಿದಿದ್ದ. ಆತನನ್ನು ಬಂಧಿಸಿ ₹ 8 ಲಕ್ಷ ಮೌಲ್ಯದ 15 ಗ್ರಾಂ ಎಂಡಿಎಂಎ, ಹಶೀಷ್ ಹಾಗೂ ₹ 2,500 ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಎಚ್‌ಬಿಆರ್ ಲೇಔಟ್‌ಗೆ ಬಂದಿದ್ದ ಆರೋಪಿ ಚೆಕ್ವುಮೆ, ಮಾದಕ ವಸ್ತು ಮಾರಲು ಯತ್ನಿಸಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ನಡೆಸಿ ಆತನನ್ನು ಸೆರೆ ಹಿಡಿಯಲಾಯಿತು.’ ಎಂದರು.

ADVERTISEMENT

ವೈದ್ಯಕೀಯ ವೀಸಾದಡಿ ಭಾರತಕ್ಕೆ ಬಂದಿದ್ದ: ‘ನೈಜೀರಿಯಾದ ಅಬುಜಾದಲ್ಲಿರುವ ನ್ಯೂಯಾರ್ಕ್ ಫಿಲ್ಮ್‌ ಅಕಾಡೆಮಿ
ಯಲ್ಲಿ 6 ತಿಂಗಳು ತರಬೇತಿ ಪಡೆದಿದ್ದ ಆರೋಪಿ, ಸ್ಥಳೀಯ ಸಿನಿಮಾಗಳಲ್ಲಿ ಅಭಿನಯಿಸಿದ್ದ’ ಎಂದರು.

‘ವೈದ್ಯಕೀಯ ವೀಸಾದಡಿ ನೈಜೀರಿಯಾದಿಂದ ಭಾರತಕ್ಕೆ ಕೆಲ ವರ್ಷಗಳ ಹಿಂದೆ ಬಂದಿದ್ದ ಆರೋಪಿ, 2 ತಿಂಗಳು ಮುಂಬೈನಲ್ಲಿ ನೆಲೆಸಿದ್ದ. ಅಲ್ಲಿಯ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ (ಎನ್‌ವೈಎಫ್‌ಎ) ಎರಡನೇ ಬಾರಿ ನಟನೆಯ ತರಬೇತಿ ಪಡೆದಿದ್ದ. ಬಳಿಕ ಬೆಂಗಳೂರಿಗೆ ಬಂದು ಉಳಿದುಕೊಂಡಿದ್ದ.’

‘ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾ ಕ್ಷೇತ್ರಗಳಲ್ಲಿ ಆರೋಪಿ ತೊಡಗಿಸಿಕೊಂಡಿದ್ದ. ವಿಶ್ವರೂಪಂ, ಸಿಂಗಂ, ಅಣ್ಣಾ ಬಾಂಡ್, ದಿಲ್‌ವಾಲೆ, ಜಂಬೂ ಸವಾರಿ, ಪರಮಾತ್ಮ ಸೇರಿ 20ಕ್ಕೂ ಹೆಚ್ಚು ಸಿನಿ
ಮಾಗಳಲ್ಲಿ ಅಭಿನಯಿಸಿದ್ದ’ ಎಂದರು.

ಡ್ರಗ್ಸ್ ಮಾರಾಟವೇ ವೃತ್ತಿ; ‘ಸಿನಿಮಾ ಅಭಿನಯದಿಂದ ಬಂದ ಹಣ ಆರೋಪಿಗೆ ಸಾಕಾಗುತ್ತಿರಲಿಲ್ಲ. ಹೀಗಾಗಿ, ಡ್ರಗ್ಸ್ ಮಾರಾಟ ಮಾಡಿ ಹಣ ಸಂಪಾದಿಸಲು ಆರೋಪಿ ಮುಂದಾಗಿದ್ದ. ದಿನಗಳು ಕಳೆದಂತೆ ಡ್ರಗ್ಸ್ ಮಾರಾಟವನ್ನೇ ವೃತ್ತಿ ಮಾಡಿಕೊಂಡಿದ್ದ’ ಎಂದೂ ಅಧಿಕಾರಿ ವಿವರಿಸಿದರು.

‘ಸಿಂಗಂ’ನಲ್ಲೂ ಡ್ರಗ್ಸ್ ಪೆಡ್ಲರ್ ಸಹಚರ ಪಾತ್ರ’

‘ನಟ ಸೂರ್ಯ ಅಭಿನಯದ ‘ಸಿಂಗಂ’ ತಮಿಳು ಸಿನಿಮಾದಲ್ಲೂ ಆರೋಪಿ ಚೆಕ್ವುಮೆ ಮಾಳ್ವಿನ್ ಅಭಿನಯಿಸಿದ್ದಾನೆ. ಡ್ರಗ್ಸ್ ಪೆಡ್ಲರ್‌ ಪಾತ್ರದಲ್ಲಿ ನಟ ಡ್ಯಾನಿ ಕಾಣಿಸಿಕೊಂಡಿದ್ದರು. ಅವರ ಸಹಚರನಾಗಿ ಚೆಕ್ವುಮೆ ನಟಿಸಿದ್ದ’ ಎಂದೂ ಪೊಲೀಸ್ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.