ADVERTISEMENT

ಸಿಂಗನಾಯಕನಹಳ್ಳಿ ಕೆರೆ: 6,316 ಮರ ಕಡಿಯುವುದಕ್ಕೆ ವಿರೋಧ

ಮರ ಕಡಿಯದೆಯೇ ಕೆರೆ ಅಭಿವೃದ್ಧಿಪಡಿಸಿ– ಪರಿಸರ ಕಾರ್ಯಕರ್ತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 22:12 IST
Last Updated 21 ಜೂನ್ 2021, 22:12 IST
ಸಿಂಗನಾಯಕನಹಳ್ಳಿ ಕೆರೆ ಅಂಗಳದಲ್ಲಿ ಬೆಳೆದಿರುವ ಮರಗಳು
ಸಿಂಗನಾಯಕನಹಳ್ಳಿ ಕೆರೆ ಅಂಗಳದಲ್ಲಿ ಬೆಳೆದಿರುವ ಮರಗಳು   

ಬೆಂಗಳೂರು: ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಗೆ 6,316 ಮರಗಳನ್ನು ಕಡಿಯುವುದಕ್ಕೆ ಪರಿಸರ ಕಾರ್ಯಕರ್ತರಿಂದ ಹಾಗೂ ವಿವಿಧ ಸಂಘಟನೆಗಳಿಂದ ಒಕ್ಕೊರಲಿನ ವಿರೋಧ ವ್ಯಕ್ತವಾಗಿದೆ. ಈ ಕೆರೆಯಂಗಳದಲ್ಲಿ ಬೆಳೆದಿರುವ ಕಿರು ಅರಣ್ಯ ಸಂರಕ್ಷಣೆಗಾಗಿ ಆನ್‌ಲೈನ್‌ನಲ್ಲೂ ಅಭಿಯಾನ ಆರಂಭವಾಗಿದೆ.

‘ನಮ್ಮ ಬೆಂಗಳೂರು ಫೌಂಡೇಷನ್‌’ (ಎನ್‌ಬಿಎಫ್‌) ಸದಸ್ಯರು, ಪರಿಸರ ವಿಜ್ಞಾನಿಗಳುಹಾಗೂ ಪರಿಸರ ಕಾರ್ಯಕರ್ತರನ್ನು ಒಳಗೊಂಡ ತಂಡವು ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

‘ಈ ಪ್ರದೇಶದಲ್ಲಿ ನಿತ್ಯವೂ ಸಾವಿರಕ್ಕೂ ಹೆಚ್ಚು ಗೋವುಗಳು ಮೇಯುತ್ತಿರುತ್ತವೆ. ಈ ಮರಗಳನ್ನೆಲ್ಲ ಕಡಿದರೆ ಇಲ್ಲಿ ಜಾನುವಾರುಗಳನ್ನು ಮೇಯಿಸುವುದಕ್ಕೂ ಸಮಸ್ಯೆ ಆಗಲಿದೆ’ ಎದು ಸ್ಥಳೀಯ ನಿವಾಸಿ ಮುನಿಕೆಂಪಯ್ಯ ಅವರು ಪರಿಸರ ಕಾರ್ಯಕರ್ತರ ತಂಡದ ಜೊತೆ ಅಭಿಪ್ರಾಯ ಹಂಚಿಕೊಂಡರು.

ADVERTISEMENT

ಕಿರು ಅರಣ್ಯದಂತೆ ಬೆಳೆದಿರುವ ಈ ಪ್ರದೇಶದಲ್ಲಿ ನೂರಾರು ನವಿಲುಗಳು ಹಾಗೂ ನಾನಾ ಬಗೆಯ ಪಕ್ಷಿಗಳು ಆಶ್ರಯ ಪಡೆದಿವೆ. ಈಗ ನವಿಲು ಸಂತಾನೋತ್ಪತ್ತಿ ಮಾಡುವ ಸಮಯ. ನವಿಲು ಮೊಟ್ಟೆ ಇಟ್ಟ ಜಾಗವನ್ನೂ ಪರಿಸರ ಕಾರ್ಯಕರ್ತರ ತಂಡದವರಿಗೆ ಸ್ಥಳೀಯರೊಬ್ಬರು ತೋರಿಸಿದರು.

