
ಬೆಂಗಳೂರು: ರಿಯಲ್ ಎಸ್ಟೇಟ್ ಕಂಪನಿ ‘ಕಾನ್ಫಿಡೆಂಟ್ ಗ್ರೂಪ್’ನ ಮುಖ್ಯಸ್ಥ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಚುರುಕುಗೊಳಿಸಿದೆ.
ರಾಯ್ ಆತ್ಮಹತ್ಯೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಕಾರಣವೇ? ವೈಯಕ್ತಿಕ ಸಮಸ್ಯೆಗಳು ಹಾಗೂ ವ್ಯವಹಾರಿಕ ಕಾರಣಗಳು ಇರಬಹುದೇ? ಎಂಬ ಅನುಮಾನ ಹುಟ್ಟಿಕೊಂಡಿದೆ. ಹಾಗಾಗಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.
ಕೊಚ್ಚಿಯಿಂದ ಬಂದಿರುವ ಐಆರ್‌ಎಸ್ ಅಧಿಕಾರಿ ಕೃಷ್ಣಪ್ರಸಾದ್ ನೇತೃತ್ವದ ತಂಡ ಕಾನ್ಫಿಡೆಂಟ್ ಗ್ರೂಪ್‌ಗೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಈ ತಂಡಕ್ಕೆ ಬೆಂಗಳೂರು ಬಿಟ್ಟು ತೆರಳದಂತೆ ಸೂಚಿಸಿರುವ ಎಸ್‌ಐಟಿ, ಅಗತ್ಯವಿದ್ದರೆ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿದೆ.
ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ವಂಶಿಕೃಷ್ಣ ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ ಅವರ ನೇತೃತ್ವದ ವಿಶೇಷ ತನಿಖಾ ತಂಡ ಶನಿವಾರದಿಂದಲೇ ತನಿಖೆ ಆರಂಭಿಸಿದ್ದು, ದಾಳಿಗೆ ಸಂಬಂಧಿಸಿದಂತೆ ಯಾವೆಲ್ಲ ವಿಷಯಗಳನ್ನು ಹಂಚಿಕೊಂಡಿದ್ದಾರೆ ಎಂದು ರಾಯ್ ಸಹೋದರ ಸಿ.ಜೆ.ಬಾಬು ಮತ್ತು ಪುತ್ರ ಮೋಹನ್ ಅವರ ಹೇಳಿಕೆ ಪಡೆದುಕೊಂಡಿದೆ.
ರಾಯ್ ಐಟಿ ದಾಳಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರೇ? ಯಾವ ವಿಚಾರಗಳನ್ನು ಚರ್ಚಿಸಿದರು ಎಂಬುದು ಸೇರಿ ಹಲವು ಮಾಹಿತಿಗಳನ್ನು ಬಾಬು ಅವರಿಂದ ಎಸ್‌ಐಟಿ ಪಡೆದುಕೊಂಡಿದೆ. ರಾಯ್ ಅವರ ಪತ್ನಿ ಹಾಗೂ ಮಗಳನ್ನು ಸೋಮವಾರ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ರಾಯ್ ಆತ್ಮಹತ್ಯೆ ಮಾಡಿಕೊಂಡ ದಿನ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದ ಕಂಪನಿಯ ನಿರ್ದೇಶಕರು, ಹಣಕಾಸು ವಿಭಾಗದ ಸಿಬ್ಬಂದಿ, ಆಪ್ತರ ವಿಚಾರಣೆಯನ್ನು ನಡೆಸಲಾಯಿತು. ರಾಯ್ ಅವರು ಒತ್ತಡದಲ್ಲಿದ್ದರೇ? ಅವರ ವರ್ತನೆ ಯಾವ ರೀತಿ ಇತ್ತು? ಗುಂಡಿನ ಶಬ್ದ ಕೇಳಲಿಲ್ಲವೇ ಎಂಬ ಪ್ರಶ್ನೆಗಳನ್ನು ಕೇಳಿ, ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಹೊರ ರಾಜ್ಯ ಹಾಗೂ ವಿದೇಶದಲ್ಲಿ ಕಂಪನಿಯ ವ್ಯವಹಾರ ನೋಡಿಕೊಳ್ಳುತ್ತಿದ್ದ ಸಿಬ್ಬಂದಿಯ ಬಗ್ಗೆಯೂ ತನಿಖಾ ತಂಡ ಮಾಹಿತಿ ಕಲೆ ಹಾಕಿದೆ.
ರಾಯ್ ಬಳಸುತ್ತಿದ್ದ ಎರಡು ಐಫೋನ್‌ಗಳನ್ನು ಜಪ್ತಿ ಮಾಡಿ, ದತ್ತಾಂಶ ಮರುಸಂಗ್ರಹಕ್ಕಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಯಾರ ಜತೆ ಮಾತನಾಡಿದ್ದಾರೆ? ಏನು ಮಾತನಾಡಿದ್ದಾರೆ? ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ರಾಯ್ ಅವರ ದಿನಚರಿಯ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಅಲ್ಲದೇ ರಾಯ್ ಅವರ ಲ್ಯಾಪ್‌ಟಾಪ್ ಹಾಗೂ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ. ಕಂಪನಿಯ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಯನ್ನು ಪರಿಶೀಲಿಸಲಾಗುತ್ತಿದ್ದು, ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದೆ.
ದಾಳಿ, ಶೋಧಕಾರ್ಯ ನಡೆಸುವ ತನಿಖಾ ಸಂಸ್ಥೆ, ಅಧಿಕಾರಿಗಳು ಸಾಮಾನ್ಯವಾಗಿ ಆರೋಪಿಗಳ ಬಳಿಯ ಮೊಬೈಲ್, ಪಿಸ್ತೂಲ್ ಸೇರಿ ಇತರೆ ವಸ್ತುಗಳನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆಯುತ್ತಾರೆ. ಆದರೆ, ಐ.ಟಿ ಅಧಿಕಾರಿಗಳು ರಾಯ್ ಬಳಿ ಪರವಾನಗಿ ಹೊಂದಿರುವ ಪಿಸ್ತೂಲ್ ಅನ್ನು ಯಾಕೆ ವಶಕ್ಕೆ ಪಡೆದಿರಲಿಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಸಿ.ಜೆ.ರಾಯ್ ಆತ್ಮಹತ್ಯೆ ಸಂಬಂಧ ಕಾನ್ಫಿಡೆಂಟ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಟಿ.ಎ.ಜೋಸೆಫ್ ನೀಡಿದ ದೂರಿನ ಅನ್ವಯ ಅಶೋಕ ನಗರದ ಠಾಣೆಯಲ್ಲಿ ಅನುಮಾನಸ್ಪದ ಸಾವು ಪ್ರಕರಣ ದಾಖಲಾಗಿದೆ. ಯಾವ ಒತ್ತಡ ಅವರನ್ನು ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿರಬಹುದು ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎದು ದೂರಿನಲ್ಲಿ ಕೋರಿದ್ದಾರೆ.
ತನಿಖಾ ವರದಿ ಬರುವವರೆಗೂ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಈಗ ಯಾವುದೇ ಹೇಳಿಕೆ ನೀಡಿದರೆ ಅದು ಊಹಾಪೋಹಗಳಿಗೆ ಕಾರಣವಾಗುತ್ತದೆ.–ಜಿ.ಪರಮೇಶ್ವರ, ಗೃಹ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.