ADVERTISEMENT

ಸಂಡೂರಿನಲ್ಲಿ ಕೌಶಲ ವಿಶ್ವವಿದ್ಯಾಲಯ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 16:04 IST
Last Updated 4 ನವೆಂಬರ್ 2025, 16:04 IST
<div class="paragraphs"><p>ಸಿಎಂ ಸಿದ್ದರಾಮಯ್ಯ</p></div>

ಸಿಎಂ ಸಿದ್ದರಾಮಯ್ಯ

   

ಬೆಂಗಳೂರು: ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ನೂತನ ಕೌಶಲ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಮಂಗಳವಾರ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಆಯೋಜಿಸಿದ್ದ ಮೂರು ದಿನಗಳ ‘ಬೆಂಗಳೂರು ಕೌಶಲ ಶೃಂಗಸಭೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

ರಾಜ್ಯದ ಜನಸಂಖ್ಯೆಯ ಶೇಕಡ 60ಕ್ಕಿಂತ ಹೆಚ್ಚು ಜನರು 35 ವರ್ಷದ ಒಳಗೆ ಇದ್ದಾರೆ. ಯುವಪೀಳಿಗೆಯನ್ನು ಸರಿಯಾದ ಕೌಶಲ ಮತ್ತು ಆತ್ಮವಿಶ್ವಾಸದಿಂದ ಸಜ್ಜುಗೊಳಿಸಬೇಕಿದೆ. ಉದ್ಯಾನ ನಗರಿ ಎನ್ನುವ ಹೆಗ್ಗಳಿಕೆಯಿಂದ ಸ್ಟಾರ್ಟ್ಅಪ್ ರಾಜಧಾನಿಯಾಗಿ ರೂಪಾಂತರಗೊಂಡಿರುವ ಬೆಂಗಳೂರು ನಗರ, ಈಗ ಭಾರತದ ಕೌಶಲ ರಾಜಧಾನಿ ಆಗಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ಕರ್ನಾಟಕ ಕೌಶಲಾಭಿವೃದ್ಧಿ ನೀತಿ 2025-32 ಅನ್ನು ಕೌಶಲ ಶೃಂಗಸಭೆ–2025ರ ಮೂಲಕ ಕಾರ್ಯರೂಪಕ್ಕೆ ತರಲಾಗುತ್ತಿದೆ. ಏಳು ವರ್ಷದ ಕಾರ್ಯತಂತ್ರದ ನೀಲನಕ್ಷೆಗೆ ₹4,432 ಕೋಟಿ ಅನುದಾನ ನೀಡಿ, ರಾಜ್ಯವನ್ನು ಕೌಶಲಭರಿತ ಹಾಗೂ ಭವಿಷ್ಯದ ಸವಾಲುಗಳಿಗೆ ಸನ್ನದ್ಧವಾಗಿಸುವ ಹಾಗೂ ಕಾರ್ಮಿಕ ಶಕ್ತಿಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಉದ್ದೇಶವಿದೆ’ ಎಂದು ವಿವರಿಸಿದರು.

2032ರ ವೇಳೆಗೆ ಸುಮಾರು 30 ಲಕ್ಷ ಯುವಜನರಿಗೆ ಕೌಶಲ ತರಬೇತಿ ನೀಡಲಾಗುವುದು. ಐಟಿಐಗಳಲ್ಲಿ ಮಹಿಳೆಯರ ಪ್ರವೇಶವನ್ನು ಶೇಕಡ 33ಕ್ಕೆ ಹೆಚ್ಚಿಸುವ ಹಾಗೂ ಅಂತರರಾಷ್ಟ್ರೀಯ ವಲಸೆ ಕೇಂದ್ರ ಮೂಲಕ ಜಾಗತಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಮೂರು ದಿನಗಳ ಶೃಂಗಸಭೆಯಲ್ಲಿ ವಿವಿಧ ಕ್ಷೇತ್ರದ ತಜ್ಞರು ತಮ್ಮ ಅನುಭವ ಹಂಚಿಕೊಳ್ಳಲು ಮುಕ್ತ ಅವಕಾಶ ನೀಡಲಾಗಿದೆ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಪಡೆದು ಹೊರ ಬರುತ್ತಿದ್ದು, ಉದ್ಯೋಗ ಹುಡುಕುವುದಕ್ಕಿಂತ ಸೃಷ್ಟಿ ಮಾಡುವತ್ತ ಗಮನ ಹರಿಸಿದ್ದೇವೆ’ ಎಂದರು.

ನೀಲನಕ್ಷೆ ಬಿಡುಗಡೆ: 2025–2032 ಹಾಗೂ ಕರ್ನಾಟಕ ವರ್ಕ್‌ಫೋರ್ಸ್‌ ಬ್ಲೂಪ್ರಿಂಟ್–2030 ಬಿಡುಗಡೆ ಮಾಡಲಾಯಿತು.

ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ, ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ, ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಮಾರಿಷಸ್‌ನ ಕೈಗಾರಿಕಾ ಸಚಿವ ಮುಹಮ್ಮದ್‌ ರೆಜಾ ಖಾಸ್ಸಂ ಉತೀಮ್, ಭಾರತ ಮತ್ತು ಏಷ್ಯಾ ಪೆಸಿಫಿಕ್‌ನ ವ್ಯವಸ್ಥಾಪಕ ನಿರ್ದೇಶಕ ಅಶುತೋಷ್‌ ಗುಪ್ತ, ಸಂಸದ ರಾಧಾಕೃಷ್ಣ ದೊಡ್ಡಮನಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ ನಾಯಕ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.