‘ಕೆರೆ ಅಭಿವೃದ್ಧಿಪಡಿಸುವುದನ್ನು ನಾವು ವಿರೋಧಿಸುವುದಿಲ್ಲ. ಮರಗಳನ್ನು ಉಳಿಸಿಕೊಂಡು ಅಭಿವೃದ್ಧಿ ಕಾರ್ಯ ಕೈಗೊಳ್ಳಲಿ. ಕಾಮಗಾರಿಯಿಂದ ಇಲ್ಲಿನ ಪರಿಸರ ವ್ಯವಸ್ಥೆಗೆ ಧಕ್ಕೆ ಉಂಟಾಗುವುದಿಲ್ಲ ಎಂಬುದನ್ನು ಖಾತರಿಪಡಿಸಲಿ. ಇಲ್ಲಿ ಕಡಿಯಲು ಉದ್ದೇಶಿಸಿರುವ ಮರಗಳಿಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುನ್ನವೇ ಗುರುತು ಸಂಖ್ಯೆ ನೀಡಿದ್ದು ಕಂಡು ಆಶ್ಚರ್ಯವಾಯಿತು’ ಎನ್‌ಬಿಎಫ್‌ನ ಪ್ರಧಾನ ವ್ಯವಸ್ಥಾಪಕ ವಿನೋದ್‌ ಜೇಕಬ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನರಿಯೊಂದರ ಕಳೇಬರವು ಕಾಣಸಿಕ್ಕಿದೆ. ಇಲ್ಲಿ ನರಿಗಳೂ ಹೇರಳ ಸಂಖ್ಯೆಯಲ್ಲಿವೆ. ಇಲ್ಲಿನ ಮರಗಳನ್ನು ಕಡಿದು ಕೆರೆಯ ಹೂಳೆತ್ತಿದರೆ ಇಲ್ಲಿನ ಪರಿಸರ ವ್ಯವಸ್ಥೆ ಸಂಪೂರ್ಣ ಹದಗೆಡಲಿದೆ’ ಎಂದು ಬಿಬಿಬಿಎಂಪಿ ಜೀವವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯ ವಿಜಯ್‌ ನಿಶಾಂತ್‌ ಆತಂಕ ವ್ಯಕ್ತಪಡಿಸಿದರು.

ಈ ಕೆರೆಯಂಗಳದ ಮರಗಳನ್ನು ಉಳಿಸಿಕೊಳ್ಳಲು ಹಮ್ಮಿಕೊಂಡಿರುವ ಆನ್‌ಲೈನ್‌ ಅಭಿಯಾನಕ್ಕೆ (https://act.jhatkaa.org/campaigns/no-axing-of-trees-hebbal-nagwara-valleಯ) ಭಾರಿ ಬೆಂಬಲ ವ್ಯಕ್ತವಾಗಿದೆ. 8 ಸಾವಿರಕ್ಕೂ ಅಧಿಕ ಮಂದಿ ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.

ಮನವಿ: ಮರಗಳನ್ನು ಕಡಿಯಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ನಮ್ಮ ಬೆಂಗಳೂರು ಫೌಂಡೇಷನ್‌ ಬೆಂಗಳೂರು ನಗರ ಜಿಲ್ಲೆಯ ಉಪಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿದೆ.

‘ಕೆರೆ ಅಭಿವೃದ್ಧಿಗಾಗಿ ಮರ ಕಡಿಯುವ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ (aranya.gov.in) ಹಂಚಿಕೊಂಡಿರುವ ಮಾಹಿತಿಯಲ್ಲಿ ಇಲ್ಲಿನ ಜೀವವೈವಿಧ್ಯದ ಬಗ್ಗೆ ಉಲ್ಲೇಖವೇ ಇಲ್ಲ. ಇಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಪರಿಸರ ವ್ಯವಸ್ಥೆ ದಶಕಗಳಿಂದ ಅಂತರ್ಜಲ ವೃದ್ಧಿಗೂ ಕೊಡುಗೆ ನೀಡುತ್ತಿದೆ. ಈ ಅಂಶಗಳನ್ನೂ ಪರಿಗಣಿಸಬೇಕು’ ಎಂದು ಪ್ರತಿಷ್ಠಾನವು ಒತ್ತಾಯಿಸಿದೆ.

ಆಕ್ಷೇಪಣೆ ಸಲ್ಲಿಕೆ–ಕಾಲಾವಕಾಶ ಹೆಚ್ಚಿಸಿ: ‘ಕೆರೆಯ ಅಭಿವೃದ್ಧಿಗಾಗಿ ಮರಗಳನ್ನು ಕಡಿಯುವ ಕುರಿತು ಆಕ್ಷೇಪಣೆ ಸಲ್ಲಿಸಲು ಜೂನ್‌ 14ರಿಂದ 24ರವರೆಗೆ ಮಾತ್ರ ಅರಣ್ಯ ಇಲಾಖೆ ಕಾಲಾವಕಾಶ ನೀಡಿದೆ. ಲಾಕ್‌ಡೌನ್‌ ಜಾರಿಯಲ್ಲಿದ್ದ ಕಾರಣ ಈ ಕಾಲಾವಕಾಶವನ್ನು ಹೆಚ್ಚಿಸಬೇಕು’ ಎಂದು ವಿನೋದ್‌ ಜೇಕಬ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.