ADVERTISEMENT

'ಬೆಸ್ಟ್’ ಕೇಂದ್ರವು ‘ಕಿತ್ತೂರು– ಕಲ್ಯಾಣ’ದ ಯುವಜನರಿಗೆ ಪೂರಕ: ಸಚಿವ ಪಾಟೀಲ್

ಪಿಇಎಸ್‌ ’ಬೆಸ್ಟ್‌’ ಕೇಂದ್ರದಲ್ಲಿ ಸಚಿವ ಡಾ. ಶರಣಪ್ರಕಾಶ ಪಾಟೀಲ್

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 16:14 IST
Last Updated 11 ಜುಲೈ 2025, 16:14 IST
‘ಬೆಸ್ಟ್‌’ ಕೇಂದ್ರದ ಮೊದಲನೇ ವಾರ್ಷಿಕೋತ್ಸವದಲ್ಲಿ  ಬಜಾಜ್ ಆಟೊ ಲಿಮಿಟೆಡ್‌ನ ಸಿಎಸ್‌ಆರ್ ಉಪಾಧ್ಯಕ್ಷ ಸುಧಾಕರ್ ಗುಡಿಪತಿ, ಸಚಿವ ಡಾ. ಶರಣಪ್ರಕಾಶ ಪಾಟೀಲ, ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ. ಜವಾಹರ್ ಮತ್ತಿತರರು ಹಾಜರಿದ್ದರು.
‘ಬೆಸ್ಟ್‌’ ಕೇಂದ್ರದ ಮೊದಲನೇ ವಾರ್ಷಿಕೋತ್ಸವದಲ್ಲಿ  ಬಜಾಜ್ ಆಟೊ ಲಿಮಿಟೆಡ್‌ನ ಸಿಎಸ್‌ಆರ್ ಉಪಾಧ್ಯಕ್ಷ ಸುಧಾಕರ್ ಗುಡಿಪತಿ, ಸಚಿವ ಡಾ. ಶರಣಪ್ರಕಾಶ ಪಾಟೀಲ, ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ. ಜವಾಹರ್ ಮತ್ತಿತರರು ಹಾಜರಿದ್ದರು.   

ಬೆಂಗಳೂರು: ‘ಎಲ್ಲ ಕೆಲಸಗಳನ್ನೂ ಸರ್ಕಾರವೇ ಮಾಡುವುದು ಕಷ್ಟ. ಖಾಸಗಿಯವರ ಯಶಸ್ವಿ ಕೈಗಾರಿಕಾ ಮಾದರಿಗಳಿಂದ ಸರ್ಕಾರವೂ ಕಲಿಯಬಹುದಾಗಿದೆ’ ಎಂದು ಕೌಶಲ್ಯಾಭಿವೃದ್ಧಿ, ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.

ಪಿಇಎಸ್ ವಿಶ್ವವಿದ್ಯಾಲಯದಲ್ಲಿ ನಡೆದ ಬಜಾಜ್ ಎಂಜಿನಿಯರಿಂಗ್ ಕೌಶಲ ತರಬೇತಿ (ಬೆಸ್ಟ್) ಕೇಂದ್ರದ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಬೆಸ್ಟ್‌’ ಕೇಂದ್ರವು, ಬಜಾಜ್‌ ಆಟೊ ಲಿಮಿಟೆಡ್‌ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್) ಉಪಕ್ರಮವಾಗಿದೆ.

‘ಬಜಾಜ್ ಆಟೊ ಮತ್ತು ಪಿಇಎಸ್ ವಿಶ್ವವಿದ್ಯಾಲಯದ ನಡುವಿನ ಈ ಸಹಯೋಗವು ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ಉತ್ತಮ ಉದಾಹರಣೆಯಾಗಿದೆ. ಕೌಶಲಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲು ಹಾಗೂ ಯುವ ಜನರನ್ನು ಸಬಲೀಕರಣಗೊಳಿಸಲು ಇಂಥ ಸಹಯೋಗದ ಪ್ರಯತ್ನಗಳಿಗೆ ಆದ್ಯತೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

‘ಇಂಥ ಯೋಜನೆಗಳು ವಿಶೇಷವಾಗಿ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನಕಾರಿ. ಆ ಭಾಗದ ಜಿಲ್ಲೆಗಳ ಯುವಜನರನ್ನು ಉನ್ನತೀಕರಿಸುವ ಮಾದರಿಯಾಗಿದೆ’ ಎಂದರು.

‘ಕೌಶಲ ಅಭಿವೃದ್ಧಿ ಮತ್ತು ಉದ್ಯೋಗದ ಗುರಿಗಳನ್ನು ಸಾಧಿಸಲು ಬಲವಾದ ಸರ್ಕಾರಿ-ಶೈಕ್ಷಣಿಕ-ಉದ್ಯಮ ಪಾಲುದಾರಿಕೆಯನ್ನು ಸರ್ಕಾರ ಇನ್ನಷ್ಟು ಅನ್ವೇಷಿಸಬೇಕಾಗಿದೆ’ ಎಂದು ಸಚಿವರು ಅಭಿ‍ಪ್ರಾಯಪಟ್ಟರು.

ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಡಿ. ಜವಾಹರ್, ಕುಲಪತಿ ಜೆ. ಸೂರ್ಯ ಪ್ರಸಾದ್ ಮತ್ತು ಬಜಾಜ್ ಆಟೊ ಲಿಮಿಟೆಡ್‌ನ ಸಿಎಸ್‌ಆರ್ ಉಪಾಧ್ಯಕ್ಷ ಸುಧಾಕರ್ ಗುಡಿಪತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

320 ವಿದ್ಯಾರ್ಥಿಗಳಿಗೆ ತರಬೇತಿ

‘ಬೆಸ್ಟ್’ ಕೇಂದ್ರವು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೆಕೆಟ್ರಾನಿಕ್ಸ್ ರೊಬೊಟಿಕ್ಸ್ ಇಂಡಸ್ಟ್ರಿ 4.0 ಮತ್ತು ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್‌ನಂತಹ ಸಮಕಾಲೀನ ತಂತ್ರಜ್ಞಾನಗಳಲ್ಲಿ ಸುಧಾರಿತ ತರಬೇತಿ ನೀಡುತ್ತಿದೆ. ಮೊದಲ ವರ್ಷದಲ್ಲಿ 320 ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು ಅವರೆಲ್ಲರೂ ಉತ್ತಮ ವೇತನದೊಂದಿಗೆ ಉದ್ಯೋಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.