ADVERTISEMENT

ವಿಶ್ವೇಶ್ವರಯ್ಯ ಟರ್ಮಿನಲ್‌: ಜೂ.6ರಿಂದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 23 ಮೇ 2022, 19:52 IST
Last Updated 23 ಮೇ 2022, 19:52 IST
ಸರ್‌ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್
ಸರ್‌ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್   

ಬೆಂಗಳೂರು: ನಿರ್ಮಾಣಗೊಂಡು ಉದ್ಘಾಟನೆಗಾಗಿ 14 ತಿಂಗಳಿಂದ ಕಾದಿದ್ದ ಬೈಯ್ಯಪ್ಪನಹಳ್ಳಿ ಬಳಿಯ ಸರ್ ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಕಾರ್ಯಾರಂಭಕ್ಕೆ ಕೊನೆಗೂ ಕಾಲ ಕೂಡಿ ಬಂದಿದ್ದು, ಜೂನ್ 6ರಿಂದ ಮೂರು ರೈಲುಗಳ ಸಂಚಾರ ಆರಂಭಿಸಲು ನೈರುತ್ಯ ರೈಲ್ವೆ ಮುಂದಾಗಿದೆ.

ಮೊದಲ ಹಂತದಲ್ಲಿ ವಾರದಲ್ಲಿ ಮೂರು ದಿನ ಬೆಂಗಳೂರಿನಿಂದ ಹೊರಡುವ ಬಾಣಸವಾಡಿ–ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲು(ರೈಲು ಗಾಡಿ ಸಂಖ್ಯೆ 12684), ಬಾಣಸವಾಡಿ–ತಿರುವನಂತಪುರ (16320), ಬಾಣಸವಾಡಿ–ಪಟ್ನಾ (22354) ರೈಲುಗಳ ಸಂಚಾರವನ್ನು ಸರ್‌ ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ನಿಂದ ಕಾರ್ಯಾಚರಣೆಗೊಳಿಸಲು ನಿರ್ಧರಿಸಿ ವೇಳಾಪಟ್ಟಿ ಪ್ರಕಟಿಸಿದೆ.

ಬೈಯಪ್ಪನಹಳ್ಳಿ ಮತ್ತು ಬಾಣಸವಾಡಿ ರೈಲು ನಿಲ್ದಾಣಗಳ ನಡುವೆ ತಲೆ ಎತ್ತಿರುವ ವಿಮಾನ ನಿಲ್ದಾಣ ಮಾದರಿಯ ರೈಲು ನಿಲ್ದಾಣ ಕಾಮಗಾರಿ ಪೂರ್ಣಗೊಂಡರೂ ಕಾರ್ಯಾಚರಣೆ ಆರಂಭವಾಗಿರಲಿಲ್ಲ. ಪ್ರಧಾನ ಮಂತ್ರಿಯಿಂದ ಉದ್ಘಾಟನೆ ಮಾಡಿಸಲು ಕಾಯಲಾಗುತ್ತಿದೆ ಎಂಬುದನ್ನು ನೈರುತ್ಯ ರೈಲ್ವೆ ಅಲ್ಲಗಳೆದಿದೆ.

ADVERTISEMENT

‘ಯಶವಂತಪುರ ಮತ್ತುಕೆಎಸ್‌ಆರ್‌(ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ) ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಈ ಟರ್ಮಿನಲ್ ನಿರ್ಮಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ರೈಲುಗಳ ಸಂಖ್ಯೆ ಕಡಿಮೆ ಮಾಡಿದ್ದರಿಂದ ಆ ಎರಡು ನಿಲ್ದಾಣಗಳ ಮೇಲಿನ ಒತ್ತಡ ಕಡಿಮೆಯೇ ಇತ್ತು. ನಿಧಾನವಾಗಿ ಎಲ್ಲ ರೈಲುಗಳ ಸಂಚಾರ ಆರಂಭಿಸಲಾಗಿದ್ದು, ಒತ್ತಡ ಹೆಚ್ಚಾಗಿರುವುದರಿಂದ ಈಗ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಕಾರ್ಯಾಚರಣೆ ಸ್ಥಳಾಂತರಿಸಲಾಗುತ್ತಿದೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನಿಶ್ ಹೆಗಡೆ ಸ್ಪಷ್ಟಪಡಿಸಿದರು.

‘ಈ ಟರ್ಮಿನಲ್‌ನಲ್ಲೇ ರೈಲುಗಳ ತಪಾಸಣೆ ಮತ್ತು ನಿರ್ವಹಣೆ ಘಟಕವಿದೆ. ಅದು 11 ತಿಂಗಳಿಂದ ಕಾರ್ಯಾಚರಣೆಯಲ್ಲಿದೆ. ನಿಲ್ದಾಣಕ್ಕೆ ಪ್ರಯಾಣಿಕರು ಬರಲು ರಸ್ತೆ ವ್ಯವಸ್ಥೆ ಸಮರ್ಪಕವಾಗಿ ಇರಲಿಲ್ಲ. ಅವೆಲ್ಲವೂ ಈಗ ಪೂರ್ಣಗೊಂಡಿದೆ. ಹಂತ– ಹಂತವಾಗಿ ರೈಲುಗಳ ಕಾರ್ಯಾಚರಣೆ ಈ ನಿಲ್ದಾಣದಿಂದ ಆರಂಭವಾಗಲಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.