ADVERTISEMENT

ತಂಗಿ ಮನೆಯಲ್ಲಿ ಚಿನ್ನ ಕದ್ದ ಅಕ್ಕನ ಬಂಧನ: ₹ 5.50 ಲಕ್ಷ ಮೌಲ್ಯದ ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 16:03 IST
Last Updated 30 ಆಗಸ್ಟ್ 2024, 16:03 IST
ಶಶಿಕಲಾ
ಶಶಿಕಲಾ   

ಬೆಂಗಳೂರು: ತಂಗಿಯ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಅಕ್ಕನನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿ, ₹ 5.50 ಲಕ್ಷ ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಎಲೆಕ್ಟ್ರಾನಿಕ್‌ ಸಿಟಿ ನಿವಾಸಿ ಶಶಿಕಲಾ (30) ಬಂಧಿತ ಆರೋಪಿ.

ಆಡುಗೋಡಿ ವಿಎಸ್​ಆರ್ ಬಡಾವಣೆ ನಿವಾಸಿ ಚಂದ್ರಿಕಾ ಅವರು ಪಿ.ಜಿ.ಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರೆ, ಪತಿ ಶರವಣ ಗೂಡ್ಸ್‌ ವಾಹನ ಚಾಲಕ. ಅನಾರೋಗ್ಯದ ಕಾರಣದಿಂದ ಪತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಎಲೆಕ್ಟ್ರಾನಿಕ್ ಸಿಟಿಯ ದೊಡ್ಡ ತೂಗೂರಿನಲ್ಲಿರುವ ಅಕ್ಕನ ಮನೆಗೆ ವಿಶ್ರಾಂತಿಗಾಗಿ ಆಗಸ್ಟ್ 15ರಂದು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಈ ಮಧ್ಯೆ ಔಷಧಿ ತರುವಂತೆ ಅಕ್ಕ ಶಶಿಕಲಾಗೆ, ತಂಗಿ ಚಂದ್ರಿಕಾ ಹೊಂಡಾ ಆ್ಯಕ್ಟಿವಾ ವಾಹನದ ಕೀ ನೀಡಿದ್ದರು. ಕೀ ಬಂಚ್​ನಲ್ಲಿ ಮನೆಯ ಕೀ ಸಹ ಇತ್ತು. ಇದನ್ನು ಗಮನಿಸಿದ ಶಶಿಕಲಾ, ದ್ವಿಚಕ್ರ ವಾಹನದ ಮೂಲಕ ನೇರವಾಗಿ ಆಡುಗೋಡಿಯಲ್ಲಿರುವ ತಂಗಿ ಮನೆಗೆ ಬರುವಾಗ ಮಾರ್ಗ ಮಧ್ಯೆ ತನ್ನ ದೊಡ್ಡಮ್ಮನನ್ನು ಕರೆದುಕೊಂಡು ಬಂದಿದ್ದರು. ತಂಗಿ ಮನೆಗೆ ಸುಮಾರು 100 ಮೀಟರ್ ದೂರದಲ್ಲಿ ದೊಡ್ಡಮ್ಮನನ್ನು ಇಳಿಸಿದ್ದರು. ಬಳಿಕ ತಂಗಿಯ ಮನೆಯ ಬೀಗ ತೆಗೆದು, ಬೀರುವಿನ ಕೀ ಹುಡುಕಾಡಿದ್ದಾರೆ. ಸಿಗದಿದ್ದಾಗ ಬೀರು ಬಾಗಿಲನ್ನು ಒಡೆದು 74 ಗ್ರಾಂ. ಚಿನ್ನ ಹಾಗೂ 354 ಗ್ರಾಂ. ಬೆಳ್ಳಿ ಆಭರಣ ಕಳವು ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಂದ್ರಿಕಾ ಅವರ ಮನೆ ಸುತ್ತಮುತ್ತ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ, ಅಕ್ಕ ಮನೆಗೆ ಬಂದು ಹೋಗಿರುವ ಮಾಹಿತಿ ಗೊತ್ತಾಗಿದೆ. ಆಕೆಯನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಶಿಕಾರಿಪಾಳ್ಯ ಹಾಗೂ ಹೊಸ ರೋಡ್‌ನ ಆಭರಣ ಅಂಗಡಿಯಲ್ಲಿ ಅಡವಿಟ್ಟಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.